ಅಂತರಾಷ್ಟ್ರೀಯ

ಭಗವಾನ್‌ ಶಿವ ವಿಶ್ವದ ಅತಿ ದೊಡ್ಡ ಪರಿಸರವಾದಿಯೇ ?ವೈಜ್ಞಾನಿಕ ಪ್ರಬಂಧ

Pinterest LinkedIn Tumblr

Lord Shiva-700ಮೈಸೂರು:ಮೈಸೂರಿನ ವಿಜ್ಞಾನ ಸಮ್ಮೇಳನ ಒಂದು ಸರ್ಕಸ್ ನಾನು ಅದರಲ್ಲಿ ಭಾಗವಹಿಸಲ್ಲ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯ ವಿಜ್ಞಾನಿ ವೆಂಕಟರಾಮನ್ ರಾಮಕೃಷ್ಣನ್ ಅಸಮಾಧಾನವ್ಯಕ್ತಪಡಿಸಿ ಗೈರುಹಾಜರಾಗಿರುವ ನಡುವೆಯೇ, ಭಗವಂತನ ಸೃಷ್ಟಿ, ಸ್ಥಿತಿ ಮತ್ತು ಲಯ ಎಂಬ ಮೂರು ಮಹತ್ಕಾರ್ಯಗಳಲ್ಲಿ ಮೂರನೇಯದನ್ನು ನಿರ್ವಹಿಸುವವನೆಂದು ತಿಳಿಯಲಾಗಿರುವ ಭಗವಾನ್‌ ಶಿವ, ಈ ಜಗತ್ತಿನ ಅತಿ ದೊಡ್ಡ ಪರಿಸರವಾದಿ ಇರಬಹುದೇ ಎಂಬ ವೈಜ್ಞಾನಿಕ ಪ್ರಬಂಧವೊಂದು ಸಮ್ಮೇಳನದಲ್ಲಿ ಮಂಡನೆಯಾಗಿರುವುದು ಚರ್ಚೆಗೆ ಕಾರಣವಾಗಿದೆ.

ಸದಾ ಧ್ಯಾನಾಸಕ್ತನಾಗಿರುವ ಭಗವಾನ್‌ ಶಿವ ಯಾವತ್ತೂ ಹುಲಿಯ ಚರ್ಮದ ಮೇಲೆ ಆಸೀನನಾಗಿರುವುದು, ಆತನ ಜಟೆಯಿಂದ ಗಂಗೆ ಉಕ್ಕಿ ಬರುತ್ತಿರುವುದು, ಕೈಲಾಸ ಪರ್ವತದಲ್ಲಿ ಆತ ಧ್ಯಾನ ಮಗ್ನನಾಗಿ ಕುಳಿತಿರುವುದನ್ನು ನಾವು ಯಾವತ್ತೂ ಚಿತ್ರದಲ್ಲಿ ಕಾಣುತ್ತೇವೆ.

ಹೀಗೆ ಪರಿಸರದ ಮಧ್ಯೆಯೇ ಸದಾ ಕಾಣಿಸಿಕೊಳ್ಳುವ ಶಿವ, ಈ ಪ್ರಪಂಚದ ಅತೀ ದೊಡ್ಡ ಪರಿಸರವಾದಿ ಎಂಬ ವಾದವನ್ನು ಭೋಪಾಲದ ಯುವ ಸಸ್ಯಶಾಸ್ತ್ರಜ್ಞ ಡಾ| ಅಖೀಲೇಶ್‌ ಪಾಂಡೆ ಅವರು ಮೈಸೂರು ವಿಶ್ವವಿದ್ಯಾಲಯದಲ್ಲೀಗ ನಡೆಯುತ್ತಿರುವ 103ನೇ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಪ್ರಸ್ತುತ ಪಡಿಸಿರುವ ತಮ್ಮ ವೈಜ್ಞಾನಿಕ ಪ್ರಬಂಧದಲ್ಲಿ ಮಂಡಿಸಿದ್ದಾರೆ.

ಆದರೆ ಪಾಂಡೆ ಅವರ ಈ ವೈಜ್ಞಾನಿಕ ಪ್ರಬಂಧದಲ್ಲಿ ಸಂಶೋಧನೆಯ ಯಾವುದೇ ಅಂಶಗಳಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ. ಈ ಪ್ರಬಂಧವು ವಿಜ್ಞಾನೇತರ ವಿಷಯಕ್ಕೆ ಸಂಬಂಧಿಸಿದ್ದು ಇದರಲ್ಲಿ ರಾಜಕೀಯ ಅಜೆಂಡಾ ಅಡಕವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮೇಲಾಗಿ ಈ ಪ್ರಬಂಧವನ್ನು ಮಂಡಿಸಲು ಡಾ| ಪಾಂಡೆ ಅವರು ಸಮ್ಮೇಳನಕ್ಕೆ ಸ್ವತಃ ಬಂದಿಲ್ಲದಿರುವುದು ಕೂಡ ಟೀಕೆಗೆ ಗುರಿಯಾಗಿದೆ.

ಆದರೆ ಸ್ವತಃ ಪಾಂಡೆ ಅವರು ತಾನು ಈಚೆಗೆ ಒಂದು ಅಪಘಾತದಲ್ಲಿ ಕಾಲು ಮುರಿದುಕೊಂಡಿರುವುದರಿಂದ ಸಮ್ಮೇಳನಕ್ಕೆ ಬರಲಾಗಿಲ್ಲ; ವಿನಾ ನನ್ನ ಗೈರಿಗೆ ಬೇರೆ ಯಾವುದೇ ಕಾರಣವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಡಾ| ಪಾಂಡೆ ಅವರ ಹೇಳಿಕೆ ಹೀಗಿದೆ: “ಅನೇಕ ಸಂದರ್ಭಗಳಲ್ಲಿ ಇಂದಿನ ಕಟ್ಟುಕತೆಯೇ ನಾಳೆಯ ವಿಜ್ಞಾನವಾಗಿರುತ್ತದೆ. ಇಂದು ನಾವು ವೈಜ್ಞಾನಿಕವೆಂದು ಹೇಳುವ ಸಂಗತಿಗಳೆಲ್ಲವೂ ನಮ್ಮ ಭಾರತೀಯ ವೇದ, ಪುರಾಣ, ಉಪನಿಷತ್ತುಗಳಲ್ಲಿ ಇವೆ. ಆದುದರಿಂದ ಪಾರಂಪರಿಕ ಜ್ಞಾನವನ್ನು ನಾವು ಕಡೆಗಣಿಸಲಾಗದು’.

ಡಾ| ಪಾಂಡೆ ಅವರು ಸಸ್ಯಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದುಕೊಂಡು ತಮ್ಮ ಅನೇಕ ವೈಜ್ಞಾನಿಕ ಪ್ರಬಂಧಗಳಿಗಾಗಿ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದಾರೆ.

ಕಳೆದ ವರ್ಷದ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಮಂಡಿಸಲಾಗಿದ್ದ ಪ್ರಬಂಧವೊಂದರಲ್ಲಿ “ವಿಮಾನಗಳು ಪ್ರಾಚೀನ ಭಾರತದಲ್ಲೂ ಇದ್ದವು’ ಎಂಬ ವಾದವನ್ನು ಮಂಡಿಸಲಾಗಿತ್ತು. ಆದರೆ ಅದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಡಾ| ಪಾಂಡೆ ಹೇಳುವ ಪ್ರಕಾರ, “ಭಗವಾನ್‌ ಶಿವನನ್ನು ಈ ವಿಶ್ವದ ಅತಿ ದೊಡ್ಡ ಪರಿಸರವಾದಿ ಎಂದು ಹೇಳುವುದರಲ್ಲಿ ತಪ್ಪೇನೂ ಇಲ್ಲ. ಪರಿಸರ ಸಂರಕ್ಷಣೆಯೇ ನನ್ನ ಪ್ರಬಂಧ ಮೂಲ ಉದ್ದೇಶವಾಗಿದೆ. ಇದಕ್ಕೆ ನಮ್ಮ ಧರ್ಮ, ಸಂಸ್ಕೃತಿ, ದೇವರು ಇತ್ಯಾದಿಯಾಗಿ ಎಲ್ಲವೂ ಪೂರಕವಾಗಿದೆ. ಧರ್ಮ ನಮಗೆ ಮಾರ್ಗದರ್ಶನ ನೀಡಬಲ್ಲುದು; ಕೇವಲ ಕಾನೂನು, ಕಾಯಿದೆ, ಶಾಸನಗಳು ಅಲ್ಲ’.

ಡಾ| ಪಾಂಡೆ ಅವರ ಪ್ರಬಂಧವನ್ನು ಪರಿಸರ ವಿಜ್ಞಾನ ವಿಭಾಗದಲ್ಲಿ ಮಂಡಿಸಲು ಆಯ್ಕೆ ಮಾಡಿದ್ದ ಈ ವಿಭಾಗದ ಅಧ್ಯಕ್ಷ ಡಾ| ಗಂಗಾಧರ ಮಿಶ್ರಾ ಅವರು ಪಾಂಡೆ ಅವರ ಪ್ರಬಂಧವನ್ನು ವೈಜ್ಞಾನಿಕವೆಂದು ಸಮರ್ಥಿಸಿಕೊಂಡಿದ್ದಾರೆ.
-ಉದಯವಾಣಿ

Write A Comment