ಕರ್ನಾಟಕ

ಚಿತ್ರೋತ್ಸವಕ್ಕೆ ಜಯಾ ಬಚ್ಚನ್‌, ಕಮಲ್‌

Pinterest LinkedIn Tumblr

chitrotsavaಬೆಂಗಳೂರು: ಈ ಬಾರಿಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 28ರಿಂದ ಫೆಬ್ರವರಿ 4ರವರೆಗೆ ನಡೆಯಲಿದ್ದು, ಉದ್ಘಾಟನಾ ಕಾರ್ಯಕ್ರಮ ವಿಧಾನಸೌಧ ಮುಂಭಾಗ, ಸಮಾರೋಪ ಸಮಾರಂಭ ಮೈಸೂರು ಅರಮನೆ ಮುಂಭಾಗ ನಡೆಯಲಿದೆ.

ಖ್ಯಾತ ನಟಿ ಜಯಾ ಬಚ್ಚನ್‌ ಚಲನಚಿತ್ರೋತ್ಸವ ಉದ್ಘಾಟಿಸಲಿದ್ದು, ಸಂಜಯ್‌ ಲೀಲಾ ಬನ್ಸಾಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ
ಖ್ಯಾತ ನಟ ಕಮಲ್‌ ಹಾಸನ್‌ ಭಾಗವಹಿಸಲಿದ್ದಾರೆ. ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಚಿತ್ರ ಸಾಹಿತಿ ಹಾಗೂ ನಿರ್ದೇಶಕ ಗುಲ್ಜಾರ್‌, ನಟಿ ಸುಹಾಸಿನಿ, ನಟ ನಾನಾ
ಪಾಟೇಕರ್‌, ನಿರ್ದೇಶಕ ಮಣಿರತ್ನಂ, ನಿರ್ಮಾಪಕ ಅಶೋಕ್‌ ಅಮೃತ್‌ರಾಜ್‌, ನಿರ್ದೇಶಕಿ ಅಪರ್ಣಾ ಸೇನ್‌ ಸೇರಿದಂತೆ ಭಾರತೀಯ ಚಿತ್ರರಂಗದ ಗಣ್ಯರಿಗೆ ಚಿತ್ರೋತ್ಸವಕ್ಕೆ ಆಹ್ವಾನ
ನೀಡಲಾಗಿದೆ.

ಚಲನಚಿತ್ರೋತ್ಸವ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ನಡೆದ ಉನ್ನತ ಮಟ್ಟದ ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜಧಾನಿ
ಬೆಂಗಳೂರು ಹಾಗೂ ಅರಮನೆ ನಗರಿ ಮೈಸೂರಿನಲ್ಲಿ ಏಕಕಾಲದಲ್ಲಿ ನಡೆಯಲಿರುವ ಈ ಅಂತಾರಾಷ್ಟ್ರೀಯ ಚಿತ್ರೋತ್ಸವ ಒಂದು ಅವಿಸ್ಮರಣೀಯ ಉತ್ಸವವಾಗಲಿದೆ.

ಎರಡು ಸಾವಿರ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಹೇಳಿದರು.
ಚಿತ್ರೋತ್ಸವದದಲ್ಲಿ 50 ದೇಶಗಳ 172 ಚಿತ್ರಗಳು ಪ್ರದರ್ಶನವಾಗಲಿದ್ದು, ಏಶಿಯನ್‌ ವಿಭಾಗದಿಂದ 12, ಭಾರತೀಯ ವಿಭಾಗದಲ್ಲಿ 13 ಹಾಗೂ ಕನ್ನಡ ವಿಭಾಗದಲ್ಲಿ 15 ಚಿತ್ರಗಳು ಪ್ರದರ್ಶನವಾಗಲಿವೆ. ಬೆಂಗಳೂರಿನ ರಾಜಾಜಿನಗರದ ಒರಾಯನ್‌ ಮಾಲ್‌ನ ಪಿವಿಆರ್‌ನಲ್ಲಿ 11 ಸ್ಕ್ರೀನ್‌ ಹಾಗೂ ಮೈಸೂರಿನ ಮಾಲ್‌ ಆಫ್ ಮೈಸೂರ್‌ನ 4
ಸ್ಕ್ರೀನ್‌ಗಳಲ್ಲಿ ಚಲನಚಿತ್ರಗಳು ಪ್ರದರ್ಶನವಾಗಲಿದ್ದು, 12 ಸಾವಿರ ಜನರು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿ ಕನ್ನಡದ “ತಿಥಿ’ ಪ್ರದರ್ಶನಗೊಳ್ಳಲಿದೆ. ಚಿತ್ರೋತ್ಸವದಲ್ಲಿ ಬಾಗವಹಿಸಿ ಪ್ರಶಸ್ತಿ ಗೆಲ್ಲುವ ಚಿತ್ರಗಳಿಗೆ ನೀಡುವ ಮೊತ್ತವನ್ನು 11ರಿಂದ 17 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಚಿತ್ರೋತ್ಸವವನ್ನು ಜಯಾ ಬಚ್ಚನ್‌ ಉದ್ಘಾಟಿಸಲಿದ್ದು, ಮಂಡ್ಯದ ಅಮೂಲ್ಯ ಎಂಬ ಬಾಲಕಿಯೂ ಜತೆಗೂಡಲಿದ್ದಾರೆ. ಖ್ಯಾತ ನೃತ್ಯ ಕಲಾವಿದೆ ಶೋಭನಾ ಹಾಗೂ ನಿರುಪಮ
ರಾಜೇಂದ್ರ ಅವರು ಕನ್ನಡ ಚಲನಚಿತ್ರ ರಂಗ ಬೆಳೆದು ಬಂದ ಹಾದಿ ಬಿಂಬಿಸುವ ನೃತ್ಯ ಪ್ರದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕರಾದ ಹಂಗೇರಿಯ ಇಸ್ವಾéನ್‌ ಝೆಬೋ ಹಾಗೂ ಡೆನ್‌ಮಾರ್ಕ್‌ನ ನಿಲ್ಸ್‌ ಮ್ಯಾಲ್ಮರೋಸ್‌ ಅವರ ಚಿತ್ರಗಳ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ. ಕಲಾವಿದರ ಸಿಂಹಾವಲೋಕನ ವಿಭಾಗದಲ್ಲಿ ಪದ್ಮಭೂಷಣ ಡಾ.ಬಿ.ಸರೋಜಾದೇವಿಯವರ ಚಿತ್ರಗಳ ಪ್ರದರ್ಶನ ಮಾಡಲಾಗುವುದು. ಖ್ಯಾತ
ನಿರ್ದೇಶಕರಾದ ಕೆಎಸ್‌ಎಲ್‌ ಸ್ವಾಮಿ, ಸಿದ್ದಲಿಂಗಯ್ಯ ಅವರಿಗೆ ನಮನ ಸಲ್ಲಿಸಲು ಅವರ ಚಿತ್ರಗಳ ಪ್ರದರ್ಶನ ಸಹ ಮಾಡಲಾಗುವುದು ಎಂದು ಹೇಳಿದರು.

ಸಮಾರೋಪದಲ್ಲಿ ರಾಜ್ಯಪಾಲ ವಜೂಬಾಯ್‌ ವಾಲಾ ಅತಿಥಿಗಳಾಗಿ ಆಗಮಿಸಲಿದ್ದು, ಅಂದು ಕನ್ನಡ ಚಿತ್ರರಂಗದ ಖ್ಯಾತ ನಟ-ನಟಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ
ಆಯೋಜಿಸಲಾಗಿದೆ ಎಂದು ತಿಳಿಸಿದರು.

ವಾರ್ತಾ ಹಾಗೂ ಮೂಲಸೌಕರ್ಯ ಅಭಿವೃದ್ದಿ ಸಚಿವ ರೋಷನ್‌ಬೇಗ್‌, ವಿಧಾನಪರಿಷತ್‌ ಸದಸ್ಯೆ ಜಯಮಾಲಾ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು,
ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್‌ ಬಾಬು, ನಟ ಯಶ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮತ್ತಿತರರು ಉಪಸ್ಥಿತರಿದ್ದರು.
-ಉದಯವಾಣಿ

Write A Comment