ಕರ್ನಾಟಕ

ಹಿಂಬದಿ ಸವಾರ ಹೆಲ್ಮೆಟ್ ಹಾಕದಿದ್ದರೆ ಸವಾರನಿಗೇ ದಂಡ

Pinterest LinkedIn Tumblr

savaraಬೆಂಗಳೂರು: ಮಾನವೀಯ ಕಾಳಜಿಯಿಂದ ದ್ವಿಚಕ್ರವಾಹನದಲ್ಲಿ ಅಪರಿಚಿತರಿಗೆ ಲಿಫ್ಟ್ ಕೊಡುವವರು ಗಮನಿಸಬೇಕಾದ ಸುದ್ದಿ ಇದು. ರಾಜ್ಯ ಸರ್ಕಾರ ತಂದಿರುವ ಹೊಸ ನಿಯಮದ ಪ್ರಕಾರ, ಹಿಂಬದಿ ಸವಾರ ಹೆಲ್ಮೆಟ್ ಧರಿಸದಿದ್ದಲ್ಲಿ ಸವಾರರಿಗೆ ದಂಡ ವಿಧಿಸಲಾಗುವುದು!

ಹೌದು, ರಾಜ್ಯಾದ್ಯಂತ ದ್ವಿಚಕ್ರವಾಹನಗಳ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಂಡಿರುವ ಬೆನ್ನಲ್ಲೇ ಸಾರಿಗೆ ಇಲಾಖೆ ಮತ್ತು ಸಂಚಾರ ಪೊಲೀಸರು ಸೇರಿ ದಂಡದ ಪ್ರಮಾಣ ಅಂತಿಮಗೊಳಿಸಿದ್ದಾರೆ. ಅದರ ಪ್ರಕಾರ, ಹಿಂಬದಿ ಸವಾರರು ಹೆಲ್ಮೆಟ್ ಧರಿಸುವಂತೆ ನೋಡಿಕೊಳ್ಳುವುದು ಸವಾರರ ಜವಾಬ್ದಾರಿ. ತಪ್ಪಿದಲ್ಲಿ ಅವರೆ ದಂಡ ತೆರಬೇಕಾಗುತ್ತದೆ.

ಚಾಲ್ತಿಯಲ್ಲಿರುವ ನಿಯಮದ ಪ್ರಕಾರ ಸವಾರರು ಹೆಲ್ಮೆಟ್ ಧರಿಸದೆ ಸಿಕ್ಕಿಬಿದ್ದರೆ 100 ರೂ. ಜುಲ್ಮಾನೆ ಪಾವತಿಸಬೇಕು. ಹಿಂಬದಿ ಸವಾರರ ವಿಷಯದಲ್ಲಿ ಕೂಡ ಮೊದಲ ಬಾರಿ ಸಿಕ್ಕಿಬಿದ್ದಾಗ 100 ರೂ. ದಂಡವನ್ನೇ ವಿಧಿಸಲಾಗುತ್ತಿದೆ. ಪುನರಾವರ್ತಿತ ತಪ್ಪಿಗೆ 300 ರೂ. ಜುಲ್ಮಾನೆ ನಿಗದಿಗೊಳಿಸಲಾಗಿದೆ.

ಹೆಲ್ಮೆಟ್ ವಿಚಾರದಲ್ಲಿ ಮಕ್ಕಳಿಗೂ ವಿನಾಯ್ತಿ ಇಲ್ಲ. ಕುಟುಂಬ ಸಮೇತರಾಗಿ ದ್ವಿಚಕ್ರವಾಹನದಲ್ಲಿ ತೆರಳುವಾಗ ಹೆಲ್ಮೆಟ್ ನಿಯಮ ಉಲ್ಲಂಘಿಸಿದರೆ, ಹಿಂಬದಿ ಕುಳಿತವರ ಜೊತೆ ಮಕ್ಕಳಿಗೂ ತಲಾ 100 ರೂ. ದಂಡ ವಿಧಿಸಲಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಸಲೀಂ ವಿಜಯವಾಣಿಗೆ ತಿಳಿಸಿದರು.

ಆದರೆ, ಚಿಕ್ಕ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಮಾಡುವ ಕುರಿತು ಇಲಾಖೆಯಲ್ಲೇ ಗೊಂದಲ ಇದೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದೆಂದು ಸಾರಿಗೆ ಅಧಿಕಾರಿಗಳು ತಿಳಿಸಿದರು.

ಹೆಲ್ಮೆಟ್ ಕಡ್ಡಾಯ ನಿಯಮ ಈಗಾಗಲೇ ಜಾರಿಗೆ ಬಂದಿದೆಯಾದರೂ, ಸಂಪೂರ್ಣ ಅನುಷ್ಠಾನಕ್ಕೆ ಜ.20ರವರೆಗೆ ಕಾಲಾವಕಾಶ ನೀಡಲಾಗಿದೆ.

Write A Comment