ಕರ್ನಾಟಕ

ಕಸ ವಿಲೇವಾರಿ ನಿಲ್ಲಿಸಿ, ಇಲ್ಲವೇ ವಿಷ ಕೊಡಿ!

Pinterest LinkedIn Tumblr

kasa

ಬೆಂಗಳೂರು: ಇಲ್ಲಿಗೆ ಕಸ ಕಳುಹಿಸುವುದಕ್ಕಿಂತ ನಮಗೆ ವಿಷ ಕೊಡಿ. ನಿತ್ಯ ಕಸದಿಂದ ಅನಾರೋಗ್ಯ ಬೀಳುವುದಕ್ಕಿಂತ ಒಂದೇ ಸಲ ಸಾಯುತ್ತೇವೆ..!

ಇದು.. ಕನ್ನಳ್ಳಿ ಕಸ ಸಂಸ್ಕರಣಾ ಘಟಕಕ್ಕೆ ಮಂಗಳವಾರ ಭೇಟಿ ನೀಡಿದ್ದ ಬಿಬಿಎಂಪಿ ಆಯುಕ್ತರ ಮುಂದೆ ಘಟಕದ ಸುತ್ತಲಿನ ಗ್ರಾಮಸ್ಥರು ತೋಡಿಕೊಂಡ ಅಳಲು. ತ್ಯಾಜ್ಯ ಸಂಸ್ಕರಣಾ ಘಟಕದ ಕಾರ್ಯನಿರ್ವಹಣೆ ಬಗ್ಗೆ ಆಯುಕ್ತ ಜಿ.ಕುಮಾರನಾಯಕ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಕನ್ನಳ್ಳಿ ಮತ್ತು ಸೀಗೇಹಳ್ಳಿ ಘಟಕಗಳ ಸುತ್ತಲಿನ ಗ್ರಾಮದ ಜನರು ಮುತ್ತಿಗೆ ಹಾಕಿ, ಕಸ ಸಂಸ್ಕರಣಾ ಘಟಕದ ಕಾರ್ಯವನ್ನು ಕೂಡಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.

ಕಸ ಸಂಸ್ಕರಣಾ ಘಟಕ ಆರಂಭವಾದಾಗಿನಿಂದ ನಮ್ಮ ಜೀವನವೇ ನರಕವಾಗಿದೆ. ಘಟಕದಿಂದ ಹೊರಸೂಸುವ ದುರ್ನಾತದಿಂದ ಉಸಿರಾಡು ವುದು ಕಷ್ಟವಾಗಿದೆ. ನಿತ್ಯ ಒಬ್ಬರಾದರೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನೀರಿನ ಮೂಲಗಳು ಕಲುಷಿತಗೊಂಡು ಕುಡಿಯಲು ನೀರು ಸಿಗದಂಥ ಪರಿಸ್ಥಿತಿ ನಿರ್ವಣವಾಗಿದೆ. ಘಟಕವನ್ನು ಸ್ಥಗಿತಗೊಳಿಸಿ, ಇಲ್ಲವೇ ನಿವಾಸಿಗಳಿಗೆೆ ವಿಷ ನೀಡಿ ಎಂದು ಸ್ಥಳೀಯರಾದ ಚನ್ನಪ್ಪ ಎಂಬá-ವರು ತರಾಟೆ ತೆಗೆದುಕೊಂಡರು.

ನಮ್ಮನ್ನು ಜೈಲಿಗೆ ಹಾಕಿ: ಒಂದು ವಾರದ ಹಿಂದೆ ಘಟಕ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿತ್ತು. ಆ ವೇಳೆ ಯಾರೂ ಸ್ಪಂದಿಸಲಿಲ್ಲ. ಹೀಗಾಗಿ ಜ. 3ರವರೆಗೆ ಗಡುವು ನೀಡಿದ್ದೆವು. ಜ. 3ರೊಳಗೆ ಘಟಕದ ಕಾರ್ಯ ಸ್ಥಗಿತದ ಕುರಿತು ನಿರ್ಧಾರ ತೆಗೆದುಕೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು. ನಮ್ಮನ್ನು ಜೈಲಿಗೆ ಹಾಕಿದರೂ ತೊಂದರೆಯಿಲ್ಲ. ಇಲ್ಲಿ ವಾಸಿಸುವುದಕ್ಕಿಂತ ಜೈಲಿನಲ್ಲೇ ನೆಮ್ಮದಿಯಾಗಿರುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತಕುಮಾರನಾಯಕ್, ಸಮಸ್ಯೆ ಬಗ್ಗೆ ಅರಿವಿದೆ. ಘಟಕದಿಂದ ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತದೆ. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ರ್ಚಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ತ್ಯಾಜ್ಯ ಘಟಕ ನಿಗಾಕ್ಕೆ ಸ್ಥಳೀಯ ಸಮಿತಿ

ಬೆಂಗಳೂರು: ತ್ಯಾಜ್ಯ ಸಂಸ್ಕರಣಾ ಘಟಕಗಳ ಸಮರ್ಪಕ ನಿರ್ವಹಣೆ ಮತ್ತು ಸ್ಥಳೀಯರ ಪ್ರತಿಭಟನೆ ನಿಯಂತ್ರಿಸಲು ಘಟಕಗಳ ಸುತ್ತಲಿನ ಗ್ರಾಮಸ್ಥರನ್ನೊಳಗೊಂಡ ಸಮಿತಿ ರಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕುಮಾರನಾಯಕ್ ತಿಳಿಸಿದ್ದಾರೆ.

ಕನ್ನಳ್ಳಿ, ಸೀಗೇಹಳ್ಳಿ ಮತ್ತು ದೊಡ್ಡಬಿದರಕಲ್ಲು ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಮಂಗಳವಾರ ಭೇಟಿ ನೀಡಿ ಘಟಕಗಳ ಕಾರ್ಯಕ್ಷಮತೆ ಪರಿಶೀಲಿಸಿ ಮಾತನಾಡಿದರು. ಕಸದ ಸಮಸ್ಯೆ ನಿವಾರಣೆಗೆ ಕಸ ವಿಂಗಡಣೆ ಕಡ್ಡಾಯ. ಜತೆಗೆ, ತ್ಯಾಜ್ಯ ಘಟಕಗಳಲ್ಲಿ ಸಂಸ್ಕರಣೆಯೂ ಸುಲಭವಾಗಲಿದೆ ಎಂದರು.

ಕಾರ್ಯವೈಖರಿ ಪರಿಶೀಲನೆ: ಈಗಾಗಲೇ ಕಾರ್ಯ ಆರಂಭಿಸಿರುವ 6 ಸಂಸ್ಕರಣಾ ಘಟಕಗಳ ಕಾರ್ಯವೈಖರಿ ಬಗ್ಗೆ ನಿಗಾವಹಿಸಲು ಸ್ಥಳೀಯರನ್ನೊಳಗೊಂಡ ಸಮಿತಿ ರಚಿಸಲು ತೀರ್ವನಿಸಲಾಗಿದೆ. ಬಿಬಿಎಂಪಿ ಅಧಿಕಾರಿಗಳು, ತಜ್ಞರು ಹಾಗೂ ಸ್ಥಳೀಯರು ಸಮಿತಿಯಲ್ಲಿರಲಿದ್ದಾರೆ ಎಂದು ತಿಳಿಸಿದರು.

ಹೆಚ್ಚು ಕಸ ಉತ್ಪಾದಿಸುವರ ಮೇಲೆ ಗಮನ

ಹೆಚ್ಚು ಕಸ ಉತ್ಪತ್ತಿ ಮಾಡುವ ಉದ್ಯಮಗಳ ಮೇಲೆ ನಿಗಾ ವಹಿಸಲಾಗುವುದು. ಅಪಾರ್ಟ್ ಮೆಂಟ್​ಗಳು, ಹೋಟೆಲ್ ಮತ್ತಿತರ ಉದ್ದಿಮೆಗಳು (ಬಲ್ಕ್ ಜನರೇಟರ್) ತಾವೇ ಕಸ ಸಂಸ್ಕರಣೆ ಮಾಡುವುದು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಬಲ್ಕ್ ಜನರೇಟರ್​ಗಳಿಗೆ ಅದು ಸಾಧ್ಯವಾಗದಿದ್ದರೆ ಕಸವನ್ನು ಬಿಬಿಎಂಪಿ ಸಂಸ್ಕರಣಾ ಘಟಕಗಳಿಗೆ ಕಳುಹಿಸಬಹುದು. ಆದರೆ, ಅದಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆ ಎಂದರು.

ಬಿಬಿಎಂಪಿಯಿಂದ ದಂಡ ಪ್ರಯೋಗ

ಬೆಂಗಳೂರು: ತ್ಯಾಜ್ಯ ವಿಂಗಡಣೆಯನ್ನು ಕಡ್ಡಾಯಗೊಳಿಸಿರುವ ಬಿಬಿಎಂಪಿ ಇದೀಗ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಎರಡು ಕಸದ ಬುಟ್ಟಿ ಇಟ್ಟುಕೊಳ್ಳದ ಮನೆಗಳಿಗೆ ದಂಡ ವಿಧಿಸಲು ಆರಂಭಿಸಿದೆ. ಎಚ್​ಎಸ್​ಆರ್ ಲೇಔಟ್​ನಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ತಲಾ 200 ರೂ. ದಂಡ ವಿಧಿಸಲಾಗಿದೆ.

ನಗರದ ಕಸದ ಸಮಸ್ಯೆ ನಿವಾರಣೆಗೆ ನಾನಾ ಕಸರತ್ತು ಮಾಡುತ್ತಿರುವ ಬಿಬಿಎಂಪಿ ಅಧಿಕಾರಿಗಳು ಇದೀಗ ಕಸ ವಿಂಗಡಣೆ ಮಾಡದವರಿಗೆ ದಂಡ ವಿಧಿಸಲು ಕ್ರಮ ಕೈಗೊಂಡಿದ್ದಾರೆ.

ಎಚ್​ಎಸ್​ಆರ್ ಲೇಔಟ್ 1ನೇ ಸೆಕ್ಟರ್​ನ 23ನೇ ಮುಖ್ಯರಸ್ತೆಯಲ್ಲಿನ ಮನೆಗಳಲ್ಲಿ ಕಸ ವಿಂಗಡಣೆಗೆ ಕೈಗೊಳ್ಳಲಾಗಿರುವ ಕ್ರಮದ ಬಗ್ಗೆ ಮೂರು ದಿನಗಳ ಹಿಂದೆ ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ರಸ್ತೆಯಲ್ಲಿನ ಬಹುತೇಕ ಮನೆಗಳು ಕಸ ವಿಂಗಡಣೆಗೆ ಎರಡು ಕಸದ ಬುಟ್ಟಿ ಇಡದಿರುವುದು ಕಂಡು ಬಂದಿದೆ. ಹೀಗಾಗಿ ಪ್ರತಿ ಮನೆಗೂ ತಲಾ 200 ರೂ. ದಂಡ ವಿಧಿಸಿ ಹಸಿ ಮತ್ತು ಒಣ ಕಸವನ್ನು ವಿಂಗಡಿಸಲು ಪ್ರತ್ಯೇಕ ಕಸದ ಬುಟ್ಟಿ ಇಡುವಂತೆ ತಿಳಿವಳಿಕೆ ನೀಡಿದ್ದಾರೆ. ಅಲ್ಲದೆ, ಮುಂದೆ ಮತ್ತೊಮ್ಮೆ ಪರಿಶೀಲನೆ ನಡೆಸಿದಾಗ ಕಸ ವಿಂಗಡಣೆಗೆ ಕ್ರಮ ಕೈಗೊಳ್ಳದಿದ್ದರೆ 500ರಿಂದ 1 ಸಾವಿರ ರೂ.ವರೆಗೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬೆಸ್ಟ್ ಬೆಂಗಳೂರಿಗಾಗಿ ವಿಜಯವಾಣಿ ನಡೆಸಿದ ಅಭಿಯಾನದ ಸಂದರ್ಭದಲ್ಲಿಯೂ ಮೂಲದಲ್ಲೇ ಕಸ ವಿಂಗಡಣೆ ಮಾಡಲು ಕ್ರಮ ಕೈಗೊಳ್ಳುವಂತೆ ಒತ್ತಡ ತಂದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಜ.1ರಿಂದ ಕಟ್ಟುನಿಟ್ಟಿನ ಜಾರಿ

ಎಚ್​ಎಸ್​ಆರ್ ಬಡಾವಣೆಯಲ್ಲಿ ಕೈಗೊಂಡಿರುವ ಕ್ರಮವನ್ನು ನಗರದ ಎಲ್ಲ ವಾರ್ಡ್​ಗಳಲ್ಲಿ ಕೈಗೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಕಸ ವಿಂಗಡಣೆ ಮಾಡದಿದ್ದರೆ, ಎಲ್ಲೆಂದರಲ್ಲಿ ಕಸ ಎಸೆದರೆ ಕೆಎಂಸಿ ಕಾಯ್ದೆ ಅನ್ವಯ ದಂಡ ವಿಧಿಸಲಾಗುತ್ತದೆ. ಹೊಸ ವರ್ಷದಿಂದ ದಂಡ ವಿಧಿಸುವ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಧಿಕಾರಿಗಳು ತೀರ್ವನಿಸಿದ್ದಾರೆ.

Write A Comment