ಕರ್ನಾಟಕ

ಪ್ರಧಾನಿ ಮೋದಿ ಜತೆ ಚರ್ಚೆಗೆ ಕಾತುರರಾಗಿರುವ ಬಿಜೆಪಿ ನಾಯಕರು

Pinterest LinkedIn Tumblr

moಬೆಂಗಳೂರು, ಡಿ.31-ವಿವಿಧ ಕಾರ್ಯಕ್ರಮ ಗಳಲ್ಲಿ ಪಾಲ್ಗೊಳ್ಳಲು ಜ.2 ಮತ್ತು 3 ರಂದು ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ರಾಜ್ಯದ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಎರಡರಂದು ನವದೆಹಲಿಯಿಂದ ಮೈಸೂರಿಗೆ ಆಗಮಿಸಲಿರುವ ಮೋದಿ ಅಂದು ಮೈಸೂರಿನ ಸುತ್ತೂರು ಮಠ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಅದೇ ದಿನ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿರುವ ಮೋದಿಯವರನ್ನು ಕೇಂದ್ರ ಸಚಿವರಾದ ಅನಂತ್‌ಕುಮಾರ್, ಡಿ.ವಿ.ಸದಾನಂದಗೌಡ, ಜಿ.ಎಂ.ಸಿದ್ದೇಶ್ವರ್, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಮುಖಂಡರಾದ ಜಗದೀಶ್‌ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್. ಅಶೋಕ್ ಸೇರಿದಂತೆ ಮತ್ತಿತರರನ್ನೊಳಗೊಂಡ ನಿಯೋಗ ಭೇಟಿ ಮಾಡಲಿದೆ.
ಪ್ರಧಾನಿ ಭೇಟಿಗೆ ಕಾಲಾವಕಾಶವನ್ನು ನಿಗದಿಪಡಿಸಲಾಗಿದ್ದು, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಿಯೋಗವು ಪಕ್ಷದ ಸಂಘಟನೆ, ರಾಜ್ಯಾಧ್ಯಕ್ಷರ ಆಯ್ಕೆ, ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು, ವಿಧಾನಪರಿಷತ್ ಚುನಾವಣೆಯ ಹಿನ್ನಡೆ, ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಧ್ಯಕ್ಷರ ಆಯ್ಕೆ ಕುರಿತು ಚರ್ಚೆ: ಬಿಜೆಪಿ ಹಾಲಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಅವರ ಅಧಿಕಾರಾವಧಿ ಮುಗಿಯುತ್ತಿದ್ದು, ತೆರವಾಗಲಿರುವ ಸ್ಥಾನಕ್ಕೆ ರಾಜ್ಯಾಧ್ಯಕ್ಷರ ಆಯ್ಕೆಗೆ ಬಿಜೆಪಿ ನಿಯೋಗ ಪ್ರಧಾನಿಯವರೊಂದಿಗೆ ಸುದೀರ್ಘ ಮಾತುಕತೆ ನಡೆಸಲಿದೆ.
ರಾಜ್ಯಾಧ್ಯಕ್ಷರ ಸ್ಥಾನವನ್ನು ತಮಗೆ ನೀಡಿದರೆ ನಿರ್ವಹಿಸಲು ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಹೇಳಿದ್ದಾರೆ. ಅಲ್ಲದೆ ಬಿಜೆಪಿಯಲ್ಲಿನ ಒಂದು ವರ್ಗ ಯಡಿಯೂರಪ್ಪ ಅವರಿಗೇ ಅಧ್ಯಕ್ಷ ಸ್ಥಾನ ನೀಡಬೇಕೆಂದು ಒತ್ತಾಯಿಸಿದೆ. ಮುಂದಿನ ತಿಂಗಳು ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಂಭವವಿದೆ. ನಿನ್ನೆ ಪ್ರಕಟಗೊಂಡ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ತೀವ್ರ ಹಿನ್ನಡೆ ಕಂಡಿದೆ. ಯಡಿಯೂರಪ್ಪನವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕೇ ಅಥವಾ ಪ್ರಹ್ಲಾದ್ ಜೋಷಿ ಅವರನ್ನೇ ಕೆಲ ದಿನಗಳವರೆಗೆ ಮುಂದುವರೆಸಬೇಕೇ ಎಂಬುದರ ಬಗ್ಗೆ ನರೇಂದ್ರ ಮೋದಿ ರಾಜ್ಯ ನಾಯಕರಿಂದ ಮಾಹಿತಿ ಪಡೆಯಲಿದ್ದಾರೆ.
ಇದಲ್ಲದೆ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಎಲ್ಲ ವೈಮನಸ್ಸುಗಳನ್ನು ಮರೆತು ಕಾಂಗ್ರೆಸ್‌ಗಿಂತ ಹೆಚ್ಚು ಸ್ಥಾನಗಳನ್ನು ಗಳಿಸಿ 2018ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಬೇರು ಮಟ್ಟದಿಂದ ಬಲಪಡಿಸುವಂತೆ ಮೋದಿ ಸಲಹೆ ನೀಡಲಿದ್ದಾರೆ. ಇದರ ಜತೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಜನರ ಬಳಿ ಕೊಂಡೊಯ್ದು ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವುದು ಹಾಗೂ ಪಕ್ಷಕ್ಕೆ ಹೆಚ್ಚು ಸದಸ್ಯರನ್ನು ನೋಂದಾಯಿಸುವಂತೆ ಸೂಚನೆ ಸಿಗಲಿದೆ. ಪಕ್ಷದಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಗೊಂದಲ, ವೈಮನಸ್ಸು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಸಂಘಟಿಸಬೇಕು. ಸೂಕ್ತ ಸಮಯದಲ್ಲಿ ಪಕ್ಷ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಮೋದಿ ಸಂದೇಶ ರವಾನಿಸಿದ್ದಾರೆ.

Write A Comment