ಕರ್ನಾಟಕ

ರೈತರೇ, ಇನ್ಮುಂದೆ ನಿಮ್ಮ ಬೆಳೆಗೆ ನೀವೇ ಬೆಲೆ ಹೇಳಿ!

Pinterest LinkedIn Tumblr

11BNP14ಬೆಂಗಳೂರು: ರೈತರು ತಮ್ಮ ಬೆಳೆಗಳಿಗೆ ಈಗ ತಾವೇ ಬೆಲೆ ನಿಗದಿಪಡಿಸಬಹುದು! ರಾಜ್ಯ ಸರ್ಕಾರ ಬೆಲೆ ಆಯೋಗವನ್ನೇ ಸ್ಥಾಪಿಸಿದ್ದರೂ ಸ್ಪರ್ಧಾತ್ಮಕ ಬೆಲೆ ಇನ್ನೂ ದೊರಕುತ್ತಿಲ್ಲ ಎಂಬ ಕೂಗು ನಿಲ್ಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸ್ವತಃ ರೈತರು ತಮ್ಮ ಬೆಳೆಗಳಿಗೆ ತಾವೇ ಬೆಲೆ ನಿಗದಿಪಡಿಸಬಹುದಾದಂತಹ ವ್ಯವಸ್ಥೆಯೊಂದು ಜಾರಿಗೆ ಬಂದಿದೆ.

ಟಿಜಿಎಸ್‌ ಗ್ರೂಪ್ಸ್‌ ಅಂತಹದ್ದೊಂದು ಅವಕಾಶ ಕಲ್ಪಿಸಿದೆ. ಇದಕ್ಕಾಗಿ www.kisanmarket.com ಎಂಬ ವೆಬ್‌ಸೈಟ್‌ ರೂಪಿಸಿದೆ. ಸೋಮವಾರ ನಗರದ ಏಟ್ರಿಯಾ ಹೋಟೆಲ್‌ನಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್‌ ಗುಂಡೂರಾವ್‌ ಇದಕ್ಕೆ ಚಾಲನೆ ನೀಡಿದರು.

ಇದರಲ್ಲಿ ಹೂವು, ಹಣ್ಣು, ತರಕಾರಿ, ಧಾನ್ಯಗಳು, ಮಸಾಲ ಪದಾರ್ಥ, ಕೋಳಿ, ಕುರಿ, ಹಸು, ಮೀನು, ಗೊಬ್ಬರ, ವ್ಯವಸಾಯಕ್ಕೆ ಬೇಕಾಗುವ ಉಪಕರಣಗಳು, ನರ್ಸರಿ, ಸಾವಯವ, ಹತ್ತಿ, ಸೋಲಾರ್‌ ಉಪಕರಣಗಳು ಸೇರಿದಂತೆ ಕೃಷಿ ಸಂಬಂಧಿತ ಯಾವುದೇ ವಸ್ತುಗಳನ್ನು ನೇರವಾಗಿ ರೈತರು ಮಾರಾಟ ಮಾಡಬಹುದು.

ರೈತರು ಮಾಡಬೇಕಾದ್ದಿಷ್ಟು:
ಉತ್ಪನ್ನಗಳನ್ನು ಮಾರಾಟ ಮಾಡಲು ರೈತರು ಈ ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಜಾಹೀರಾತು ಎಂಬಲ್ಲಿ ಕ್ಲಿಕ್‌ ಮಾಡಿ, ಉತ್ಪನ್ನಗಳ ಚಿತ್ರ ಹಾಗೂ ದೂರವಾಣಿ ಸಂಖ್ಯೆಯೊಂದಿಗೆ ಮಾಹಿತಿ ಭರ್ತಿ ಮಾಡಬೇಕು. ನಂತರ ಅದನ್ನು ಸಬ್‌ಮಿಟ್‌ ಮಾಡಿದರೆ ಸಾಕು. ಆ ಬೆಳೆ ಇಷ್ಟವಾದರೆ, ರೈತರನ್ನು ಸಂಪರ್ಕಿಸಿ ವ್ಯಾಪಾರಿಗಳು ಖರೀದಿ ಮಾಡುತ್ತಾರೆ. ಸಾಗಾಣಿಕೆ ವೆಚ್ಚ ಸಾಮಾನ್ಯವಾಗಿ ಖರೀದಿದಾರರ ಮೇಲಿರುತ್ತದೆ. ಆದರೆ, ಅದು ಕೊಡು-ಕೊಳ್ಳುವವನಿಗೆ ಬಿಟ್ಟಿದ್ದು ಎಂದು ವೆಬ್‌ಸೈಟ್‌ ಅಧ್ಯಕ್ಷ ತ್ಯಾಗರಾಜ ರಾಳಪಲ್ಲಿ ಮಾಹಿತಿ ನೀಡಿದರು.

ನೂತನ ವೆಬ್‌ಸೈಟ್‌ನಲ್ಲಿ ಕರ್ನಾಟಕದ 300 ಹಾಗೂ ಮಹಾರಾಷ್ಟ್ರದ 800 ರೈತರು ಸದಸ್ಯತ್ವ ಹೊಂದಿದ್ದಾರೆ. ಅವರೆಲ್ಲರೂ ಕಟಾವಿಗೆ ಬರುವ ಹೊತ್ತಿನಲ್ಲಿ ತಮ್ಮ ಬೆಳೆಯ ಮಾಹಿತಿಯನ್ನು ಇದರಲ್ಲಿ ಹಾಕಲಿದ್ದಾರೆ. ಸದಸ್ಯತ್ವ ಉಚಿತ. ಮತ್ತೂಂದೆಡೆ ಇದನ್ನು ಖರೀದಿಸಲು ರಿಲಾಯನ್ಸ್‌, ಮೋರ್‌ ಸೇರಿದಂತೆ ಹಲವು ಡೀಲರ್‌ಗಳು, ಸಗಟು ವ್ಯಾಪಾರಿಗಳು ಈಗಾಗಲೇ ಸಂಪರ್ಕದಲ್ಲಿದ್ದಾರೆ. ಅವರು ಈ ರೈತರಿಂದ ಬೆಳೆಗಳನ್ನು ಖರೀದಿಸಲಿದ್ದಾರೆ ಎಂದು ಹೇಳಿದರು.

ಕೊರಿಯರ್‌ ಮೂಲಕ ಸಾಗಾಣಿಕೆ?:
ಮುಂದಿನ ದಿನಗಳಲ್ಲಿ ಸಾಗಾಣಿಕೆ ವ್ಯವಸ್ಥೆ ಕಲ್ಪಿಸಲೂ ಚಿಂತನೆ ನಡೆದಿದೆ. ಮಾರಾಟಗಾರನಿಂದ ಖರೀದಿದಾರನಿಗೆ ಸರಕು ತಲುಪಿಸಲು ಸರ್ಕಾರದಲ್ಲಿ ನೋಂದಣಿ ಹೊಂದಿರುವ ಟ್ರಾನ್ಸ್‌ಪೊàರ್ಟರ್ಗೆ ಬಿಡ್‌ ಮೂಲಕ ಅವಕಾಶ ನೀಡಲಾಗುವುದು. ಅಷ್ಟೇ ಅಲ್ಲ, ಕೊರಿಯರ್‌ ಮೂಲಕ ಉತ್ಪನ್ನ ತಲುಪಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ತ್ಯಾಗರಾಜ ರಾಳಪಲ್ಲಿ ತಿಳಿಸಿದರು.

ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದ ದಿನೇಶ್‌ ಗುಂಡೂರಾವ್‌, ಮಾರುಕಟ್ಟೆ ದರದಲ್ಲಿನ ಶೇ. 20ರಷ್ಟು ಬೆಲೆ ಕೂಡ ಆ ಉತ್ಪನ್ನಗಳನ್ನು ಬೆಳೆದ ರೈತನಿಗೆ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ನೂತನ ವೆಬ್‌ಸೈಟ್‌ ರೈತ ಮತ್ತು ಖರೀದಿದಾರನ ನಡುವೆ ನೇರ ಮಾರುಕಟ್ಟೆ ಕಲ್ಪಿಸಲಿದೆ. ಈಗಾಗಲೇ ಸರ್ಕಾರದ ಇ-ಮಾರುಕಟ್ಟೆ ಸೇವೆ ಇದೆ. ಇದಕ್ಕೆ ಪೂರಕವಾಗಿ ಮತ್ತೂಂದು ವ್ಯವಸ್ಥೆ ಕಿಸಾನ್‌ಮಾರ್ಕೆಟ್‌.ಕಾಮ್‌ ಆಗಿದೆ ಎಂದು ವಿಶ್ಲೇಷಿಸಿದರು.

ಸರ್ಕಾರದ ಮುಖ್ಯ ಸಚೇತಕ ಆರ್‌.ವಿ. ವೆಂಕಟೇಶ್‌, ಮಾಜಿ ಮೇಯರ್‌ ವೆಂಕಟೇಶಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

9 ಭಾಷೆಗಳಲ್ಲಿ ಲಭ್ಯ
ವೆಬ್‌ಸೈಟ್‌ ಸೇವೆ ಕನ್ನಡ ಸೇರಿದಂತೆ ಒಂಬತ್ತು ಭಾಷೆಗಳಲ್ಲಿ ಲಭ್ಯವಿದೆ. ಕನ್ನಡ, ತೆಲಗು, ತಮಿಳು, ಮಲಯಾಳಿ, ಹಿಂದಿ, ಇಂಗ್ಲಿಷ್‌, ಗುಜರಾತಿ, ಬಂಗಾಳಿ, ಉರ್ದುವಿನಲ್ಲಿ ಸೇವೆ ಪಡೆಯಬಹುದು.
-ಉದಯವಾಣಿ

Write A Comment