ಕರ್ನಾಟಕ

ಯಾರಾಗಲಿದ್ದಾರೆ ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ ..?

Pinterest LinkedIn Tumblr

viಬೆಂಗಳೂರು, ಡಿ.27-ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ  ಆಯ್ಕೆಯನ್ನು ನಾಳೆ ಸಂಜೆ ನಡೆಯಲಿರುವ ಸಂಪುಟ ಸಭೆಯಲ್ಲಿ ಅಂತಿಮಗೊಳಿಸಲಾಗುತ್ತದೆ. ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರ ಮೂರು ತಿಂಗಳ ವಿಸ್ತರಣಾವಧಿ ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದ್ದು, ರಾಜ್ಯ ಸರ್ಕಾರ ಹೊಸ ಮುಖ್ಯ ಕಾರ್ಯದರ್ಶಿಯನ್ನು ನೇಮಕ ಮಾಡಬೇಕಿದೆ. ಮುಖ್ಯ ಕಾರ್ಯದರ್ಶಿ ಹುದ್ದೆಗೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಉಮೇಶ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಕೆ.ಪಟ್ಟನಾಯಕ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಈ ಮೂವರು ಅಧಿಕಾರಿಗಳ ನಡುವೆ ಸೇವಾ ಹಿರಿತನದಲ್ಲಿ ಉಮೇಶ್ ಅವರು  ಮೊದಲಿಗರಾಗಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲೇ ಮುಖ್ಯ ಕಾರ್ಯದರ್ಶಿಯಿಂದ ವಯೋನಿವೃತ್ತಿ ಹೊಂದಿದ್ದ ಕೌಶಿಕ್ ಮುಖರ್ಜಿ ಅವರಿಗೆ ಮತ್ತೆ ಮೂರು ತಿಂಗಳ ಕಾಲ  ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲೇ ಸರ್ಕಾರ ಮುಂದುವರೆಸಿತ್ತು.

ಕನ್ನಡಿಗರಾದ ವಿ.ಉಮೇಶ್ ಅವರನ್ನು ಮುಖ್ಯ ಕಾರ್ಯದರ್ಶಿ ಹುದ್ದೆಗೆ ಪರಿಗಣಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಹೆಚ್ಚಿನ ಒತ್ತಡ ಹೇರಲಾಗುತ್ತಿದೆ. ಸುದೀರ್ಘ ಅನುಭವವಿರುವ ಕನ್ನಡಿಗರಿಗೆ ಮುಖ್ಯಕಾರ್ಯದರ್ಶಿ ಹುದ್ದೆ ನೀಡಬೇಕು. ಒಂದು ವೇಳೆ ಈಗ ಮುಖ್ಯಕಾರ್ಯದರ್ಶಿ ಅವಕಾಶ ತಪ್ಪಿದರೆ ಆ ಹುದ್ದೆಗೆ ಮತ್ತೊಬ್ಬ ಕನ್ನಡಿಗರು ಬರಬೇಕಾದರೆ ಕನಿಷ್ಠ 15 ವರ್ಷಗಳು ಕಾಯಬೇಕಾಗುತ್ತದೆ.
ಉಮೇಶ್ ಅವರನ್ನೇ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಪರಿಗಣಿಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ಸೇರಿದಂತೆ ವಿವಿಧ ಸಂಘಟನೆಗಳು,  ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್  ಮತ್ತು ಮುಖ್ಯಮಂತ್ರಿ ಮೇಲೆ ಒತ್ತಡ ತಂದಿವೆ.

ಅದೇ ರೀತಿ ರತ್ನಪ್ರಭಾ ಅವರನ್ನು ಮುಖ್ಯ ಕಾರ್ಯದರ್ಶಿಗೆ ಪರಿಗಣಿಸುವಂತೆ ದಲಿತ ಪರ ಸಂಘಟನೆಗಳು ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಿವೆ. ಮತ್ತೆ ಕೌಶಿಕ್ ಮುಖರ್ಜಿಯವರನ್ನು ಮೂರು ತಿಂಗಳ ಕಾಲ ಮುಂದುವರೆಸಲಾಗುತ್ತದೆ ಎಂಬ ವದಂತಿ ಹರಡಿದೆಯಾದರೂ ಆ ನಿಟ್ಟಿನಲ್ಲಿ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ. ಸೇವಾ ಹಿರಿತನದಲ್ಲಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಅಧ್ಯಕ್ಷರಾಗಿರುವ ಅರವಿಂದ್ ಜಾಧವ್ ಮೊದಲ ಸ್ಥಾನದಲ್ಲಿದ್ದಾರೆ.  ಸೇವಾ ಹಿರಿತನದಲ್ಲಿ 2ನೇ ಸ್ಥಾನದಲ್ಲಿರುವ ಡಾ.ಅನೂಪ್ ಕೆ.ಪೂಜಾರಿ, 3ನೇ ಸ್ಥಾನದಲ್ಲಿರುವ ಡಾ.ಉಪೇಂದ್ರ ತ್ರಿಪಾಠಿ ಹಾಗೂ 4ನೆ ಸ್ಥಾನದಲ್ಲಿರುವ ಸುಭಾಷ್‌ಚಂದ್ರ ಕುಂಟಿಯಾ ಅವರು ಕೇಂದ್ರ ಸರ್ಕಾರದ ಸೇವೆಯಲ್ಲಿದ್ದು, ಮುಖ್ಯಕಾರ್ಯದರ್ಶಿ ಹುದ್ದೆಗೆ ಆಸಕ್ತಿ ಹೊಂದಿಲ್ಲ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಈ ನಾಲ್ವರು ಅಧಿಕಾರಿಗಳನ್ನು ಹೊರತುಪಡಿಸಿದರೆ ಸೇವಾ ಹಿರಿತನದಲ್ಲಿ ಉಮೇಶ್ ಅವರೇ ಮೊದಲಿಗರಾಗಿದ್ದಾರೆ. ಆದರೂ ರಾಜ್ಯ ಸರ್ಕಾರ ಸೇವಾ ಜೇಷ್ಠತೆಯಲ್ಲಿ ಕಿರಿಯರಾಗಿರುವವರನ್ನು ಕೂಡ ಮುಖ್ಯಕಾರ್ಯದರ್ಶಿ ಹುದ್ದೆಗೆ ಪರಿಗಣಿಸಲು ಅವಕಾಶವಿದೆ. ಈ ಹಿಂದೆ ಕೂಡ ಇಂತಹ ಘಟನೆಗಳು ಜರುಗಿವೆ.

ಸರ್ಕಾರದ ಉನ್ನತ ಮೂಲಗಳ ಪ್ರಕಾರ, ಮುಖ್ಯ ಕಾರ್ಯದರ್ಶಿ ಹುದ್ದೆಗೆ ರತ್ನಪ್ರಭಾ ಅಥವಾ ಪಟ್ಟನಾಯಕ್ ಅವರನ್ನೇ ಪರಿಗಣಿಸಲು ಮುಖ್ಯಮಂತ್ರಿ ಹೆಚ್ಚು ಒಲವು ತೋರಿದ್ದಾರೆ. ನಾಳೆ ಸಂಜೆ ನಡೆಯಲಿರುವ ಸಂಪುಟ ಸಭೆಯಲ್ಲಿ ಮುಖ್ಯಕಾರ್ಯದರ್ಶಿ ಹುದ್ದೆಗೆ ಯಾರನ್ನು ಪರಿಗಣಿಸಬೇಕೆಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ರಾಜ್ಯ ಸರ್ಕಾರದ ಪ್ರತಿಷ್ಠಿತ ಹುದ್ದೆಯಾದ ಮುಖ್ಯಕಾರ್ಯದರ್ಶಿ  ಹುದ್ದೆ ಈ ಮೂವರಲ್ಲಿ ಯಾರಿಗೆ ಒಲಿಯಲಿದೆಯೋ ಕಾದುನೋಡಬೇಕಿದೆ.

Write A Comment