ಕರ್ನಾಟಕ

ಯಲಹಂಕ ಉಪನಗರ ಪೊಲೀಸರ ಕಾರ್ಯಾಚರಣೆ; ವಿದ್ಯಾರ್ಥಿ ಅಪಹರಣ: ನಾಲ್ವರ ಬಂಧನ

Pinterest LinkedIn Tumblr

arrest

ಬೆಂಗಳೂರು: ಜಮೀನ್ದಾರರ ಮಗನನ್ನು ಅಪಹರಿಸಿ ₹ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರು ಯುವಕರು, ಈಗ ಯಲಹಂಕ ಉಪನಗರ ಪೊಲೀಸರಿಗೆ ಸಿಕ್ಕಿ ಬಿದ್ದು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಡಿ.28ರಂದು ವೈದ್ಯನಾಥ್ ಎಂಬ ಪಿಯುಸಿ ವಿದ್ಯಾರ್ಥಿಯ ಅಪಹರಣ ನಡೆದಿತ್ತು. ಈ ಪ್ರಕರಣ ಸಂಬಂಧ ಜಾಲ ಹೋಬಳಿ ನಾರಾಯಣಪುರದ ನವೀನ್ (22), ವಿದ್ಯಾರಣ್ಯಪುರದ ಅಜಿತ್(21), ದೊಡ್ಡಬೊಮ್ಮಸಂದ್ರದ ಎಡ್ವಿನ್ (24) ಮತ್ತು ತಮಿಳುನಾಡಿನ ದಾಮೋದರ್ (20) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಎರಡು ಕಾರು ಹಾಗೂ ಎರಡು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಡಿಪ್ಲೊಮಾ ವ್ಯಾಸಂಗ ಅರ್ಧಕ್ಕೆ ಬಿಟ್ಟಿದ್ದ ನವೀನ್, ಮೂರು ವರ್ಷಗಳಿಂದ ಕೆಲಸವಿಲ್ಲದೆ ಓಡಾಡಿಕೊಂಡಿದ್ದ. ಸ್ವಂತ ವ್ಯಾಪಾರ ಆರಂಭಿಸುವ ಯೋಚನೆಯಲ್ಲಿದ್ದ ಆತನಿಗೆ ಹಣದ ಅಗತ್ಯವಿತ್ತು. ಹಲವು ಕಡೆ ಸಾಲ ಕೇಳಿದರೂ ಪ್ರಯೋಜನವಾಗಿರಲಿಲ್ಲ. ಆಗ ಆರೋಪಿಯು ಬೆಟ್ಟ ಹಲಸೂರಿನ ಜಮೀನ್ದಾರ ಗಂಗಾಧರ್ ಅವರ ಮಗ ವೈದ್ಯನಾಥ್‌ನನ್ನು ಅಪಹರಿಸಲು ಸಂಚು ರೂಪಿಸಿಕೊಂಡ’ ಎಂದು ಹಿರಿಯ ಅಧಿಕಾರಿಗಳು ವಿವರಿಸಿದ್ದಾರೆ.

‘ಕೃತ್ಯಕ್ಕೆ ಕೈಜೋಡಿಸುವಂತೆ ಸ್ನೇಹಿತರಾದ ಅಜಿತ್ ಮತ್ತು ಎಡ್ವಿನ್‌ನ ಮನವೊಲಿಸಿದ್ದ. ಅಲ್ಲದೆ, ನೆರವಾದರೆ ₹ 2 ಲಕ್ಷ ಕೊಡುವುದಾಗಿ ಹೇಳಿ ಬಾಲ್ಯದ ಗೆಳೆಯ ದಾಮೋದರ್‌ನನ್ನು ಹೊಸೂರಿನಿಂದ ಕರೆಸಿಕೊಂಡಿದ್ದ. ಆರೋಪಿಗಳು ಡಿ.28ರಂದು ಇಂದಿರಾನಗರದ ಟ್ರಾವೆಲ್ ಏಜೆನ್ಸಿಯಲ್ಲಿ ಕಾರು ಬಾಡಿಗೆಗೆ ಪಡೆದಿದ್ದರು.

‘ರಾಮಗೊಂಡನಹಳ್ಳಿಯ ನಾಗಾರ್ಜುನ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ವೈದ್ಯನಾಥ್, ಆ ದಿನ ಬೆಳಿಗ್ಗೆ 7.30ರ ಸುಮಾರಿಗೆ ಸ್ನೇಹಿತ ನಿತೀಶ್ ಜತೆ ಕಾಲೇಜಿಗೆ ಹೋಗುತ್ತಿದ್ದ. ಹಾರೋಹಳ್ಳಿ ಕೆರೆ ಏರಿ ಮೇಲೆ ಅವರ ಸ್ಕೂಟರ್‌ ಅಡ್ಡಗಟ್ಟಿ ನಿತೀಶ್‌ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು, ಸ್ಕೂಟರ್‌ ಸಮೇತ ವೈದ್ಯನಾಥ್‌ನನ್ನು ಅಪಹರಿಸಿದ್ದರು.

‘ನಂತರ ನಿತೀಶ್, ಯಲಹಂಕ ಉಪನಗರ ಠಾಣೆಗೆ ತೆರಳಿ ನಡೆದ ಘಟನೆ ಬಗ್ಗೆ ವಿವರಿಸಿದ್ದ. ಕೂಡಲೇ ಎಲ್ಲ ಠಾಣೆಗಳಿಗೂ ವೈರ್‌ಲೆಸ್ ಮೂಲಕ ಮಾಹಿತಿ ರವಾನಿಸಿದ ಸಿಬ್ಬಂದಿ, ಹೆಸರುಘಟ್ಟ ಬಸ್‌ ನಿಲ್ದಾಣದ ಬಳಿ ಆ ಕಾರನ್ನು ಪತ್ತೆ ಮಾಡಿದ್ದರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಿಡಿಆರ್ ಪರಿಶೀಲನೆ: ಸಾರಿಗೆ ಇಲಾಖೆ ಅಧಿಕಾರಿಗಳ ನೆರವು ಪಡೆದು ನೋಂದಣಿ ಸಂಖ್ಯೆ ಪರಿಶೀಲಿಸಿದಾಗ ಟ್ರಾವೆಲ್ ಏಜೆನ್ಸಿಯ ಸುಳಿವು ಸಿಕ್ಕಿತು. ಕಾರು ಬಾಡಿಗೆ ಪಡೆಯುವಾಗ ಆರೋಪಿ ಕೊಟ್ಟಿದ್ದ ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ತನಿಖೆ ಆರಂಭಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಆ ಸಂಖ್ಯೆಗೆ ಬಂದು ಹೋಗಿರುವ ಕರೆಗಳ ವಿವರ (ಸಿಡಿಆರ್‌) ಪರಿಶೀಲಿಸಲಾಯಿತು. ಆಗ ಅವರು ದೊಡ್ಡಬಳ್ಳಾಪುರ ಸಮೀಪದ ಕೋಡಿಹಳ್ಳಿ ಗ್ರಾಮದಲ್ಲಿರುವುದು ಗೊತ್ತಾಯಿತು. ಕೂಡಲೇ ಅಲ್ಲಿಗೆ ತೆರಳಿ ವಿದ್ಯಾರ್ಥಿಯನ್ನು ರಕ್ಷಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ಕಟ್ಟಿ ಹಾಕಿ ಪರಾರಿ
‘ಗ್ರಾಮದ ನೀಲಗಿರಿ ತೋಪಿನಲ್ಲಿ ವಿದ್ಯಾರ್ಥಿಯನ್ನು ಕಟ್ಟಿ ಹಾಕಿ ಆರೋಪಿಗಳು ಪರಾರಿಯಾಗಿದ್ದರು. ಸಿಡಿಆರ್ ವಿವರ ಆಧರಿಸಿ ಮೊದಲು ಎಡ್ವಿನ್ ಮತ್ತು ದಾಮೋದರ್‌ನನ್ನು ಹೊಸೂರಿನಲ್ಲಿ ಪತ್ತೆ ಮಾಡಲಾಯಿತು. ವಿಚಾರಣೆ ವೇಳೆ ಅವರು ನೀಡಿದ ಸುಳಿವಿನಿಂದ ಉಳಿದಿಬ್ಬರನ್ನು ಕೋಲಾರದ ಸಂಬಂಧಿಕರ ಮನೆಯಲ್ಲಿ ವಶಕ್ಕೆ ಪಡೆಯಲಾಯಿತು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Write A Comment