ಬೆಂಗಳೂರು, ಡಿ.26- ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್. ಹಿರೇಮಠ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಈಗಾಗಲೇ ನಾವು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದೇವೆ. ಇದು ವಿಚಾರಣೆಯ ಹಂತದಲ್ಲಿದೆ. ಈ ಹಂತದಲ್ಲಿ ನಡೆದಿರುವ ಹೆಚ್ಚವರಿ ಮಾಹಿತಿ ಹಾಗೂ ನಂತರದ ಬೆಳವಣಿಗೆಯನ್ನು ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು. ಉಪ ಲೋಕಾಯುಕ್ತ ಸ್ಥಾನಕ್ಕೆ ನ್ಯಾ.ಕೆ.ಎಲ್. ಮಂಜುನಾಥ್ ಅವರ ಹೆಸರನ್ನು ಶಿಫಾರಸು ಮಾಡುವ ಮೂಲಕ ಸರ್ಕಾರ ತಪ್ಪು ಮಾಡಿದೆ.
ಆದ್ದರಿಂದ ಮುಂದೆ ಸಾಂವಿಧಾನಿಕ ಸ್ಥಾನಗಳಿಗೆ ನೇಮಿಸುವಾಗ ಸೂಕ್ತ ವ್ಯಕ್ತಿಗಳನ್ನೇ ನೇಮಿಸಬೇಕು ಎಂದು ಒತ್ತಾಯಿಸಿದ ಹಿರೇಮಠ್, ಮುಂದಿನ ಲೋಕಾಯುಕ್ತರನ್ನು ನೇಮಿಸುವಾಗ ಹಿಂದಿನ ತಪ್ಪುಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು ಹಾಗೂ ಪ್ರಾಮಾಣಿಕರನ್ನು ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ಖಾಲಿ ಇರುವ ಕರ್ನಾಟಕ ಲೋಕಾಯುಕ್ತ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ನೇಮಿಸುವ ಮೂಲಕ ಜನರಿಗೆ ಈ ಸಂಸ್ಥೆಯ ಮೇಲಿದ್ದ ನಂಬಿಕೆಯನ್ನು ಪುನಃ ಬರುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಉಪ ಲೋಕಾಯುಕ್ತರಾಗಿ ನೇಮಕವಾಗಿರುವ ನ್ಯಾ. ಆನಂದ್ ಅವರ ಆಯ್ಕೆಯಲ್ಲಿ ಸಂವಿಧಾನದ ಮುಖ್ಯಸ್ಥರು ಒಗ್ಗೂಡಿ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಿರುವುದು ರಾಜ್ಯದ ಜನತೆಗೆ ಸಂತೋಷ ತಂದಿದೆ ಎಂದು ಹೇಳಿದರು. ಅಕ್ರಮ ಗಣಿಗಾರಿಕೆಯಿಂದ ಸಂಪಾದಿಸಿದ ಪ್ರತಿಯೊಂದು ಹಣವನ್ನು ಸರ್ಕಾರ ವಸೂಲಿ ಮಾಡಬೇಕು. ಅಕ್ರಮ ಗಣಿಗಾರಿಕೆ ಬಗ್ಗೆ ಹಿಂದಿನ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ನೀಡಿರುವ ಮೊದಲೆನ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಹಿರೇಮಠ್ ಒತ್ತಾಯಿಸಿದರು.