ಕರ್ನಾಟಕ

21ನೇ ಶತಮಾನ ನಮ್ಮೆಲ್ಲರದಾಗಲಿ: ಪ್ರಧಾನಿ ನರೇಂದ್ರ ಮೋದಿ

Pinterest LinkedIn Tumblr

mysore

ಮೈಸೂರು: 21ನೇ ಶತಮಾನ ಜ್ಞಾನದ ಶತಮಾನ. ಜ್ಞಾನಜ್ಯೋತಿಗೆ ಇಡೀ ಸಮಾಜ ಮತ್ತು ದೇಶ ಬದಲಾಯಿಸುವ ಸಾಮರ್ಥ್ಯವಿದ್ದು, ಜ್ಞಾನದ ಶಕ್ತಿಯನ್ನು ಮೈಗೂಡಿಸಿಕೊಂಡಿರುವ ‘ಭಾರತೀಯರ ಶತಮಾನ’ ಇದಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಸಂಜೆ ಶ್ರೀ ಸುತ್ತೂರು ವೀರಸಿಂಹಾಸನ ಮಠದ 23ನೇ ಪೀಠಾಧ್ಯಕ್ಷ ಶ್ರೀ ಶಿವರಾತ್ರಿ ರಾಜೇಂದ್ರಸ್ವಾಮೀಜಿ ಅವರ ಜನ್ಮಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ‘ಜ್ಞಾನ, ಮಾಹಿತಿ-ತಂತ್ರಜ್ಞಾನ ಮತ್ತು ಆವಿಷ್ಕಾರ’ಕ್ಕೆ ಎಲ್ಲಿಲ್ಲದ ಮಹತ್ವ ಬಂದಿದೆ. ಈ ಮೂರು ಅಸ್ತ್ರಗಳು ಯಾವ ದೇಶದ ಬಳಿ ಇರುತ್ತದೆಯೋ ಆ ದೇಶದ ಮಾರ್ಗದಲ್ಲಿ ಇಡೀ ಜಗತ್ತು ಸಾಗಲಿದೆ ಎಂದರು. ತ್ರಿ ಅಸ್ತ್ರಗಳ ಪರಿಣಾಮದಿಂದ ಸಮಾಜ ಮತ್ತು ದೇಶಗಳು ತ್ವರಿತಗತಿಯಲ್ಲಿ ಬದಲಾಗುತ್ತಿವೆ. ಈ ಪ್ರಗತಿ ಹಿಂದೆ ಇರಲಿಲ್ಲ. ಪರಿವರ್ತನೆಗೆ ಭಾರತೀಯರು ಸಿದ್ಧರಾಗಬೇಕು. ಅದಕ್ಕೆ ತಕ್ಕಂತೆ ಕಾರ್ಯಯೋಜನೆ ಜಾರಿಗೆ ತರಬೇಕು ಎಂದು ಹೇಳಿದರು. ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ವಿಜಯಪುರದ ಶ್ರೀ ಸಿದ್ದೇಶ್ವರ ಸಾನ್ನಿಧ್ಯ ವಹಿಸಿದ್ದರು. ರಾಜ್ಯಪಾಲ ವಿ.ಆರ್.ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಜಿ.ಎಸ್.ಸಿದ್ದೇಶ್ವರ್, ಬಿಜೆಪಿ ರಾಜ್ಯಾಧ್ಯಕ್ಷ ಪ್ರಲ್ಹಾದ ಜೋಷಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಂಸದ ಪ್ರತಾಪ್​ಸಿಂಹ, ಮಾಜಿ ಸಚಿವ ವಿ.ಸೋಮಣ್ಣ ಮತ್ತಿತರರು ಪಾಲ್ಗೊಂಡಿದ್ದರು.

ಸಮಾಜೋದ್ಧಾರಕ್ಕೆ ಬದುಕು ಮುಡಿಪಿಟ್ಟ ಸಂತ ಪರಂಪರೆ

ಮೈಸೂರು: ದೇಶದ ಸಂತ, ಋಷಿ, ಮುನಿ ಪರಂಪರೆ ಸಮಾಜ ಉದ್ಧಾರಕ್ಕೆ ತಮ್ಮ ಬದುಕನ್ನು ಮುಡಿಪಾಗಿಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು. ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಪ್ರಾರ್ಥನಾ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಶ್ರಮದ ಎಸ್​ಜಿಇಎಸ್ ಆಸ್ಪತ್ರೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಭಾರತದಲ್ಲಿ ಸಂತ, ಋಷಿ, ಮುನಿಗಳ ದೊಡ್ಡ ಪರಂಪರೆ ಇದೆ. ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕೂಡ ಸಮಾಜ ಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ ಎಂದರು.

ನಮೋ ಕಂಡು ಜನ ಪುಳಕ

ಮೈಸೂರು: ನಗರದ ನಿವಾಸಿಗಳು ರಸ್ತೆ ಬದಿಯಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಡು ಪುಳಕಿತರಾದರು. ಮೋದಿ ಸಂಚರಿಸುವ ರಸ್ತೆಗಳು ಶೂನ್ಯ ವಾಹನ ಸಂಚಾರ(‘0’ ಟ್ರಾಫಿಕಿಂಗ್) ಆಗಿದ್ದ ಪರಿಣಾಮ ವಾಹನ ಸವಾರರು ಪರದಾಡಿದರು. ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ್ದ ಮೋದಿ ಅವರನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ಜಮಾಯಿಸಿ ‘ಮಿನಿ ದಸರಾ’ ನೆನಪಿಸಿದರು. ಮೋದಿ ಅವರ ಮುಖ ದರ್ಶನ ಆಗದಿದ್ದರೂ ಪ್ರಧಾನಿಯ ಕಾರನ್ನೇ ನೋಡಿ ಖುಷಿಪಟ್ಟರು.

ಲಲಿತ್ ಮಹಲ್​ನಲ್ಲಿ ವಾಸ್ತವ್ಯ: ಪ್ರಧಾನಿ ಮೋದಿ ಶನಿವಾರ ರಾತ್ರಿ ನಗರದ ಲಲಿತ್ ಮಹಲ್ ಪ್ಯಾಲೇಸ್ ಹೋಟಲ್ಲ್​ನಲ್ಲಿ ವಾಸ್ತವ್ಯ ಹೂಡಿದ್ದರು. ರಾಷ್ಟ್ರಪತಿ ದಿ. ಕಲಾಂ ಉಳಿದಿದ್ದ ಕೊಠಡಿಯಲ್ಲೇ ಇವರು ಇದ್ದದ್ದು ವಿಶೇಷ

ಅಭಿಮಾನಿಗಳ ಹಷೋದ್ಗಾರ

ನರೇಂದ್ರ ಮೋದಿ ಅವರು ಐಷಾರಾಮಿ ಕಪ್ಪು ಕಾರಿನಲ್ಲಿ ಕುಳಿತು ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತಿದ್ದ ಜನರತ್ತ ಕೈಬೀಸುತ್ತ ಸಾಗಿದ್ದು ಅಭಿಮಾನಿಗಳಲ್ಲಿ ಹರ್ಷ ತಂದಿತು. ಮೋದಿ ಆಗಮಿಸುವಾಗ ಮಬ್ಬು ಬೆಳಕಿತ್ತಾದರೂ ರಾತ್ರಿ 7.30ರ ಸುಮಾರಿನಲ್ಲಿ ನಿರ್ಗಮಿಸುವಾಗ ಕತ್ತಲಾಗಿತ್ತು. ಸಾಲುಗಟ್ಟಿ ನಿಂತಿದ್ದ ಜನರನ್ನು ನಿರಾಸೆಗೊಳಿಸದ ಮೋದಿ ಅವರು ಕಾರಿನೊಳಗಿನ ದೀಪದ ಬೆಳಕಿನಲ್ಲೇ ಮುಗುಳ್ನಗೆ ಬೀರುತ್ತ ಸಾಗಿದರು.

ಪ್ರಧಾನಿ ಭೇಟಿಯಾದ ಬಿಜೆಪಿ ನಾಯಕರು

ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ದಂಡು ‘ಸಾಂಸ್ಕೃತಿಕ ನಗರಿ’ಯಲ್ಲಿ ಬೀಡುಬಿಟ್ಟಿತ್ತು. ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಜಿ.ಎಸ್.ಸಿದ್ದೇಶ್ವರ್, ರಾಜ್ಯಾಧ್ಯಕ್ಷ ಪ್ರಲ್ಹಾದ್ ಜೋಷಿ, ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಪ್ರತಾಪ್​ಸಿಂಹ, ಮಾಜಿ ಸಚಿವ ವಿ.ಸೋಮಣ್ಣ ಸೇರಿ ಪ್ರಮುಖ ನಾಯಕರು ಪ್ರಧಾನಿ ಮೋದಿಯವರನ್ನು ಲಲಿತ್​ ವುಹಲ್ ಹೋಟೆಲ್​ನಲ್ಲಿ ಭೇಟಿಯಾಗಿ ರ್ಚಚಿಸಿದರು..

ಎಚ್​ಎಎಲ್ ಘಟಕಕ್ಕಿಂದು ಪ್ರಧಾನಿ ಮೋದಿ ಶಿಲಾನ್ಯಾಸ

ತುಮಕೂರು: ಹಿಂದುಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್​ಎಎಲ್)ನ ಹೆಲಿಕಾಪ್ಟರ್ ನಿರ್ಮಾಣ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಜ.3ರಂದು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಯುದ್ಧ ಬಳಕೆ ಉದ್ದೇಶದ ಲಘು ಹೆಲಿಕಾಪ್ಟರ್​ಗಳನ್ನು ಈ ಘಟಕದಲ್ಲಿ ನಿರ್ವಿುಸುವ ಉದ್ದೇಶ ಹೊಂದಲಾಗಿದೆ.

ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಬಿದರೆಹಳ್ಳ ಕಾವಲ್​ನ 610 ಎಕರೆ ಪ್ರದೇಶದಲ್ಲಿ ಘಟಕ ಸ್ಥಾಪನೆಯಾಗುತ್ತಿದೆ. ಆರಂಭದಲ್ಲಿ 3 ಟನ್ ತೂಕದ ಯುದ್ಧ ಬಳಕೆ ಲಘು ಹೆಲಿಕಾಪ್ಟರ್ ನಿರ್ವಿುಸಲಾಗುವುದು. ಮುಂದಿನ ದಿನಗಳಲ್ಲಿ 10 ಟನ್, 12 ಟನ್ ತೂಕದ ಉತ್ಪಾದನಾ ಘಟಕ ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಹೆಲಿಕಾಪ್ಟರ್ ನಿರ್ವಹಣೆ, ರಿಪೇರಿ ಹಾಗೂ ಸರ್ವೀಸ್ (ಎಂಆರ್​ಒ) ಕೂಡ ಇಲ್ಲಿಯೇ ನಡೆಯಲಿದೆ.

ನಿರ್ವಣಕ್ಕೆ 3 ವರ್ಷ: ಭಾರತೀಯ ಭೂ ಹಾಗೂ ವಾಯುಸೇನೆ ಯುದ್ಧ ಬಳಕೆಗೆ ಲಘು ಹೆಲಿಕಾಪ್ಟರ್ ಉತ್ಪಾದನಾ ಮಾಡುವ ಈ ಘಟಕಕ್ಕೆ 5 ಸಾವಿರ ಕೋಟಿ ರೂ., ಬಂಡವಾಳವನ್ನು ಎಚ್​ಎಎಲ್ ಹೂಡಿಕೆ ಮಾಡಲಿದೆ. ಘಟಕದಲ್ಲಿ 2018ಕ್ಕೆ ಹೆಲಿಕಾಪ್ಟರ್ ನಿರ್ಮಾಣ ಸಾಧ್ಯವಾಗಲಿದೆ. 1ಲಘು ಹೆಲಿಕಾಪ್ಟರ್ ಉತ್ಪಾದನೆಗೆ 30 ಕೋಟಿ ರೂ. ವೆಚ್ಚ ತಗುಲಲಿದೆ. ಇಲ್ಲಿ 3-4 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ.

ಮುಕ್ಕಾಲು ಗಂಟೆ ಕಾರ್ಯಕ್ರಮ

ಎಚ್​ಎಎಲ್ ಘಟಕ ಶಿಲಾನ್ಯಾಸವನ್ನು ಮಧ್ಯಾಹ್ನ 1.20ಕ್ಕೆ ಪ್ರಧಾನಿ ಮೋದಿ ನೆರವೇರಿಸುವರು. ಇಡೀ ಕಾರ್ಯಕ್ರಮ ಕೇವಲ 44 ನಿಮಿಷ ಮಾತ್ರ. ಇದರಲ್ಲಿ 20 ನಿಮಿಷ ಮೋದಿ ಭಾಷಣ ಇರಲಿದೆ. ನಂತರ ಏರ್​ಷೋ ನಡೆಯಲಿದೆ. ಪ್ರಧಾನಿ ಜತೆ ರಾಜ್ಯಪಾಲ ವಿ.ಆರ್. ವಾಲಾ, ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ವೇದಿಕೆ ಹಂಚಿಕೊಳ್ಳಲಿದ್ದಾರೆ.

ಭದ್ರತಾ ವೈಫಲ್ಯ, ಮೋದಿ ಕಾರಿಗೆ ಅಡ್ಡಬಂದ ಯುವಕ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ತೆರಳುತ್ತಿದ್ದ ಕಾರಿಗೆ ಅಪರಿಚಿತ ಯುವಕ ಅಚಾನಕ್ಕಾಗಿ ಅಡ್ಡ ಬಂದು ಕೆಲಕಾಲ ಬೆಂಗಾವಲು ಪಡೆಯನ್ನು ಗಲಿಬಿಲಿಗೊಳಿಸಿದ್ದಾನೆ. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜನ್ಮ ಶತಮಾನೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಮೋದಿ ವಾಸ್ತವ್ಯಕ್ಕಾಗಿ ವಿವಿ ಕಾರ್ಯಸೌಧದ ಮೂಲಕ ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಕಡೆಗೆ ನಡುವೆ ತೆರಳುತ್ತಿದ್ದರು. ಕ್ರಾಫರ್ಡ್ ಹಾಲ್ ಬಳಿ ಇರುವ ಕೌಟಿಲ್ಯ ವೃತ್ತದಲ್ಲಿ ಮೋದಿ ಅವರು ತೆರಳುತ್ತಿದ್ದುದನ್ನು ನೋಡುತ್ತ ನಿಂತಿದ್ದ 22 ವರ್ಷದ ಯುವಕ ಮೋದಿ ಅವರ ಆಟೋಗ್ರಾಫ್ ಬೇಕೆಂದು ಅಚಾನಕ್ಕಾಗಿ ಬೆಂಗಾವಲು ಪಡೆಯ ವಾಹನಗಳನ್ನು ಭೇದಿಸಿ ಏಕಾಏಕಿ ನುಗ್ಗಿದ್ದಾನೆ. ಇದರಿಂದ ಮೋದಿ ಅವರಿದ್ದ ಕಾರು ಕ್ಷಣ ಕಾಲ ನಿಂತಿದ್ದು, ಘಟನೆಯಿಂದ ವಿಚಲಿತರಾದ ಬೆಂಗಾವಲು ಪಡೆ ಸಿಬ್ಬಂದಿ, ಯುವಕನನ್ನು ತಕ್ಷಣ ಸುತ್ತುವರಿದು ಹಿಡಿಯಲು ಮುಂದಾಗಿದ್ದಾರೆ. ಆದರೆ ಯುವಕ ಜನರ ಮಧ್ಯೆ ಓಡಿ ಪರಾರಿಯಾಗಿದ್ದಾನೆ.

Write A Comment