ಕರ್ನಾಟಕ

ಬೆಂಗಳೂರಿನಲ್ಲೂ ಸಮ-ಬೆಸ ಸೂತ್ರ ಬರಲಿ : ಎಎಪಿ

Pinterest LinkedIn Tumblr

samaಬೆಂಗಳೂರು, ಜ.8- ನವದೆಹಲಿಯಲ್ಲಿ ಎಎಪಿ ಸರ್ಕಾರ ಪರಿಸರ ಮಾಲಿನ್ಯ ತಪ್ಪಿಸಲು ಹಾಗೂ ಸಂಚಾರದಟ್ಟಣೆ ಕಡಿಮೆ ಮಾಡಲು ಅನುಸರಿಸಿರುವ ಸಮ-ಬೆಸ ಸೂತ್ರವನ್ನು ರಾಜ್ಯ ಸರ್ಕಾರ ಬೆಂಗಳೂರಿನಲ್ಲೂ ಅಳವಡಿಸಿಕೊಳ್ಳಬೇಕೆಂದು ಆಮ್‌ಆದ್ಮಿ ಪಕ್ಷದ ಸಂಚಾಲಕ ಸಿದ್ಧಾರ್ಥಾನಾಥ್ ಶರ್ಮ, ಸಹ ಸಂಚಾಲಕ ಬಿ.ಕೆ.ಮಾನಸ್, ಕೋಶಾಧ್ಯಕ್ಷ ಹರಿಹರನ್ ಸಲಹೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನವದೆಹಲಿಯಲ್ಲಿ ಸಮ-ಬೆಸ ಸೂತ್ರ ಜಾರಿಗೆ ತಂದಿರುವುದರಿಂದ ಸಂಚಾರದಟ್ಟಣೆ ಕಡಿಮೆಯಾಗಿದೆ. ಪರಿಸರ ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಿದೆ. ಇದನ್ನು ಮಾಲಿನ್ಯ ನಿಯಂತ್ರಣ ಮಂಡಳಿಯವರು ಅಲ್ಲಿ 18 ಕಡೆ ಪರಿಶೀಲನೆ ಮಾಡಿ ತಿಳಿಸಿದ್ದಾರೆ ಎಂದು ಹೇಳಿದರು.

ಅತ್ಯಂತ ಹೆಚ್ಚು ಮಾಲಿನ್ಯ ನಗರಗಳಲ್ಲಿ ದೆಹಲಿ ಹೊರತು ಪಡಿಸಿದರೆ ಬೆಂಗಳೂರು ಮೊದಲಾಗುತ್ತದೆ. ಅದೇ ರೀತಿ ಸಂಚಾರ ದಟ್ಟಣೆಯೂ ಇದೆ. ಇದನ್ನು ಹಲವು ಸಂಸ್ಥೆಗಳು ಸಮೀಕ್ಷೆ ನಡೆಸಿ ತಿಳಿಯಪಡಿಸಿದೆ. 85ಲಕ್ಷಕ್ಕೂ ಹೆಚ್ಚು ವಾಹನಗಳಿವೆ. ಶೇ.21ರಷ್ಟು ಟ್ಯಾಕ್ಸಿಯೇತರ ವಾಹನಗಳು ಸಂಚರಿಸುತ್ತವೆ. ಸುಮಾರು 25 ಲಕ್ಷ ದ್ವಿಚಕ್ರವಾಹನಗಳು ಚಲಿಸುತ್ತವೆ. ಇದರಿಂದಾಗಿ ಅತೀವ ವಾಯುಮಾಲಿನ್ಯ ಉಂಟಾಗುತ್ತದೆ. ಹಾಗಾಗಿ 6 ವರ್ಷ ಮೇಲ್ಪಟ್ಟ ಶೇ.14ರಷ್ಟು ಮಕ್ಕಳಿಗೆ ಶ್ವಾಶಕೋಶ ತೊಂದರೆ ಕಾಡುತ್ತಿದೆ. ಶೇ.22ರಷ್ಟು ಮಕ್ಕಳಿಗೆ ಕೆಟ್ಟ ಆರೋಗ್ಯ ಇದೆ. ಹಿರಿಯರು ಹೃದಯ ಸಂಬಂಧಿ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಹಾಗಾಗಿ ದೆಹಲಿ ಮಾದರಿಯಲ್ಲಿ ಬೆಂಗಳೂರಿನಲ್ಲೂ ಸಮ-ಬೆಸ ಸೂತ್ರ ಅಳವಡಿಸಿಕೊಳ್ಳಬೇಕು.

ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾವು ಪತ್ರ ಬರೆದಿದ್ದೇವೆ. ಪ್ರಾರಂಭದಲ್ಲಿ ಕೆಲವು ಅಡೆ-ತಡೆ ಎದುರಾಗುತ್ತದೆ. ಆದರೂ ಇದನ್ನು ಜಾರಿಗೆ ತರುವುದು ಒಳಿತು. ಇದಕ್ಕೆ ಆಪ್ ಎಲ್ಲ ಸಹಕಾರ ಕೊಡುತ್ತದೆ ಎಂದು ಸಿದ್ಧಾರ್ಥನಾಥ್ ಶರ್ಮ ತಿಳಿಸಿದರು.

Write A Comment