ಕರ್ನಾಟಕ

ನಾವೆಲ್ಲರೂ ಹಿಂದೂಗಳು; ನಮ್ಮದು ಹಿಂದೂರಾಷ್ಟ್ರ: ಭಾಗವತ್‌

Pinterest LinkedIn Tumblr

RSS-10-1ಬೆಂಗಳೂರು: ‘ಎಲ್ಲರೂ ಒಪ್ಪಲಿಕ್ಕಿಲ್ಲ ಅಥವಾ ಗೊತ್ತೂ ಇರಲಿಕ್ಕಿಲ್ಲ. ನಾವೆಲ್ಲರೂ ಹಿಂದೂಗಳೇ. ನಮ್ಮದು ಹಿಂದೂ ರಾಷ್ಟ್ರ’ ಎಂದು ಆರೆಸ್ಸೆಸ್‌ ಸರಸಂಘ ಚಾಲಕ ಮೋಹನ್‌ ಭಾಗವತ್‌ ಪ್ರತಿಪಾದಿಸಿದ್ದಾರೆ.

‘ನಮ್ಮ ಆಚರಣೆಗಳು, ಸಂಪ್ರದಾಯಗಳು ವಿಭಿನ್ನವಾಗಿರಬಹುದು. ಆದರೆ, ಅವೆಲ್ಲವುಗಳ ಮೂಲ ಮತ್ತು ಮೌಲ್ಯಗಳು ಒಂದೇ ಆಗಿವೆ. ಆ ಮೂಲ ಸಂಸ್ಕೃತಿಯೊಂದಿಗೆ ನಾವು ಗುರುತಿಸಿಕೊಂಡಿದ್ದೇವೆ. ಇದನ್ನು ಎಲ್ಲರೂ ಒಪ್ಪಲಿಕ್ಕಿಲ್ಲ ಅಥವಾ ಎಲ್ಲರಿಗೂ ತಿಳಿದಿರಲಿಕ್ಕಿಲ್ಲ. ಇದು ಹಿಂದೂ ರಾಷ್ಟ್ರ ಹಾಗೂ ಇಲ್ಲಿರುವವರೆಲ್ಲರೂ ಹಿಂದೂಗಳೇ’ ಎಂದೂ ಅವರು ಹೇಳಿದ್ದಾರೆ. ರವಿವಾರ ಯಲಹಂಕದ ರೇವಾ ವಿಶ್ವವಿದ್ಯಾಲಯ ಆವರಣದಲ್ಲಿ ಆರೆಸ್ಸೆಸ್‌ನ ಅಖೀಲ ಭಾರತೀಯ ಶೃಂಗ ವಾದ್ಯ ಶಿಬಿರ ‘ಸ್ವರಾಂಜಲಿ’ಯ ಸಮಾರೋಪ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ನೀಡಿದರು.

ಸ್ವಯಂ ಸೇವಕರಿಗೆ ‘ಸಮನ್ವಯದ ಮಂತ್ರ’ ಹೇಳಿದ ಮೋಹನ್‌ ಭಾಗವತ್‌, ವಿವಿಧತೆಯಲ್ಲಿ ನಾವಿನ್ನೂ ಏಕತೆಯನ್ನು ಸಾಧಿಸಿಲ್ಲ. ಅದು ಸಂಘರ್ಷದೊಂದಿಗೆ ಆಗುವ ಕೆಲಸವಲ್ಲ. ವಿವಿಧತೆಯನ್ನು ಸ್ವೀಕರಿಸಿ, ಗೌರವಿಸಬೇಕು. ವ್ಯಕ್ತಿ-ವ್ಯಕ್ತಿಯೊಂದಿಗೆ, ಸಮೂಹದೊಂದಿಗೆ ಸಮನ್ವಯ ಸಾಧಿಸಬೇಕು. ಆ ಮೂಲಕ ಏಕತೆಯ ಸಾಕ್ಷಾತ್ಕಾರ ಕಂಡುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಅಪೂರ್ಣ ದೃಷ್ಟಿಕೋನ ಹಾಗೂ ಮೌಲ್ಯಗಳಿಂದಲೇ ವಿಶ್ವದಲ್ಲಿ ಈಗಿನ ಎಲ್ಲ ಸಂಘರ್ಷಗಳು, ಸಂಕಟಗಳು ಸೃಷ್ಟಿಯಾಗುತ್ತಿವೆ. ವಿಶ್ವ ಎದುರಿಸುತ್ತಿರುವ ಈ ಸಮಸ್ಯೆಗಳಿಗೆ ಪರಿಪೂರ್ಣ ದೃಷ್ಟಿಕೋನಗಳನ್ನು ಹೊಂದಿರುವ ಭಾರತೀಯ ಮೌಲ್ಯಗಳು ಪರಿಹಾರ ನೀಡಬಲ್ಲವು. ಈ ಹಿಂದೂ ಮೌಲ್ಯವನ್ನು ಪ್ರತಿಷ್ಠಾಪಿಸಲು ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯಬಲ್ಲ ಸಾತ್ವಿಕ ಕಾರ್ಯಕರ್ತ ಬೇಕಿದೆ ಎಂದು ಹೇಳಿದರು.

ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಇತ್ತೀಚೆಗೆ ಕಂಡುಕೊಂಡಿದ್ದಲ್ಲ. ಅನಾದಿಕಾಲದಿಂದಲೂ ಈ ದೇಶದಲ್ಲಿದೆ. ಒಂದು ಮರವನ್ನು ಕಡಿಯುವ ಮುನ್ನ ಹತ್ತು ಸಸಿಗಳನ್ನು ನೆಟ್ಟು, ಅವು ಬೆಳೆದ ನಂತರ ಕತ್ತರಿಸಬೇಕು ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ಭಾರತದಲ್ಲಿರುವ ಎಲ್ಲ ಧರ್ಮಗಳೂ ಇದನ್ನೇ ಹೇಳುತ್ತವೆ. ಆದರೆ, ಅದನ್ನು ಹೇಳುವ ರೀತಿ ಬೇರೆಯಾಗಿದೆ ಅಷ್ಟೇ ಎಂದು ತಿಳಿಸಿದರು.

ವಿಫ‌ಲನಾದಾಗ ನೈತಿಕ ಹೊಣೆಯನ್ನು ತಾನೊಬ್ಬನೇ ಹೊರುವ ಹಾಗೂ ಯಶಸ್ಸು ಸಿಕ್ಕಾಗ ಇಡೀ ತಂಡಕ್ಕೆ ಸಮರ್ಪಿಸುವಂತಹ ನಿಸ್ವಾರ್ಥ ಸಾತ್ವಿಕ ಕಾರ್ಯಕರ್ತರನ್ನು ತಯಾರುಮಾಡುವ ವಿಧಾನ ಇರುವುದು ಆರೆಸ್ಸೆಸ್‌ನಲ್ಲಿ ಎಂದ ಅವರು, ಕೇವಲ ಕಾರ್ಯಕರ್ತರ ಶಿಸ್ತುಬದ್ಧ ಶೃಂಗವಾದ್ಯವನ್ನು ಆನಂದಿಸುವ ಪ್ರೇಕ್ಷಕರಾಗಿ ಉಳಿಬೇಡಿ. ದಯವಿಟ್ಟು ಆರೆಸ್ಸೆಸ್‌ನ ಸ್ವಯಂ ಸೇವಕರಾಗಿ. ಯೋಗ್ಯತೆಯನ್ನು ಗಳಿಸಿರಿ. ನಿಮಗೆ ಸಮಯ ಸಿಕ್ಕಾಗೆಲ್ಲಾ ಸಂಘದಡಿ ಕೆಲಸ ಮಾಡಿ, ಆ ಮೂಲಕ ದೇಶದ ಉನ್ನತಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.

ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್‌ ಮಾತನಾಡಿ, ಸೋತಾಗ ಅದರ ಹೊಣೆಯನ್ನು ತಾನೊಬ್ಬನೇ ಹೊರುವ ಹಾಗೂ ಗೆದ್ದಾಗ ಅದರ ಯಶಸ್ಸನ್ನು ಇಡೀ ತಂಡಕ್ಕೆ ಸಲ್ಲಿಸುವುದು ಒಳ್ಳೆಯ ನಾಯಕತ್ವದ ಲಕ್ಷಣ ಎಂದರು.

ದಕ್ಷಿಣ ಮಧ್ಯ ಕ್ಷೇತ್ರೀಯ ಸರಸಂಘ ಸಂಚಾಲಕ ವಿ. ನಾಗರಾಜ್‌, ದಕ್ಷಿಣ ಮಧ್ಯ ಕ್ಷೇತ್ರೀಯ ಶಾರೀರಿಕ್‌ ಶಿಕ್ಷಣ ಪ್ರಮುಖ ಸುಧೀರ್‌ ಗಾರ್ಗೇರ್‌ ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ದೇಶದ 406 ಆರೆಸ್ಸೆಸ್‌ ಘಟಕಗಳಿಂದ  ಪಾಲ್ಗೊಂಡಿದ್ದ 2,185 ಶೃಂಗಘೋಷ್‌ ವಾದಕರಿಂದ ಆಕರ್ಷಕ ಶೃಂಗವಾದ್ಯ ಪ್ರದರ್ಶನ ನಡೆಯಿತು.

ಪ್ರೇಕ್ಷಕರ ಸಾಲಿನಲ್ಲಿ ಬಿಜೆಪಿ ನಾಯಕರು!
ಶೃಂಗವಾದ್ಯ ಶಿಬಿರದಲ್ಲಿ ಬಿಜೆಪಿಯ ಪ್ರಮುಖ ನಾಯಕರು ಪ್ರೇಕ್ಷಕರ ಗ್ಯಾಲರಿಗೆ ಸೀಮಿತವಾದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕೇಂದ್ರದ ಕಾನೂನು ಸಚಿವ ಡಿ.ವಿ. ಸದಾನಂದಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್‌ ಜೋಶಿ, ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ, ಸಿ.ಟಿ. ರವಿ, ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಪ್ರಮುಖರು ಪ್ರೇಕ್ಷಕರ ಸಾಲಿನಲ್ಲೇ ಕುಳಿತು ಶೃಂಗವಾದ್ಯವನ್ನು ವೀಕ್ಷಿಸಿದರು. ಸಮಾರಂಭದ ಕೊನೆವರೆಗೂ ಹಾಜರಿದ್ದರು.
-ಉದಯವಾಣಿ

Write A Comment