ಕರ್ನಾಟಕ

ಸಂಕ್ರಾಂತಿಗೆ ಮುನ್ನುಡಿ ಬರೆದ ಎಳ್ಳಮಾವಾಸ್ಯೆ

Pinterest LinkedIn Tumblr

elluತೀರ್ಥಹಳ್ಳಿ: ಎಳ್ಳಮಾವಾಸ್ಯೆ ಜಾತ್ರೆ ಅಂಗವಾಗಿ ಭಾನುವಾರ ಇಲ್ಲಿನ ಶ್ರೀ ರಾಮೇಶ್ವರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ತುಂಗಾನದಿಯ ಪರಶುರಾಮಕೊಂಡದಲ್ಲಿ ಸಹಸ್ರಾರು ಭಕ್ತರು ಮಿಂದು ಪುನೀತರಾದರು.

ಬೆಳಗಿನ ಜಾವ ಶ್ರೀರಾಮೇಶ್ವರ ದೇವರ ಉತ್ಸವ ಮೂರ್ತಿಯನ್ನು ತುಂಗಾನದಿಗೆ ಕರೆತಂದು ಧಾರ್ವಿುಕ ವಿಧಿಗಳನ್ನು ಪೂರೈಸಲಾಯಿತು. ಪರಶುರಾಮಕೊಂಡಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಆರಂಭಗೊಂಡ ತೀರ್ಥಸ್ನಾನ ಸಂಜೆಯವರೆಗೂ ನಡೆಯಿತು.

ರಥೋತ್ಸವ: ಶ್ರೀರಾಮೇಶ್ವರ ದೇವರ ರಥೋತ್ಸವ ಕಳೆದ ವರ್ಷದಂತೆ ಈ ಬಾರಿ ಕೂಡ ತೀರ್ಥಸ್ನಾನದ ದಿನವೇ ನಡೆದಿದ್ದು ವಿಶೇಷವಾಗಿತ್ತು. ಮಧ್ಯಾಹ್ನ ನಡೆದ ರಥೋತ್ಸವದಲ್ಲಿ ತಾಲೂಕು ಮುಜರಾಯಿ ಅಧಿಕಾರಿಗಳಾದ ತಹಸೀಲ್ದಾರ್ ಲೋಕೇಶಪ್ಪ ಮೊದಲಿಗೆ ಪೂಜೆ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್, ತೆಪ್ಪೋತ್ಸವ ಸಮಿತಿ ಅಧ್ಯಕ್ಷ ಪಾಂಡುರಂಗಪ್ಪ, ಮಾರಿಕಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ನಾಗರಾಜ ಶೆಟ್ಟಿ ಮತ್ತಿತರರು ರಥೋತ್ಸವದಲ್ಲಿ ಪಾಲ್ಗೊಂಡರು.

ಬಿಗಿ ಬಂದೋಬಸ್ತ್: ಈ ಬಾರಿ ಜಾತ್ರೆಯಲ್ಲಿ ನಿರೀಕ್ಷೆಗೂ ಮೀರಿದ ಜನಸಂದಣಿಯಿತ್ತು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪೂರ್ವವಲಯ ಐಜಿ ಎಂ. ನಂಜುಂಡಸ್ವಾಮಿ ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯದ ಪರಿಶೀಲನೆ ನಡೆಸಿದರು.

ಸಂಕ್ರಾಂತಿಗೆ ಮುನ್ನುಡಿ ಬರೆಯುವ ಎಳ್ಳಮಾವಾಸ್ಯೆ ಭಾನುವಾರ ರಾಜ್ಯಾದ್ಯಂತ ಆಚರಣೆಗೊಂಡಿತು. ಕಲಬುರಗಿ ಭಾಗದಲ್ಲಿ ಹೊಲಕ್ಕೆ ತೆರಳಿ ಚರಗಾ ಚೆಲ್ಲಿ ರೈತರು ಸಂಭ್ರಮಿಸಿದರೆ, ಚಾಮರಾಜನಗರದ ಮಹದೇಶ್ವರಬೆಟ್ಟದಲ್ಲಿ ಮಾದಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ ಕೃತಾರ್ಥರಾದರು. ಶಿವಮೊಗ್ಗದ ತೀರ್ಥಹಳ್ಳಿ ಸುತ್ತಲಿನ ಜನ ತುಂಗಾ ನದಿಯಲ್ಲಿ ಮಿಂದೆದ್ದು, ರಾಮೇಶ್ವರ ರಥೋತ್ಸವದಲ್ಲಿ ಭಾಗಿಯಾದರು. ಮಂಗಳೂರು, ಉಡುಪಿಗಳಲ್ಲಿ ಸಮುದ್ರಸ್ನಾನ ಮಾಡಿ ಖುಷಿಪಟ್ಟರು. ಹೀಗೆ ರಾಜ್ಯದ ವಿವಿಧೆಡೆ ನಡೆದ ಎಳ್ಳಮಾವಾಸ್ಯೆಯ ನೋಟ ಇಲ್ಲಿದೆ.

ಭೂತಾಯಿಗೆ ಉಧೋ ಉಧೋ…

ಕಲಬುರಗಿ: ಪ್ರಸಕ್ತ ವರ್ಷ ಮಳೆೆ ಕೈಕೊಟ್ಟಿದ್ದರಿಂದ ರೈತರಲ್ಲಿ ಹರ್ಷವಿಲ್ಲ. ಭೂಮಾತೆ ಮಡಿಲು ಬರಿದಾಗಿದೆ. ಆದರೂ ಸಂಪ್ರದಾಯದಂತೆ ಎಳ್ಳಮಾವಾಸ್ಯೆ ಆಚರಿಸಿ ಸಂಭ್ರಮಿಸಿದ್ದು ಕಂಡುಬಂತು.

ನಗರದಲ್ಲಿ ಉದ್ಯಾನವನ, ಅಕ್ಕಪಕ್ಕದ ಹೊಲಗಳಿಗೆ ತೆರಳಿ ಸಾಮೂಹಿಕ ಭೋಜನ ಮಾಡಿದರು. ಉದ್ಯಾನವನಗಳಂತೂ ಸಾರ್ವಜನಿಕರಿಂದ ತುಂಬಿಹೋಗಿತ್ತು. ಸಜ್ಜೆ ರೊಟ್ಟಿ, ಕಡಬು, ಬಜ್ಜಿ (ಪಲ್ಯ) ಸವಿದರು.

ಗ್ರಾಮೀಣ ಭಾಗದಲ್ಲಿ ಈ ಅಮಾವಾಸ್ಯೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಭೂಮಾತೆಗೆ ಸೀಮಂತ ಮಾಡುವ ವಾಡಿಕೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಲಿತವಿದೆ. ಚರಗಾ ಚೆಲ್ಲುವುದು ಇನ್ನೊಂದು ವೈಶಿಷ್ಟ್ಯ ಈ ವರ್ಷ ಹೊಲಗಳಲ್ಲಿ ಬೆಳೆಗಳೇ ಇಲ್ಲದ ಕಾರಣ ಚರಗಾ ಚೆಲ್ಲುವ ದೃಶ್ಯ ಹೆಚ್ಚಾಗಿ ಕಂಡುಬರಲಿಲ್ಲ.

ಮಹದೇಶ್ವರಬೆಟ್ಟದಲ್ಲಿ ವಿಶೇಷ ಪೂಜೆ

ಹನೂರು(ಚಾಮರಾಜನಗರ): ಇಲ್ಲಿನ ಮಲೆಮಹದೇಶ್ವರ ಬೆಟ್ಟಕ್ಕೆ ಎಳ್ಳಮಾವಾಸ್ಯೆ ಪ್ರಯುಕ್ತ ಸಾವಿರಾರು ಭಕ್ತರು ಭಾನುವಾರ ಮಾದಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಅಮಾವಾಸ್ಯೆ ಅಂಗವಾಗಿ ಭಾನುವಾರ ಮುಂಜಾನೆ 4ರಿಂದ 6 ಗಂಟೆವರೆಗೆ ದೇಗುಲದಲ್ಲಿ ವಿಶೇಷ ಅಭಿಷೇಕ, ಬಿಲ್ವಾರ್ಚನೆ ಹಾಗೂ ಇನ್ನಿತರ ವಿಶೇಷ ಪೂಜೆ-ಪುನಸ್ಕಾರಗಳು ಜರುಗಿದವು. ವಿವಿಧ ಪುಷ್ಪಗಳಿಂದ ದೇಗುಲವನ್ನು ಅಲಂಕರಿಸಲಾಗಿತ್ತು. ದೇವಸ್ಥಾನದ ಸುತ್ತ ಹುಲಿವಾಹನ, ರುದ್ರಾಕ್ಷಿವಾಹನ ಹಾಗೂ ಬಸವವಾಹನವನ್ನು ಪ್ರದಕ್ಷಿಣೆ ಮಾಡಲಾಯಿತು. ಈ ವೇಳೆ ಹರಕೆ ಹೊತ್ತ ಭಕ್ತರು ದವಸ, ಧಾನ್ಯ, ಹಣ ಸೇರಿ ಇನ್ನಿತರ ವಸ್ತುಗಳನ್ನು ಉತ್ಸವಗಳಿಗೆ ಎಸೆದು ಭಕ್ತಿ ಸಮರ್ಪಿಸಿದರು. ಇನ್ನೂ ಕೆಲವರು ದಂಡಿನ ಕೋಲನ್ನು ಹೊತ್ತು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಬೆಳಗ್ಗೆಯಿಂದಲೇ ಭಕ್ತರು ಅಂತರಗಂಗೆಯಲ್ಲಿ ಪುಣ್ಯಸ್ನಾನ ಮಾಡಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರಲ್ಲದೆ, ಆಲಂಬಾಡಿ ಬಸವನಿಗೂ ಪೂಜೆ ಸಲ್ಲಿಸಿದರು. ಹರಕೆಹೊತ್ತ ಭಕ್ತರು ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ದೇವಸ್ಥಾನದ ಸುತ್ತ ಕಸ ತೆಗೆಯುವ ಕಾರ್ಯವನ್ನು ಕೈಗೊಂಡರು. ಚಾಮರಾಜನಗರ, ಬೆಂಗಳೂರು, ಮೈಸೂರು, ಮಳವಳ್ಳಿ, ಮಂಡ್ಯ, ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

Write A Comment