ಬೆಂಗಳೂರು, ಜ.15- ತಾಪಂ, ಜಿಪಂ ಚುನಾವಣೆಗಳು ಸದ್ಯ ನಡೆಯುವುದು ಅನುಮಾನವಾಗಿದ್ದು, ಇನ್ನೂ ನಾಲ್ಕು ತಿಂಗಳ ಕಾಲ ಮುಂದೆ ಹೋಗುವ ಸಾಧ್ಯತೆ ಇದೆ. ಇದೇ ಜನವರಿ ಮೂರನೇ ವಾರದಲ್ಲಿ ಜಿಪಂ, ತಾಪಂಗೆ ಚುನಾವಣೆ ದಿನಾಂಕ ನಿಗದಿಯಾಗಿ ಫೆಬ್ರುವರಿ ಅಂತ್ಯದೊಳಗೆ ಎಲ್ಲಾ ಚುನಾವಣೆ ಪ್ರಕ್ರಿಯೆ ಮುಗಿಯಬೇಕಿತ್ತು. ಆದರೆ, ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಮೇ ತಿಂಗಳವರೆಗೆ ಚುನಾವಣೆಗಳು ಮುಂದೂಡುವ ಸಾಧ್ಯತೆಗಳು ಹೆಚ್ಚಾಗಿವೆ. ಮೂರು ಕ್ಷೇತ್ರಗಳ ವಿಧಾನಸಭೆ ಉಪಚುನಾವಣೆ ಘೋಷಣೆಯಾಗಿದೆ. ಅಲ್ಲದೆ ತಾಪಂ, ಜಿಪಂ ಚುನಾವಣೆ ಮೀಸಲುಗೊಂದಲ ನ್ಯಾಯಾಲಯದಲ್ಲಿದ್ದು, ಹೈಕೋರ್ಟ್ ಈ ಸಂಬಂಧಿಸಿದ ತೀರ್ಪನ್ನು ಕಾಯ್ದಿರಿಸಿದೆ.
ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ನಂತರ ಜಿಪಂ, ತಾಪಂ ಚುನಾವಣೆಗಳಿಗೆ ದಿನಾಂಕ ನಿಗದಿ ಮಾಡಲು ಶಾಲಾ-ಕಾಲೇಜು ಪರೀಕ್ಷೆಗಳು ಅಡ್ಡಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪಂಚಾಯತ್ ಚುನಾವಣೆಗಳನ್ನು ಮೇ ವರೆಗೆ ಮುಂದೂಡುವ ಬಗ್ಗೆ ಚಿಂತನೆ ನಡೆಸಲಾಗಿದೆ.
ಚುನಾವಣೆಯನ್ನು ಸಕಾಲದಲ್ಲಿ ನಡೆಸದೆ ಮುಂದೂಡುವ ಪ್ರಯತ್ನವನ್ನು ಮಾಡಲಾಗಿದೆ ಎಂದು ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಅನುಮಾನ ವ್ಯಕ್ತಪಡಿಸಿದ್ದಾರೆ. ಕಾಯ್ದಿರಿಸಿದ್ದ ತೀರ್ಪನ್ನು ಹೈಕೋರ್ಟ್ ಪ್ರಕಟಿಸಿ ಚುನಾವಣೆ ನಡೆಸಲು ಗ್ರೀನ್‌ಸಿಗ್ನಲ್ ತೋರಿಸಿದರೆ ಫೆಬ್ರುವರಿ ಅಂತ್ಯದೊಳಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಮೀಸಲಾತಿ ವಿವಾದಕ್ಕೆ ಸಂಬಂಧಪಟ್ಟಂತೆ ನೂರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೋಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಶಾಲಾ-ಕಾಲೇಜುಗಳು ಮಹತ್ವದ ಪರೀಕ್ಷೆಗಳು ನಡೆಯುತ್ತವೆ. ಹಾಗಾಗಿ ಈ ಚುನಾವಣೆ ಸಕಾಲದಲ್ಲಿ ನಡೆಯುವುದು ಕ್ಷೀಣ.