ಕರ್ನಾಟಕ

ವೈಟ್‌ಫೀಲ್ಡ್‌ ಪ್ರದೇಶದಲ್ಲಿ ಹೆಚ್ಚಿದ ಸಂಚಾರ ದಟ್ಟಣೆ: ಗುಳೆ ಹೊರಟ ಐಟಿ ಕಂಪೆನಿಗಳು

Pinterest LinkedIn Tumblr

wfieldwebಬೆಂಗಳೂರು: ವೈಟ್‌ಫೀಲ್ಡ್‌ ಸುತ್ತಲಿನ ಪ್ರದೇಶದಲ್ಲಿ ಮೂಲಸೌಕರ್ಯ ಒದಗಿಸುವಲ್ಲಿ ರಾಜ್ಯ ಸರ್ಕಾರ ತೋರುತ್ತಿರುವ ವಿಳಂಬ ಧೋರಣೆಗೆ ಬೇಸತ್ತ ಹಲವು ಐಟಿ ಮತ್ತು ಐಟಿ ಆಧಾರಿತ ಸೇವಾ (ಐಟಿಇಎಸ್‌) ಉದ್ಯಮಗಳು ನಗರದ ತಮ್ಮ ವಿಸ್ತರಣಾ ಯೋಜನೆಗಳನ್ನು ಕೈಬಿಡಲು ನಿರ್ಧರಿಸಿವೆ.

ಸಂಚಾರ ದಟ್ಟಣೆಯಿಂದ ಉದ್ಯೋಗಿಗಳು ಸಕಾಲಕ್ಕೆ ಕಚೇರಿ ತಲುಪಲು ಸಾಧ್ಯವಾಗದೆ ಉತ್ಪಾದನಾ ಸಾಮರ್ಥ್ಯದಲ್ಲಿ ಕುಸಿತ ಉಂಟಾಗಿದೆ ಎಂಬುದು ಹಲವು ಸಂಸ್ಥೆಗಳ ಮುಖ್ಯಸ್ಥರ ದೂರಾಗಿದೆ.

ನಗರದ ಬದಲು ಹೈದರಾಬಾದ್‌, ಪುಣೆ, ನವಿ ಮುಂಬೈ ಮತ್ತಿತರ ಕಡೆಗಳಲ್ಲಿ ತಮ್ಮ ವಿಸ್ತರಣಾ ಶಾಖೆಗಳನ್ನು ತೆರೆಯಲು ಐಟಿ ಕಂಪೆನಿಗಳು ಚಿಂತಿಸುತ್ತಿವೆ. ಹೊರವರ್ತುಲ ರಸ್ತೆ ಕಂಪೆನಿಗಳ ಸಂಸ್ಥೆ (ಒಆರ್‌ಆರ್‌ಸಿಎ) ಮಾಡಿರುವ ಅಂದಾಜಿನ ಪ್ರಕಾರ ಸಂಚಾರ ದಟ್ಟಣೆಯಿಂದ ಪ್ರತಿವರ್ಷ ₹ 22,770 ಕೋಟಿಯಷ್ಟು ಹಾನಿಯನ್ನು  ಅಲ್ಲಿನ ಕಂಪೆನಿಗಳು ಅನುಭವಿಸುತ್ತಿವೆ.

ಹೊರವರ್ತುಲ ರಸ್ತೆ ಮತ್ತು ವೈಟ್‌ಫೀಲ್ಡ್‌ ಪ್ರದೇಶದ ಐಟಿ ಕಂಪೆನಿಗಳಲ್ಲಿ ನಾಲ್ಕು ಲಕ್ಷ ಟೆಕ್ಕಿಗಳು ಕೆಲಸ ಮಾಡುತ್ತಿದ್ದಾರೆ. ‘ನಮ್ಮ ಉದ್ಯೋಗಿಗಳು ಪ್ರತಿದಿನ ಕಚೇರಿ ತಲುಪಲು ನಾಲ್ಕೈದು ಗಂಟೆ ಹಿಡಿಯುತ್ತಿದೆ. ಎಲ್ಲರಿಗೂ ಈ ಸಮಸ್ಯೆ ಕಳವಳ ಉಂಟುಮಾಡಿದೆ’ ಎನ್ನುತ್ತಾರೆ ಬ್ರಾಡ್‌ಕಾಮ್‌ ಇಂಡಿಯಾದ ಉಪಾಧ್ಯಕ್ಷ ವಿನೋದ್‌ ಚಂದ್ರ.

ಬ್ರಾಡ್‌ಕಾಮ್‌ ಇಂಡಿಯಾ ಸಂಸ್ಥೆ ನಗರದ ವಿಸ್ತರಣಾ ಯೋಜನೆಯನ್ನು ಕೈಬಿಟ್ಟಿದ್ದು, ನವಿ ಮುಂಬೈ ಕಡೆಗೆ ಮುಖಮಾಡಿದೆ. ‘ಅಲ್ಲಿ ಪ್ರಯಾಣದ ವೇಳೆ ತುಂಬಾ ಕಡಿಮೆಯಾಗಿದೆ. ಅಲ್ಲದೆ ಸಮೂಹ ಸಾರಿಗೆ ವ್ಯವಸ್ಥೆ ಚೆನ್ನಾಗಿದೆ’ ಎಂದು ವಿನೋದ್‌ ಚಂದ್ರ ಹೇಳುತ್ತಾರೆ.

‘ಜಗತ್ತಿನ ಎಲ್ಲ ಭಾಗದ ಗ್ರಾಹಕರನ್ನು ನಾವು ಹೊಂದಿದ್ದೇವೆ. ಬೆಂಗಳೂರಿನಲ್ಲಿ ಒಂದು ಕಿ.ಮೀ. ದೂರ ಪ್ರಯಾಣಿಸಲು ಎಷ್ಟೊಂದು ಸಮಯ ಬೇಕಾಗುತ್ತದೆ ಎಂಬುದು ಅವರಿಗೂ ಗೊತ್ತಿದೆ. ಉತ್ಪಾದನಾ ಸಾಮರ್ಥ್ಯದ ಮೇಲೆ ಸಂಚಾರ ದಟ್ಟಣೆ ಗಂಭೀರ ಸವಾಲೊಡ್ಡಿದೆ’ ಎಂದು ವಿವರಿಸುತ್ತಾರೆ ಇಎಂಸಿ ಕಾರ್ಪೋರೇಷನ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸರ್ವ ಸರವಣನ್‌.

ಆರು ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸದಿದ್ದರೆ ನಮ್ಮ ವಿಸ್ತರಣಾ ಯೋಜನೆಗಾಗಿ ಹೈದರಾಬಾದ್‌ ಇಲ್ಲವೆ ಪುಣೆಯತ್ತ ಚಿತ್ತ ಹರಿಸುವುದು ಅನಿವಾರ್ಯ ಎಂದು ಅವರು ಹೇಳುತ್ತಾರೆ. ಸರವಣನ್‌ ಅವರ ಮಾತಿಗೆ ಇ–ಬೇ ಪ್ರೊಡಕ್ಟ್‌ ಡೆವಲಪ್‌ಮೆಂಟ್‌ ಸೆಂಟರ್‌ನ ಪ್ರಧಾನ ವ್ಯವಸ್ಥಾಪಕ ರಾಮ್‌ ನಾರಾಯಣನ್‌ ಸಹ ಧ್ವನಿಗೂಡಿಸುತ್ತಾರೆ.

ಐಟಿ ಸಚಿವ ಎಸ್‌.ಆರ್‌. ಪಾಟೀಲ ಅವರನ್ನು ಈ ಕುರಿತು ಪ್ರಶ್ನಿಸಿದರೆ, ‘ಕಂಪೆನಿಗಳ ಸಮಸ್ಯೆಗೆ ಸ್ಪಂದಿಸಲು ಕನಿಷ್ಠ ಒಂದು ವರ್ಷ ಬೇಕು’ ಎಂದು ಉತ್ತರಿಸುತ್ತಾರೆ.

Write A Comment