ಕರ್ನಾಟಕ

ಬಾಲಕಿಯನ್ನು ವೇಶ್ಯಾವಾಟಿಕೆಗೆ ದೂಡಿದ ಕಿಸ್ ಆಫ್ ಲವ್ ದಂಪತಿ

Pinterest LinkedIn Tumblr

State_16fff

ಬೆಂಗಳೂರು: ಅವರು ಬಾಯ್ಬಿಟ್ಟರೆ ನುಡಿ‘ಮುತ್ತು’, ಆದರೆ ಅದಕ್ಕೆ ಮಾರುಹೋದರೆ ಮಾನಕ್ಕೇ ಕುತ್ತು. ಏಕೆಂದರೆ ಅದು ‘ಕಿಸ್ ಆಫ್ ಲವ್’ ಆಯೋಜಕ ದಂಪತಿಯ ಕರಾಮತ್ತು..!

ಮುತ್ತಿನಂಥ ಮಾತುಗಳಿಂದ, ಹೆಚ್ಚಿನ ವೇತನದ ಕೆಲಸದ ಅನಿವಾರ್ಯತೆ ಇದ್ದ ಬಾಲಕಿಯನ್ನು ಮರುಳಾಗಿಸಿದ ಕಿಸ್ ಆಫ್ ಲವ್ ದಂಪತಿ, ಆಕೆಯನ್ನು ವೇಶ್ಯಾವಾಟಿಕೆಗೆ ದೂಡಿದ್ದಾರೆ. ಮನೆ ಕಡೆ ಕಡುಬಡತನ ಕಾಡುತ್ತಿದೆ. ತಾನು ಪಡೆಯುತ್ತಿದ್ದ ಸಂಬಳ ಸಾಲದು. ಹೆಚ್ಚಿನ ವೇತನ ಕೊಡುವ ಕೆಲಸಕ್ಕೆ ಸೇರಿಸುವಂತೆ ಅಂಗಲಾಚಿದ ಆ ಬಾಲಕಿಗೆ ಹಣದಾಸೆ ತೋರಿಸಿ ವೇಶ್ಯಾವಾಟಿಕೆಗೆ ನೂಕಿದ ಆಘಾತಕಾರಿ ಸಂಗತಿ ಕಿಸ್ ಆಫ್ ಲವ್ ದಂಪತಿ ಮತ್ತು ಆಕೆ ಗ್ಯಾಂಗ್​ನ್ನು ನಗರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ನಡೆಸುತ್ತಿರುವ ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ಕೋಲಾರ ಮೂಲದ ಅಪ್ರಾಪ್ತೆ, ಎಸ್ಸೆಸ್ಸೆಲ್ಸಿ ಮುಗಿಸಿ ಕಂಪ್ಯೂಟರ್ ತರಬೇತಿ ಪಡೆದು ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದಳು. ಹೊರಜಗತ್ತಿನ ಅರಿವೇ ಇಲ್ಲದ ಆಕೆ ಕಣ್ಣಿಗೆ ಮರದ ಮೇಲಿನ ಫಲಕವೊಂದರಲ್ಲಿ ‘ಕೆಲಸ ಖಾಲಿ ಇದೆ. ಎಸ್ಸೆಸ್ಸೆಲ್ಸಿ, ಪಿಯು ಮತ್ತು ಪದವಿ ಮುಗಿಸಿರುವ ಯುವ ಸಮೂಹಕ್ಕೆ ಕೈ ತುಂಬ ವೇತನ ಸಿಗುವ ಕೆಲಸ’ ಎಂದು ಜಾಹೀರಾತು ಕಂಡಿದೆ.

ತಕ್ಷಣ ಫಲಕದಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಉದ್ಯೋಗ ವಿನಿಮಯ ಕೇಂದ್ರ ನಡೆಸುತ್ತಿದ್ದ ಕಿಸ್ ಆಫ್ ಲವ್ ಆಯೋಜಕ ದಂಪತಿ ಗ್ಯಾಂಗ್​ನ ಸಹಚರರು ಕರೆ ಸ್ವೀಕರಿಸಿ, ಆಕೆಯನ್ನು ಕಚೇರಿಗೆ ಕರೆಸಿಕೊಂಡು ಆರ್.ಟಿ.ನಗರದಲ್ಲಿರುವ ಖಾಸಗಿ ಕಂಪನಿಯಲ್ಲಿ ‘ಡಾಟಾ ಎಂಟ್ರಿ’ ಕೆಲಸ ಕೊಡಿಸಿದ್ದರು. ಆದರೆ, ದುಡಿಮೆಯಿಂದ ಸಿಗುತ್ತಿದ್ದ ವೇತನ ಆಕೆಯ ಜೀವನಕ್ಕೆ ಸಾಕಾಗುತ್ತಿರಲಿಲ್ಲ. ಹೀಗಾಗಿ ಪಾಲಕರಿಗೆ ಒಂದಿಷ್ಟು ಹಣ ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಆಗ ಮತ್ತೆ ಉದ್ಯೋಗ ವಿನಿಮಯ ಕೇಂದ್ರಕ್ಕೆ ಮತ್ತೆ ಕರೆ ಮಾಡಿ ಹೆಚ್ಚಿನ ವೇತನ ಸಿಗುವ ಕೆಲಸ ಕೊಡಿಸುವಂತೆ ಮನವಿ ಮಾಡಿದ್ದಳು. ಹಣದ ವಿಚಾರವನ್ನೇ ಮುಂದಿಟ್ಟುಕೊಂಡು ಆಕೆಗೆ ವಂಚಕರು ಗಾಳ ಹಾಕಿದ್ದರು. ಬಾಲಕಿಯನ್ನು ಸಂರ್ಪಸಿದ್ದ ಬಂಧಿತ ಲಿನಿಶ್ ಮ್ಯಾಥ್ಯೂ, ಕೈತುಂಬ ಹಣ ಬೇಕಾದರೆ ಬೇರೊಂದು ಕೆಲಸ ಇದೆ. ನಿನ್ನ ಸಹಕಾರ ಬೇಕೆಂದು ಮನವೊಲಿಸಿದ್ದರು. ಆರಂಭದಲ್ಲಿ ಕೆಲಸ ಕೊಡಿಸಿ ಕೈ ಹಿಡಿದಿದ್ದ ಕಾರಣಕ್ಕೆ ಅವರನ್ನು ನಂಬಿ ತಲೆ ಆಡಿಸಿದ್ದಳು. ನಂತರ ಬಾಲಕಿಯನ್ನು ಕೇರಳ ಮತ್ತು ಕಮರ್ಷಿಯಲ್ ಸ್ಟ್ರೀಟ್​ನ ಲಾಡ್ಜ್​ನಲ್ಲಿ

ವೇಶ್ಯಾವಾಟಿಕೆಗೆ ದೂಡಿದ್ದ ಸಂಗತಿ ಬಂಧಿತರ ವಿಚಾರಣೆಯಿಂದ ಬಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಗ್ಯಾಂಗ್​ನಲ್ಲಿ ಇನ್ನೂ ಇದ್ದಾರೆ!
ವೇಶ್ಯಾವಾಟಿಕೆ ಪ್ರಕರಣದ ಸಂಬಂಧ ಕಿಸ್ ಆಪ್ ಲವ್ ಆಯೋಜಕ ದಂಪತಿ ಮತ್ತು ಸಹಚರರನ್ನು ವಶಕ್ಕೆ ಪಡೆದಿರುವ ಸಿಸಿಬಿ ಡಿಸಿಪಿ ಕೆ.ಎಸ್.ಜಿತೇಂದ್ರನಾಥ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಈ ಗ್ಯಾಂಗ್​ನಲ್ಲಿ ತೊಡಗಿರುವ ಇಬ್ಬರು ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದ್ದಾರೆ.

ಕೇರಳದಲ್ಲಿ ಬಂಧನ
ಸಾಮಾಜಿಕ ಜಾಲತಾಣದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ‘ಕಿಸ್ ಆಫ್ ಲವ್’ ಪ್ರತಿಭಟನೆ ಆಯೋಜಕ ದಂಪತಿ ಕೊಲ್ಲಂನ ರಾಹುಲ್ ಪಶುಪಾಲನ್, ಪಾಲಕ್ಕಾಡ್​ನ ರಶ್ಮಿ ಆರ್.ನಾಯರ್ ಹಾಗೂ ಸಹಚರರಾದ ಕಾಸರಗೋಡಿನ ಅಬ್ದುಲ್ ಖಾದರ್, ಆಶಿಕ್ ಮತ್ತು ಬೆಂಗಳೂರಿನ ಲಿನಿಶ್ ಮ್ಯಾಥ್ಯೂ ಎಂಬುವರನ್ನು ಕಳೆದ ತಿಂಗಳು ಕೇರಳ ಪೊಲೀಸರು ಬಂಧಿಸಿದ್ದರು. ಈ ಗ್ಯಾಂಗ್ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ಕೋರ್ಟ್ ಮುಂದೆ ಅಪ್ರಾಪ್ತೆ ಹಾಜರಾಗಿ ಬಂಧಿತರು ಹಣದಾಸೆ ತೋರಿಸಿ ವೇಶ್ಯಾವಾಟಿಕೆಗೆ ದೂಡಿದ್ದರು ಎಂದು ಹೇಳಿಕೆ ದಾಖಲಿಸಿದ್ದಳು. ಈ ಪ್ರಕರಣದ ಸಂಬಂಧ ಸಿಸಿಬಿ ವಿಶೇಷ ತಂಡ ಕೇರಳ ಪೊಲೀಸರಿಂದ ಆರೋಪಿಗಳನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
Share on FacebookTweet about this on TwitterShare on LinkedInEmail this to someone

Write A Comment