ಕರ್ನಾಟಕ

ಸರ್ಕಾರದ ವಿರುದ್ಧ ಬೀದಿಗಿಳಿದ ಬಿಜೆಪಿ : ಬೃಹತ್ ಪ್ರತಿಭಟನೆ

Pinterest LinkedIn Tumblr

bjp

ಬೆಂಗಳೂರು, ಜ.7-ದ್ವಿಚಕ್ರ ಹಿಂಬದಿ ಸವಾರರಿಗೆ ಕಡ್ಡಾಯ ಹೆಲ್ಮೆಟ್, ಹಾಲಿನ ದರ ಹೆಚ್ಚಳ, ಕುಸಿಯುತ್ತಿರುವ ಕಾನೂನು ಸುವ್ಯವಸ್ಥೆ ವಿರೋಧಿಸಿ ಬೆಂಗಳೂರು ಬಿಜೆಪಿ ಘಟಕ  ಬೃಹತ್ ಪ್ರತಿಭಟನೆ ನಡೆಸಿತು. ನಗರದ ಟೌನ್‌ಹಾಲ್ ಮುಂಭಾಗ ಶಾಸಕರು, ಬಿಬಿಎಂಪಿ ಸದಸ್ಯರು, ಬಿಜೆಪಿ ನಗರ ಘಟಕದ ನೂರಾರು ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿ  ಸರ್ಕಾರದ ವಿರುದ್ಧ ಕಿಡಿಕಾರಿದರು. ಸರ್ಕಾರ ಹಾಲಿನ ಏರಿಕೆ ಮಾಡುವುದರ ಮೂಲಕ ಜನಸಾಮಾನ್ಯರಿಗೆ ಹೊರೆ ಮಾಡಿದೆ.  ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಗಮನದಲ್ಲಿಟ್ಟುಕೊಂಡು ರೈತರ ಮೂಗಿಗೆ ತುಪ್ಪ ಸವರುವ ಕೆಲಸ  ಸರ್ಕಾರ ಮಾಡಿದೆ ಎಂದು ಪ್ರತಿಭಟನಾ ನಿರತರು ಹರಿಹಾಯ್ದರು.

ಇದೇ ವೇಳೆ  ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಮುನಿರಾಜು ಅವರು, ಸರ್ಕಾರ ಅನೇಕ ಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಜೊತೆಗೆ ಬೆಲೆ ಹೆಚ್ಚಳ ಮಾಡುವುದರ ಮೂಲಕ ಜನಸಾಮಾನ್ಯರಿಗೆ ಈ ಸರ್ಕಾರ ಹೊರೆಯಾಗಿ ಪರಿಣಮಿಸಿದೆ ಎಂದು ಆರೋಪಿಸಿದರು.

ಹಾಲಿನ ದರ ಹೆಚ್ಚಳ ಮಾಡುವಂತೆ ರೈತರು ಪ್ರಸ್ತಾವನೆ ಮಾಡಿರಲಿಲ್ಲ. ಸರ್ಕಾರ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಗಮನದಲ್ಲಿಟ್ಟುಕೊಂಡು ಹೆಚ್ಚು ಸ್ಥಾನ ಗಳಿಸಬೇಕೆಂಬ ಉದ್ದೇಶದಿಂದ ಈ ತಂತ್ರ ಅನುಸರಿಸಿದೆ ಎಂದು ಟೀಕಿಸಿದರು. ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ದ್ವಿಚಕ್ರವಾಹನ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಹಾಗೂ ಏಕಾಏಕಿ ಪ್ರತಿ ಲೀಟರ್ ಹಾಲಿಗೆ 4 ರೂ. ಹೆಚ್ಚಳ ಮಾಡಿರುವ ಸರ್ಕಾರ ಡಬಲ್ ಶಾಕ್ ನೀಡಿದೆ. ಇದು ಜನವಿರೋಧಿ ಸರ್ಕಾರ ಎಂದು ಆಪಾದಿಸಿದರು.

ಸರ್ಕಾರ  ಕೂಡಲೇ ಹಾಲಿನ ದರ ಹೆಚ್ಚಳವನ್ನು ಹಿಂಪಡೆಯಬೇಕು. ಅಲ್ಲದೆ, ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೆ ಹೆಲ್ಮೆಟ್ ಮಾಡಿರುವುದನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಈ ಬಗ್ಗೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು. ಶಾಸಕ ವಿಜಯ್‌ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅನೇಕ ಭಾಗ್ಯ ಯೋಜನೆಗಳನ್ನು ಜಾರಿ ಮಾಡಿದ್ದರು. ಇದರ ಜೊತೆಗೆ ಬೆಲೆ ಹೆಚ್ಚಳ ಯೋಜನೆಯನ್ನು ಜಾರಿ ಮಾಡಲಿ ಎಂದು ವ್ಯಂಗ್ಯವಾಡಿದರು. ಪ್ರತಿಭಟನೆಯಲ್ಲಿ ಬಿಬಿಎಂಪಿ ಬಿಜೆಪಿ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.

Write A Comment