ಕರ್ನಾಟಕ

ಮಲೆಮಹದೇಶ್ವರ ಅರಣ್ಯದಲ್ಲಿ ಹೆಚ್ಚಿದ ಹುಲಿ ಸಂತತಿ

Pinterest LinkedIn Tumblr

tigerಬೆಂಗಳೂರು: ವೀರಪ್ಪನ್ ದಶಕಗಳ ಕಾಲ ನಡೆಸಿದ ವನ್ಯಜೀವಿಗಳ ಮಾರಣಹೋಮದಿಂದ ಸ್ಮಶಾನದಂತಾಗಿಬಿಟ್ಟಿದ್ದ ಮಲೆಮಹದೇಶ್ವರ ಬೆಟ್ಟ ಶ್ರೇಣಿಗಳಲ್ಲಿ ಈಗ ವಸಂತ ಕಾಲ.

ಲಕ್ಷಾಂತರ ಎಕರೆಗಳಲ್ಲಿ, ನೂರಾರು ಕಿಲೋ ಮೀಟರ್ ಗಳಷ್ಟು ವಿಸ್ತಾರದಲ್ಲಿ ಎರಡು ರಾಜ್ಯಗಳಲ್ಲಿ ಹಬ್ಬಿರುವ ಮಲೆಮಹದೇಶ್ವರ ಅರಣ್ಯ ಪ್ರದೇಶದಲ್ಲಿ ಈಗ ವನ್ಯಜೀವಿಗಳು ಅದ್ಭುತ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಹುಲಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳಗೊಂಡಿರುವುದು ಪತ್ತೆಯಾಗಿದೆ.

ಖ್ಯಾತ ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ನೇತೃತ್ವದಲ್ಲಿ ಕಳೆದ 5 ವರ್ಷಗಳಿಂದ ನಡೆದ ಸಂಶೋಧನೆಯಲ್ಲಿ ಮಲೆಮಹದೇಶ್ವರ ಮತ್ತು ಕಾವೇರಿ ವನ್ಯಜೀವಿ ಧಾಮಗಳಲ್ಲಿ 15 ಹುಲಿಗಳು ವಾಸಿಸುತ್ತಿರು ವುದು ಪತ್ತೆಯಾಗಿದೆ. ಹುಲಿಗಳ ಜತೆಗೆ ಅತ್ಯಂತ ಅಪರೂಪದ ತಾರ ಕರಡಿ, ಕೊಂಡುಕುರಿ ಸೇರಿದಂತೆ ವಿಶಿಷ್ಟ ಸಸ್ತನಿಗಳು ಸಹ ಸ್ವಚ್ಛಂದವಾಗಿ ಜೀವಿಸುತ್ತಿವೆ. ಕಳೆದ 5 ವರ್ಷಗಳಲ್ಲಿ 809 ಕ್ಯಾಮೆರಾ ಟ್ರ್ಯಾಪ್ ಹಾಗೂ 11268 ಕ್ಯಾಮೆರಾ ಟ್ರ್ಯಾಪ್ ದಿನಗಳ ಪ್ರಯತ್ನದ ನಂತರ ಈ ಅರಣ್ಯ ಪ್ರದೇಶದಲ್ಲಿ 15 ಹುಲಿಗಳಿರುವುದು ಖಚಿತಪಟ್ಟಿದೆ.

ಅಲ್ಲದೇ, ಈ ಹುಲಿಗಳ ಪೈಕಿ ಮರಿ ಹಾಗೂ ಹೆಣ್ಣು ಒಳ್ಳೆಯ ಸಂಖ್ಯೆಯಲ್ಲಿರುವುದು ಇನ್ನಷ್ಟು ಆಶಾಭಾವನೆ ಮೂಡಿಸಿದೆ. ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿಧಾಮ ಎರಡೂ ಸೇರಿ 2 ಸಾವಿರ ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹಬ್ಬಿವೆ. ಇಷ್ಟೊಂದು ದೊಡ್ಡ ಪ್ರಮಾಣದ ಅರಣ್ಯ ಪ್ರದೇಶದಲ್ಲಿ ಹುಲಿಗಳ ಸಂತತಿ ಹೆಚ್ಚುತ್ತಿರುವ ರೀತಿ ನೋಡಿದಾಗ ಮುಂದಿನ 5 ವರ್ಷದಲ್ಲಿ ಹುಲಿಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಲು ಸಾಕಷ್ಟು ಅವಕಾಶವಿದೆ.

ಅಲ್ಲದೇ, ಬಿಳಿಗಿರಿರಂಗ ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಿಂದಲೂ ಕೆಲ ಹುಲಿಗಳು ಮಲೆಮಹದೇಶ್ವರ ಬೆಟ್ಟದವರೆಗೂ ಬಂದು ಹೋಗುತ್ತಿವೆ. ಅಲ್ಲದೇ, ಈ ಅರಣ್ಯ ಪ್ರದೇಶದಲ್ಲಿ ಹುಲಿ ಉಳಿವಿಗೆ ಅಗತ್ಯವಾದ ಬಲಿ ಪ್ರಾಣಿಗಳ ಸಂಖ್ಯೆಯೂ ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿದೆ. ಇವೆಲ್ಲ ಅಂಶಗಳಿಂದಾಗಿ ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿಧಾಮ ಪ್ರದೇಶಗಳು ಮುಂದಿನ ದಿನಗಳಲ್ಲಿ ಅತ್ಯುತ್ತಮ ಹುಲಿ ಆವಾಸಸ್ಥಾನವಾಗಿ ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವೇ ಇಲ್ಲ.

ಕಾರಿಡಾರ್ ಸಂರಕ್ಷಣೆ
ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮಕ್ಕೆ ಕೊಂಡಿಯಾಗಿ ಈಗ ಕೇವಲ ಉಳಿದುಕೊಂಡಿರುವುದು 1 ಕಿಲೋ ಮೀಟರ್ ವಿಸ್ತೀರ್ಣದ ಅತ್ಯಂತ ಕಿರಿದಾದ ಕಾರಿಡಾರ್. ದೊಡ್ಡ ಸಂಪಿಗೆ ಹಾಗೂ ಯಡಿಯಾರಹಳ್ಳಿ ಅರಣ್ಯ ಪಥ ಎಂದು ಇದನ್ನು ಕರೆಯಲಾಗುತ್ತದೆ. ಈ ಕಾರಿಡಾರ್ ಮೂಲಕವೇ ವನ್ಯಜೀವಿಗಳು ಓಡಾಟ ನಡೆಸುತ್ತಿದ್ದು, ಇಂತಹ ಕಾರಿಡಾರ ಸಂರಕ್ಷಣೆ ಹಾಗೂ ವಿಸ್ತೀರ್ಣ ಹೆಚ್ಚಳಕ್ಕೆ ತಕ್ಷಣ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಈ ಕಾರಿಡಾರ್ ವಿಸ್ತರಿಸಿದಲ್ಲಿ ವನ್ಯಜೀವಿಗಳ ಓಡಾಟ ಹೆಚ್ಚಾಗಿ ಜೀನ್ ಪೂಲ್ ವೃದ್ಧಿಯಾಗುತ್ತದೆ.

Write A Comment