ಕರ್ನಾಟಕ

ಇನ್ನು ಮೂರು ತಿಂಗಳಲ್ಲಿ ಜಾತಿ ಸಮೀಕ್ಷಾ ವರದಿ ಸಲ್ಲಿಕೆ

Pinterest LinkedIn Tumblr

siddduಬೆಂಗಳೂರು, ಡಿ.30- ಜಾತಿ ಜನಗಣತಿ ಕಾರ್ಯ ಅಂತಿಮ ಹಂತದಲ್ಲಿದ್ದು, ಇನ್ನು ಮೂರು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ. ಅನಂತರ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳನ್ನು ಈ ವರದಿಯ ಆಧಾರದ ಮೇಲೆ ರೂಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ಹಿಂದುಳಿದವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ದೇವರಾಜು ಅರಸು ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಅರಸು ಮತ್ತು ಆಧುನಿಕ ಕರ್ನಾಟಕ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತ ನಾಡಿದ ಅವರು, ಬೆಂಗಳೂರಿನಲ್ಲಿ ಜಾತಿ ಜನಗಣತಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಎರಡನೇ ಸುತ್ತಿನ ಗಣತಿ ಕಾರ್ಯ ನಡೆಸುವಂತೆ ಸೂಚಿಸಿರುವುದಾಗಿ ಹೇಳಿದರು.

2011ರ ಜಾತಿಜನಗಣತಿಯಂತೆ ರಾಜ್ಯದಲ್ಲಿ 6ಕೋಟಿ 11ಲಕ್ಷ ಕುಟುಂಬಗಳಿವೆ. ಇತ್ತೀಚೆಗೆ ಇನ್ನಷ್ಟು ಜನ ಸಂಖ್ಯೆ ಹೆಚ್ಚಾಗಿದೆ. ರಾಜ್ಯ ಸರ್ಕಾರ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ 5ಕೋಟಿ 97ಲಕ್ಷ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ 78ಲಕ್ಷ ಜನರನ್ನು ಸಮೀಕ್ಷೆ ಮಾಡಲಾಗಿದೆ. ಇನ್ನೂ 12, 13 ಲಕ್ಷ ಜನರ ಸಮೀಕ್ಷೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಎರಡನೇ ಸುತ್ತಿನ ಸಮೀಕ್ಷೆ ನಡೆಸುವಂತೆ ನಿನ್ನೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸೂಚನೆ ನೀಡಿದ್ದೇನೆ. ಎರಡು-ಮೂರು ತಿಂಗಳ ಅವಧಿಯೊಳಗೆ ಜಾತಿಜನಗಣತಿಯ ಸಮಗ್ರ ವರದಿ ಸರ್ಕಾರದ ಕೈ ಸೇರಲಿದೆ. ಅನಂತರ ವರದಿಯನ್ನು ಜಾರಿಗೊಳಿಸಿ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳನ್ನು ಜಾತಿಜನಸಂಖ್ಯೆಗೆ ಅನುಗುಣವಾಗಿ ರೂಪಿಸುವ ಮೂಲಕ ಶೋಷಿತ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಮೀಸಲಾತಿಯಿಂದ ಮೆರಿಟ್ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂಬ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ ಸಿಎಂ, ಸುಮಾರು 5ಸಾವಿರ ವರ್ಷಗಳಿಂದ ಶಿಕ್ಷಣ ಪಡೆದಿರುವವರು ಬುದ್ದಿವಂತರಾಗಿರುವುದರಲ್ಲಿ ಸಾಧನೆ ಏನಲ್ಲ. ಸ್ವತಂತ್ರ ನಂತರ ಶಿಕ್ಷಣ ಪಡೆಯಲಾರಂಭಿಸಿರುವ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕು. ಹೀಗಾಗಿ ಸಮಾನತೆ ಬರುವವರೆಗೂ ಮೀಸಲಾತಿ ಅಗತ್ಯ ಎಂದು ಹೇಳಿದರು.

ಜನ ನನ್ನನ್ನು ದೇವರಾಜ ಅರಸು ಎಂದು ಗುರುತಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದು ಸರಿಯಲ್ಲ. ನಾನು ನಾನೇ. ದೇವರಾಜು ಅರಸರಿಗೆ ಅವರೇ ಸಾಟಿ. ಅವರಂತೆ ಆಗಲು ಯಾರಿಗೂ ಸಾಧ್ಯವಿಲ್ಲ ಎಂದು ಸಿಎಂ ತಿಳಿಸಿದರು.

ದೇವರಾಜ ಅರಸು ಕಾಲದ ಭೂ ಸುಧಾರಣೆ ಕಾಯ್ದೆ ಜಾರಿಯ ಕ್ರಮಗಳನ್ನು ಕೊಂಡಾಡಿದರು. ಜೀತಪದ್ಧತಿ, ಮಲ ಹೊರುವ ಪದ್ಧತಿ ನಿಷೇಧ, ಋಣಮುಕ್ತ ಕಾಯ್ದೆಯ ಜಾರಿ ಸೇರಿದಂತೆ ದೇವರಾಜ ಅರಸು ಅವರ ಸಾಮಾಜಿಕ ಕಾರ್ಯ ಕ್ರಮಗಳನ್ನು ಸಿದ್ದರಾಮಯ್ಯ ಬಣ್ಣಿಸಿದರು. ದೇವರಾಜ ಅರಸು ಅವರಿಂದ ದಲಿತರಿಗೆ, ಹಿಂದುಳಿದ ವರ್ಗದವರಿಗೆ, ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸಿಕ್ಕಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಉನ್ನತ ಹುದ್ದೆಗಳಲ್ಲಿ ಮೀಸಲಾತಿ ಸಿಗಬೇಕು. ಶಾಸಕಾಂಗದಲ್ಲಿ ಎಲ್ಲಾ ವರ್ಗಗಳಿಗೂ ಸಮಾನ ಪ್ರಾತಿನಿಧ್ಯ ದೊರೆಯಬೇಕು ಎಂದು ಹೇಳಿದರು.

ಉಳುವವನೇ ಭೂಮಿ ಒಡೆಯ ಎಂಬ ಕಾಯ್ದೆಯ ಬಗ್ಗೆ ಹಲವು ವರ್ಷಗಳಿಂದಲೂ ಚರ್ಚೆ ನಡೆದಿತ್ತು. ಆದರೆ, ದೇವರಾಜು ಅರಸು ಅವರು ಅಧಿಕಾರಕ್ಕೆ ಬಂದ ನಂತರ ಇದು ಜಾರಿಗೆ ಬಂತು. ಅರಸು ಅವರ ಸಾಮಾಜಿಕ ನ್ಯಾಯಾದ ಬದ್ಧತೆ ಅಪಾರವಾದದ್ದು, ನಾನೂ ಕೂಡ ಎಂಥದ್ದೇ ಸಂದರ್ಭಬಂದರೂ ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿರುತ್ತೇನೆ. ಈ ವಿಷಯದಲ್ಲಿ ರಾಜಿಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು. ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮಾತನಾಡಿ, 70ರ ದಶಕ ಶೋಷಿತ ಹಾಗೂ ಬಡವರಿಗೆ ಸುವರ್ಣ ಯುಗವಿದ್ದಂತೆ. ಆ ಸಂದರ್ಭದಲ್ಲಿ ಅರಸು ಅವರ ಕಾರ್ಯಕ್ರಮಗಳಿಗೆ ಮೇಲ್ವವರ್ಗದ ಜನರೂ ಕೂಡ ಸಹಕರಿಸುವ ಹೃದಯ ವೈಶಾಲ್ಯತೆ ತೋರಿಸಿದರು. ಅಂದಿನ ಸುಧಾರಣಾ ಕ್ರಮಗಳಿಂದಾಗಿ ಶಾಸಕಾಂಗದಲ್ಲಿ ದಲಿತರು, ಹಿಂದುಳಿದವರ್ಗದವರು ಆಯ್ಕೆಯಾಗಲು ಸಾಧ್ಯವಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ದೇವರಾಜ ಅರಸು ಎಂದು ಕೊಂಡಾಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಮಾತನಾಡಿ, ಜನರ ಕಷ್ಟಗಳನ್ನು ಹತ್ತಿರದಿಂದ ನೋಡಿದ್ದ ದೇವರಾಜ ಅರಸು ಅವರು ತಮ್ಮ ಅನುಭವದ ಆಧಾರದ ಮೇಲೆ ಸಾಮಾಜಿಕ ಯೋಜನೆಗಳನ್ನು ರೂಪಿಸಿದರು. ಇಲ್ಲದೇ ಹೋಗಿದ್ದರೆ ಮೇಲ್ವವರ್ಗದವರ ಶೋಷಣೆಯಿಂದ ಹಿಂದುಳಿದವರ್ಗಗಳು ಇನ್ನೂ ಕೆಳಹಂತದಲ್ಲೇ ಇರಬೇಕಾಗುತ್ತಿತ್ತೆಂದು ಅಭಿಪ್ರಾಯಪಟ್ಟರು. ಸಚಿವರಾದ ಆರ್.ರೋಷನ್‌ಬೇಗ್, ಕೆ.ಜೆ.ಜಾರ್ಜ್, ಶಾಸಕರಾದ ಎಚ್.ಎಂ.ರೇವಣ್ಣ, ಗೋವಿಂದರಾಜು, ಮಾಜಿ ಸಂಸದ ಎಚ್. ವಿಶ್ವನಾಥ್, ಮುಖಂಡರಾದ ರಾಮಚಂದ್ರಪ್ಪ, ಜಲಜಾನಾಯಕ್, ಸೂರಜ್‌ಹೆಗಡೆ, ಕೆ.ಎಂ.ನಾಗರಾಜ್ ಮತ್ತಿತರರಿದ್ದರು.

Write A Comment