ಬೇಲೂರು, ಜ.18- ಮಕ್ಕಳ ಮುಂದಿನ ಭವಿಷ್ಯದ ಹಿನ್ನೆಲೆಯಲ್ಲಿ ತಾಲೂಕಿನ ಪ್ರತಿ ಅಂಗನವಾಡಿ ಕೇಂದ್ರಗಳಿಗೂ ಪ್ರತ್ಯೇಕವಾಗಿ ಅಡುಗೆ ಮನೆಗಳನ್ನು ನಿರ್ಮಿಸಲು ಶಾಸಕರ ಅನುದಾನದಲ್ಲಿ ಹಣವನ್ನು ನೀಡಲಾಗುತ್ತಿದೆ ಎಂದು ಶಾಸಕ ವೈ.ಎನ್.ರುದ್ರೇಶ್‌ಗೌಡ ಹೇಳಿದರು.
ಪುರಸಭೆ ವ್ಯಾಪ್ತಿಯ 4ನೇ ವಾರ್ಡಿನ ಅಂಗನವಾಡಿ ಕಟ್ಟಡದ ಪಕ್ಕದಲ್ಲಿನ ನಿವೇಶನದಲ್ಲಿ ನೂತನವಾಗಿ ಅಡುಗೆ ಮನೆಯನ್ನು ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪುರಸಭೆ ವ್ಯಾಪ್ತಿಯಲ್ಲಿನ ಅಂಗನವಾಡಿ ಕೇಂದ್ರಕ್ಕೆ ಪ್ರತ್ಯೇಕ ಅಡುಗೆ ಮನೆ ಇಲ್ಲದ ಕಾರಣ ಇರುವ ಒಂದೇ ಕೊಠಡಿಯಲ್ಲಿಯೇ ಸಿಬ್ಬಂದಿಗಳು ಮಕ್ಕಳಿಗೆ ಅಡುಗೆ ಹಾಗೂ ಪಾಠಗಳನ್ನು ಹೇಳಿ ಕೊಡಲಾಗುತ್ತಿದ್ದು ಇದರಿಂದ ಈಗ ಪ್ರತ್ಯೇಕ ಅಡುಗೆ ಮನೆ ನಿರ್ಮಿಸಲು ಮುಂದಾಗಿದ್ದೇವೆ ಎಂದರು.
ಪುರಸಭೆ ಸದಸ್ಯ ಅರುಣ್‌ಕುಮಾರ್ ಮಾತನಾಡಿ, ಶಾಸಕರು ಅಡುಗೆ ಮನೆ ನಿರ್ಮಿಸಲು ಎರೆಡುವರೆ ಲಕ್ಷ ಹಣವನ್ನು ಕೊಟ್ಟಿದ್ದು, ಈ ಹಣದಲ್ಲಿ ಅಡುಗೆ ಮನೆ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಬಿ.ಡಿ.ಚನ್ನಕೇಶವ, ಉಪಾಧ್ಯಕ್ಷೆ ನಾಗರತ್ನ, ಗ್ರಾಮಸ್ಥರಾದ ಕುಮಾರ್, ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಮತ್ತಿತರರಿದ್ದರು.