ಚಿತ್ರದುರ್ಗ: ತಾನು ಪ್ರೀತಿಸಿದವಳೊಂದಿಗೆ ಮದುವೆಯಾಗುವ ದುರಾಸೆಯಿಂದ ಮದುವೆಯಾದ ಮರು ದಿನವೇ ವರದಕ್ಷಿಣೆಯ ನೆಪ ಒಡ್ಡಿ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಧಾರುಣ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಆತ್ಮಹತ್ಯೆ ಎಂದು ನಂಬಿಸಲು ಹೋದ ಪತಿರಾಯ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹತ್ತು ಹಲವು ಕನಸುಗಳನ್ನೊತ್ತು ಹೊಸ ವರ್ಷದ ಮೊದಲನೇ ದಿನವೇ ವಿವಾಹ ಬಂಧನಕ್ಕೆ ಒಳಗಾಗಿದ್ದ ಮದುಗಳು ಮರುದಿನವೆ ಹೆಣವಾಗಿದ್ದಾಳೆ. ಗ್ರಾಮದ ಲಕ್ಷ್ಮೀ ಪಾತಿ ತನ್ನ ಪತಿಯಿಂದಲೇ ಇಹ ಲೋಕ ತ್ಯಜಿಸಿದ್ದಾಳೆ.
ಜನವರಿ 1ರಂದು ಚಿತ್ರಹಳ್ಳಿ ಗೊಲ್ಲರಹಟ್ಟಿಯ ಲಕ್ಷ್ಮಿ ಹಾಗೂ ಎಮ್ಮೆಹಟ್ಟಿಯ ನಾಗರಾಜನಿಗೆ ಹಿರಿಯರ ಒಪ್ಪಿಗೆಯಂತೆ ಮದುವೆ ಮಾಡಿಕೊಡಲಾಗಿತ್ತು. ಸುಮಾರು 15 ಲಕ್ಷ ಖರ್ಚು ಜೊತೆಗೆ ವರನಿಗೆ 5 ಲಕ್ಷ ರೂ. ಹಣವನ್ನು ವರದಕ್ಷಿಣೆಯಾಗಿ ಕೊಡಲಾಗಿತ್ತಂತೆ. ಆದರೆ ನಾಗರಾಜ್ ಒಂದೇ ದಿನಕ್ಕೆ ಇನ್ನೂ 5 ಲಕ್ಷ ರೂ. ಹಣ ತರುವಂತೆ ಪೀಡಿಸಿದ್ದಾನೆ.
ನಡೆದಿದ್ದೇನು?: ಮದುವೆಯಾದ ಮರುದಿನ ಲಕ್ಷ್ಮೀ ಹಾಗೂ ನಾಗರಾಜ್ ಸಂಪ್ರದಾಯದಂತೆ ಲಕ್ಷ್ಮೀ ತವರು ಮನೆ ಚಿತ್ರಹಳ್ಳಿ ಗೊಲ್ಲರಹಟ್ಟಿಗೆ ಬಂದಿದ್ದಾರೆ. ಮಹಡಿಯ ರೂಮಿನಲ್ಲಿ ಮಲಗಿದ್ದ ಪತಿ ನಾಗರಾಜನನ್ನು ಊಟಕ್ಕೆ ಕರೆಯಲೆಂದು ಲಕ್ಷ್ಮೀ ನೀರು ತೆಗೆದುಕೊಂಡು ಹೋಗಿದ್ದಾಳೆ. ಈ ವೇಳೆ ನಾಗರಾಜ್ ತನ್ನ ಪ್ರೇಯಸಿ ಜೊತೆ ಮಾತನಾಡಿ ನಿನ್ನ ಮದುವೆಯಾಗುವುದಾಗಿ ಹೇಳಿದ್ದನ್ನು ಲಕ್ಷ್ಮೀ ಕೇಳಿಸಿಕೊಂಡಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ನಾಗರಾಜ್ ಲಕ್ಷ್ಮೀ ಜೊತೆ ಇದ್ದ ಟವಲ್ನಿಂದಲೇ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ನಂತರ ಮಹಡಿಯಿಂದ ಬೀಳಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಸುಳ್ಳು ಕಥೆ ಕಟ್ಟಿದ್ದಾನೆ. ಲಕ್ಷ್ಮೀಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಕೊಲೆ ಮಾಡಿರುವ ಸತ್ಯ ಹೊರ ಬಿದ್ದಿದೆ.
ಅನುಮಾನಗೊಂಡ ಲಕ್ಷ್ಮೀ ಪೋಷಕರು, ಸಂಬಂಧಿಕರು ಆರೋಪಿ ನಾಗರಾಜನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗ್ರಾಮಕ್ಕೆ ಆಗಮಿಸುವಂತೆ ಪ್ರತಿಭಟನೆ ಕೂಡ ನಡೆಸಿದ್ದಾರೆ. ಮೊದ ಮೊದಲು ಕೊಲೆ ಮಾಡಿಲ್ಲಾ ಎನ್ನುತ್ತಿದ್ದ ನಾಗರಾಜ್ ಪೊಲೀಸರ ಟ್ರೀಟ್ಮೆಂಟ್ಗೆ ಸತ್ಯ ಒಪ್ಪಿಕೊಂಡಿದ್ದಾನೆ. ಸದ್ಯ ಹೊಳಲ್ಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.