ಕರ್ನಾಟಕ

ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಕಟ್ಟದೆ ಪೋಲೀಸರ ಜೊತೆ ಜಗಳಕ್ಕಿಳಿದರೆ ಜೈಲು ಗ್ಯಾರಂಟಿ

Pinterest LinkedIn Tumblr

sanchariಬೆಂಗಳೂರು, ಡಿ.27-  ಸಂಚಾರ ನಿಯಮ ಉಲ್ಲಂಘಿಸಿದಾಗ ದಂಡ ಪಾವತಿಸದೆ ಪೊಲೀಸರ ಜತೆ ವಾಗ್ವಾದ ನಡೆಸುವುದು ಧಮ್ಕಿ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆಗೆ  ಮುಂದಾಗುವವರನ್ನು ಜೈಲಿಗಟ್ಟಲಾಗುವುದು ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಎಂ.ಎ.ಸಲೀಂ ಎಚ್ಚರಿಸಿದ್ದಾರೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆ ಐಪಿಸಿ ಸೆಕ್ಷನ್ 353ರಡಿ ಕನಿಷ್ಠ 2 ವರ್ಷ ಜೈಲು. ಅದೇ ರೀತಿ ಧಮ್ಕಿ, ಅವಾಚ್ಯ ಶಬ್ಧದಿಂದ ನಿಂದನೆಗೆ ಐಪಿಸಿ 503ರಡಿ ಕನಿಷ್ಠ 2 ವರ್ಷ ಶಿಕ್ಷೆ, ಹಲ್ಲೆ ಮಾಡಿದರೆ ಐಪಿಸಿ 332ರಡಿ 3 ವರ್ಷ ಜೈಲು ಜತೆಗೆ ದಂಡ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಸಂಚಾರಿ ಪೊಲೀಸರ ಮೇಲಾಗಿರುವ ಹಲ್ಲೆ, ಧಮ್ಕಿ ಹಾಕಿದ 75 ಪ್ರಕರಣಗಳು ದಾಖಲಾಗಿರುವುದು ಆತಂಕಕಾರಿ ಸಂಗತಿಯಾಗಿದೆ. ರಸ್ತೆ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ್ದಕ್ಕೆ, ಕುಡಿದು ವಾಹನ ಚಾಲನೆ ಮಾಡುತ್ತಿದ್ದ ಕಾರಣಕ್ಕೆ, ಪ್ರಭಾವಿ ರಾಜಕಾರಣಿಗಳ ಕಾರು ಚಾಲನೆ ಮಾಡುವಾಗ ನಿಯಮ ಪಾಲನೆ ಮಾಡದ್ದನ್ನು ಪ್ರಶ್ನಿಸಿದ್ದಕ್ಕೆಲ್ಲಾ ಪೊಲೀಸರ ಮೇಲೆ ಹಲ್ಲೆಗಳಾಗಿವೆ. ಪೊಲೀಸರು ಪ್ರಶ್ನೆ ಮಾಡುವುದೇ ತಪ್ಪು ಅನ್ನುವಂತೆ ನಡೆದುಕೊಳ್ಳುತ್ತಿರುವವರಲ್ಲಿ ಹೆಚ್ಚಿನವರು ವಿದ್ಯಾವಂತರು ಅನ್ನುವುದು ಇನ್ನೊಂದು ದುರಂತವಾಗಿದ್ದು ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ಅ. 16ರಂದು ಟಿನ್ ಫ್ಯಾಕ್ಟರಿ ಬಳಿ ಕೆ.ಆರ್.ಪುರ ಸಂಚಾರ ಠಾಣೆ ಎಸ್‌ಐ ಮಹೇಶ ಕನಕಗಿರಿ, ಎಸ್ಸೈ ನಾಗರಾಜು ಮೇಲೆ ಸಾಫ್ಟ್‌ವೇರ್ ಎಂಜಿನಿಯರ್ ರಾಘವೇಂದ್ರ ಹಲ್ಲೆ ನಡೆಸಿದ್ದ ಅದೇ ತಿಂಗಳ 30ರಂದು ದೊಮ್ಮಲೂರು ವರ್ತುಲ ರಸ್ತೆಯಲ್ಲಿ ಹಲಸೂರು ಸಂಚಾರ ಠಾಣೆ ಎಸ್ಸೈ ರವೀಶ್ ಮೇಲೆ ವಿದ್ಯಾರ್ಥಿಗಳನ್ನು ಹಲ್ಲೆನಡೆಸಿದ್ದರು. ಇದಲ್ಲದೆ ನ. 17ರಂದು ಕೆ.ಎಸ್. ಲೇಔಟ್ ಸಂಚಾರ ಠಾಣೆ ಮುಖ್ಯಪೇದೆ  ನಾರಾಯಣಪ್ಪ ಮೇಲೆ ಜಲಮಂಡಳಿ ಗುತ್ತಿಗೆ ನೌಕರ ನವೀನ್ ನಡೆಸಿದ ಹಲ್ಲೆ. ಡಿ. 15ರಂದು ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ರಾಜಾಜಿನಗರ ಸಂಚಾರ ಠಾಣೆ ಪಿಐ ಕೆ.ವಿ.ಶ್ರೀಧರ್ ಅವರಿಗೆ ರಿಯಲ್ ಎಸ್ಟೇಟ್ ಏಜೆಂಟ್ ಹೆಚ್.ಪಿ.ಹರಿಪ್ರಸಾದ್ ಧಮ್ಕಿ ಹಾಕಿದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಜೈಲಿಗಟ್ಟುವ ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸಂಚಾರ ಪೊಲೀಸರು ಹೆಲ್ಮೆಟ್ ರಹಿತ ಚಾಲನೆ, ಪಾನಮತ್ತ ಚಾಲನೆ, ಪಾದಾಚಾರಿ ಮಾರ್ಗದಲ್ಲಿ ವಾಹನ ಚಾಲನೆ, ಆಟೋ ರಿಕ್ಷಾಗಳ ವಿರುದ್ಧ  ನಿರಂತರ  ವಿಶೇಷ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಅಪಘಾತಗಳಿಗೆ ತುತ್ತಾಗುತ್ತಿದ್ದವರ ಸಂಖ್ಯೆ ಇಳಿಮುಖವಾಗಿದ್ದು ದಂಡ ವಸೂಲಿ ಪ್ರಮಾಣ ಗಣನೀಯ ಹೆಚ್ಚಳ ಕಂಡುಬಂದಿದೆ .  ಕಳೆದ ವರ್ಷ 5,005 ಅಪಘಾತ ಸಂಭವಿಸಿ 732 ಮಂದಿ ಮೃತಪಟ್ಟಿದ್ದರು.

ಈ ವರ್ಷ ನ. 30ರವರೆಗೆ 4,457 ಅಪಘಾತ ಸಂಭವಿಸಿದ್ದು, ಸಾವಿನ ಸಂಖ್ಯೆ 667ಕ್ಕೆ ಇಳಿಕೆಯಾಗಿದೆ ಎಂದು ಸಲೀಂ ಅವರು ವಿವರ ನೀಡಿದ್ದಾರೆ.

Write A Comment