ಕರ್ನಾಟಕ

ಹಾಲಿನ ದರ ಏರಿಕೆ ಚುನಾವಣೆ ಗಿಮಿಕ್: ಎಚ್.ಡಿ.ರೇವಣ್ಣ

Pinterest LinkedIn Tumblr

revanna

ಬೆಂಗಳೂರು: ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಮತದಾರರನ್ನು ವಿಶೇಷವಾಗಿ ರೈತರನ್ನು ಮನವೊಲಿಸುವ ಸಲುವಾಗಿ ರಾಜ್ಯ ಸರ್ಕಾರ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 4 ರೂ. ಹೆಚ್ಚಿಸುವ ಮೂಲಕ “ಚುನಾವಣಾ ಗಿಮಿಕ್” ಮಾಡಲು ಹೊರಟಿದೆ ಎಂದು ಜೆಡಿಎಸ್‌ನ ಹಿರಿಯ ಶಾಸಕ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಆರೋಪಿಸಿದರು.

ಸರ್ಕಾರ ಪ್ರತಿ ಲೀಟರ್ ಹಾಲಿಗೆ 4 ರೂ. ಹೆಚ್ಚಿಸಿರುವುದು ರೈತರಿಗೆ ಹಾಗೂ ಗ್ರಾಹಕರಿಗೆ ವಂಚನೆ ಮಾಡಲು ಹೊರಟಿದೆ. ಇದರಿಂದಾಗಿ ರೈತರು ಮತ್ತು ಗ್ರಾಹಕರ ವಿಶ್ವಾಸವನ್ನು ಕಳೆದುಕೊಳ್ಳಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರೈತರಿಗೆ ಲಾಭ ಇಲ್ಲ
ಹಾಲಿನ ದರ ಹೆಚ್ಚಿಸಿರುವ 4 ರೂ.ಗಳ ಪೈಕಿ ಕನಿಷ್ಠ 3 ರೂ. ರೈತರಿಗೆ ಸರ್ಕಾರವೇ ನೇರವಾಗಿ ನೀಡಬೇಕು. ಒಕ್ಕೂಟಗಳನ್ನು ನೆಚ್ಚಿಕೊಂಡರೆ ರೈತರಿಗೆ ದರ ಏರಿಕೆ ಲಾಭ ಸಿಗುವುದಿಲ್ಲ ಎಂದು ಅವರು ಹೇಳಿದರು.

ಒಂದು ಕಡೆ ಹಾಲಿನ ದರ ಹೆಚ್ಚಳ ಮಾಡಿ ಗ್ರಾಹಕರಿಗೆ ಬರೆ ಎಳೆದಿದ್ದರೆ, ಮತ್ತೊಂದೆಡೆ ಪಶು ಆಹಾರದ ದರವನ್ನು ಪ್ರತಿ ಟನ್‌ಗೆ 2400 ರೂ.ಗಳಷ್ಟು ಹೆಚ್ಚಿಸಿದ್ದು ಪರಿಷ್ಕೃತ ದರ ಇದೇ 4 ರಿಂದ ಜಾರಿಗೆ ಬರಲಿದೆ. ರೈತ ಪ್ರತಿ ಕೆ.ಜಿ. ಪಶು ಆಹಾರಕ್ಕೆ 2.40 ಪೈಸೆ ಕೊಡಬೇಕಾಗುತ್ತದೆ. ಇದರಿಂದ 1 ಲೀಟರ್ ಹಾಲು ಉತ್ಪಾದನೆಗೆ ಅರ್ಧ ಕೆಜಿ ಪಶು ಆಹಾರ ಕೊಡಬೇಕಾದರೆ 1 ರಿಂದ 1.50 ರೂ. ಹಾಲು ಉತ್ಪಾದನಾ ವೆಚ್ಚ ತಗುಲಲಿದೆ. ರೈತರಿಗೆ ಇದರಿಂದ ಹೊರೆ ಹೆಚ್ಚಾಗಿದೆಯೇ ವಿನಃ ಲಾಭವಂತೂ ಆಗದು ಎಂದರು.

ಬೆಂಗಳೂರಿಗಷ್ಟೆ ಲಾಭ
ಬೆಂಗಳೂರು ಹಾಲು ಒಕ್ಕೂಟವನ್ನು ಗಮನದಲ್ಲಿಟ್ಟುಕೊಂಡು ಹಾಲಿನ ದರ ಏರಿಕೆ ಮಾಡಿರುವುದು ಸರಿಯಲ್ಲ. ಹಾಲಿನ ದರ ಏರಿಕೆಯಿಂದ ಬೆಂಗಳೂರು ಒಕ್ಕೂಟಕ್ಕೆ ಮಾತ್ರ ಲಾಭವಾಗಲಿದೆ. ಉಳಿದ ಒಕ್ಕೂಟಗಳಿಗೆ ಯಾವುದೇ ರೀತಿಯಲ್ಲೂ ದರ ಏರಿಕೆ ಪ್ರಯೋಜನ ದೊರೆಯುವುದಿಲ್ಲ ಎಂದು ಅವರು ಅಂಕಿ ಅಂಶ ಸಮೇತ ವಿವರಿಸಿದರು.

ಖಾಸಗಿಯವರಿಗೆ ಲಾಭ
ಹಾಲಿನ ದರ ಏರಿಕೆಯಿಂದ ಖಾಸಗಿ ಡೈರಿಗಳಿಗೆ ಲಾಭವಾಗಲಿದೆ. ಮಾರುಕಟ್ಟೆಗೆ ಅಗ್ಗದ ದರದಲ್ಲಿ ಹಾಲು ಪೂರೈಸಲು ದಾರಿ ಮಾಡಿಕೊಟ್ಟಂತಾಗಿದೆ ಎಂದು ಅವರು ವಿಶ್ಲೇಷಿಸಿದರು. ಹಾಲಿನ ಪರಿಷ್ಕೃತ ದರ ಜ. 5 ರಿಂದ ಜಾರಿಗೆ ಬರಲಿದ್ದು, ಅದಕ್ಕೆ ಮುನ್ನ ಸರ್ಕಾರ ಎಲ್ಲ ಒಕ್ಕೂಟಗಳ ಅಧ್ಯಕ್ಷರ ಸಭೆ ಕರೆದು ಚರ್ಚಿಸಬೇಕು ಎಂದರು.

ಪರವಾನಿಗೆ ಇಲ್ಲ
ಹಾಸನ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರತಿನಿತ್ಯ 5 ಲಕ್ಷ ಲೀಟರ್ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿದ್ದು, ಈ ಹಾಲನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಿದರೆ ಪ್ರತಿ ಲೀಟರ್‌ಗೆ 25 ರೂ.ಗಳಂತೆ ಗ್ರಾಹಕರಿಗೆ ಒದಗಿಸಲಾಗುವುದು. ಆದರೆ ಸರ್ಕಾರ ಇದಕ್ಕೆ ಪರವಾನಿಗೆ ನೀಡುತ್ತಿಲ್ಲ ಎಂದು ಅವರು ಆಕ್ಷೇಪಿಸಿದರು.

ಹಾಲಿನಪುಡಿ 2753 ಟನ್‌ಗೂ ಅಧಿಕ ಪ್ರಮಾಣದಲ್ಲಿ ಸಂಗ್ರಹಣೆಯಾಗಿದ್ದು ಇದರ ಮಾರಾಟಕ್ಕೆ ಸರ್ಕಾರ ಮುಂದಾಗಿಲ್ಲ. ಹಿಂದೆ ಪ್ರತಿ ಕೆ.ಜಿ.ಗೆ 230 ದರ ಇದ್ದದ್ದು ಈಗ 130 ರೂ.ಗಳಿಗೆ ಇಳಿದಿರುವುದರಿಂದ ಹಾಲು ಒಕ್ಕೂಟಕ್ಕೆ ಭಾರಿ ನಷ್ಟ ಉಂಟಾಗಿದೆ ಎಂದರು.

Write A Comment