ಬೆಂಗಳೂರು, ಜ.19- ಈಗಾಗಲೇ ಪ್ರಕಟವಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಬೆನ್ನಲ್ಲೇ ನಿನ್ನೆ ದಿಢೀರ್ ಎಂದು ಪ್ರಕಟಗೊಂಡ ಜಿಪಂ ಹಾಗೂ ತಾಪಂ ಚುನಾವಣೆಗೆ ರಾಜಕೀಯ ಪಕ್ಷಗಳು ಸಮರೋಪಾದಿಯಲ್ಲಿ ಸಜ್ಜುಗೊಂಡಿವೆ. ಜಿಪಂ ಹಾಗೂ ತಾಪಂ ಚುನಾವಣಾ ಮೀಸಲಾತಿ ವಿವಾದ ವಿಳಂಬವಾಗುತ್ತದೆ ಎಂಬ ನಿರೀಕ್ಷೆಯಲಿದ್ದ ರಾಜಕೀಯ ಪಕ್ಷಗಳಿಗೆ ಧುತ್ತನೆ ಎದುರಾಗಿರುವ ಚುನಾವಣೆ ಮುಖಂಡರ ನಿದ್ದೆಗೆಡೆಸಿದೆ. ಫೆ. 13 ಮತ್ತು 20ರಂದು ಎರಡು ಹಂತಗಳಲ್ಲಿ ನಡೆಯಲಿರುವ ಪಂಚಾಯ್ತಿ ಚುನಾವಣೆಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳಲ್ಲಿ ತರಾತುರಿ ತಯಾರಿ ನಡೆಯುತ್ತಿದೆ.
ನಿನ್ನೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಎಲ್ಲಾ ಪಕ್ಷಗಳು ಸಭೆ ಕರೆದು , ಕೂಡಲೇ ಕ್ಷೇತ್ರಗಳಿಗೆ ತೆರಳಿ ಒಮ್ಮತದ ಅಭ್ಯರ್ಥಿಗಳ ಆಯ್ಕೆ ಹಾಗೂ ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕೆಂದು ಸೂಚಿಸಿವೆ. ಮೂವತ್ತು ಜಿಲ್ಲೆಗಳು ಹಾಗೂ 176 ತಾಲ್ಲೂಕುಗಳ ಚುನಾವಣೆಗೆ ತಕ್ಷಣವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಇದೇ 25ರೊಳಗೆ ಆಕಾಂಕ್ಷಿತರ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಬೇಕೆಂದು ಕಾಂಗ್ರೆಸ್ ಪಕ್ಷ ಸೂಚಿಸಿದೆ. ಎಲ್ಲ ಉಸ್ತುವಾರಿ ಸಚಿವರಿಗೆ ಚುನಾವಣಾ ಹೊಣೆ ಹೊರಿಸಿದೆ. 30 ಜಿಲ್ಲೆಗಳಿಗೆ ನೇಮಕವಾಗಿರುವ ವೀಕ್ಷಕರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು, ಪಕ್ಷದ ಶಾಸಕರು, ಪರಾಜಿತ ಅಭ್ಯರ್ಥಿಗಳು ಆಕಾಂಕ್ಷಿತರೊಂದಿಗೆ ತಕ್ಷಣವೇ ಸಭೆ ನಡೆಸಿ ಸಾಮಾಜಿಕ ನ್ಯಾಯದಡಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು.
ಪ್ರತಿ ಕ್ಷೇತ್ರಗಳಲ್ಲಿ ಗೆಲುವಿನ ವಾತಾವರಣ ಸೃಷ್ಟಿಸಬೇಕು. ಯಾವುದೇ ರೀತಿ ಗೊಂದಲವಾಗದಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಪಕ್ಷದ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮೂರು ಕ್ಷೇತ್ರದ ಉಪಚುನಾವಣೆ ಹಾಗೂ ಎರಡು ಹಂತಗಳಲ್ಲಿ ನಡೆಯಲಿರುವ ಪಂಚಾಯ್ತಿ ಚುನಾವಣೆ ಸವಾಲಾಗಿದ್ದು, ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಗೆ ತಳಮಟ್ಟದಲ್ಲಿ ಪಕ್ಷವನ್ನು ಸದೃಢಮಾಡಬೇಕೆಂದು ಸೂಚಿಸಿದ್ದಾರೆ.
ಎಲ್ಲಾ ವೀಕ್ಷಕರು ಕ್ಷೇತ್ರಗಳಲ್ಲಿ ವಾಸ್ತವ್ಯ ಹೂಡಿ ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸಿ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ನೀಡಬೇಕು. ರಾಜ್ಯ ಸರ್ಕಾರದ ಜನಪರ ರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಕಾಂಗ್ರೆಸ್ ಘಟಕ, ಮಹಿಳಾ ಘಟಕ, ಯುವ ಕಾಂಗ್ರೆಸ್ ಸೇರಿದಂತೆ ಎಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರು ಕಾರ್ಯೋನ್ಮುಖರಾಗಬೇಕೆಂದು ಪಕ್ಷ ತಿಳಿಸಿದೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್ ಅವರು ರಾಜ್ಯದ ವಿವಿಧೆಡೆ ಸಂಚರಿಸಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. ಬಿಜೆಪಿ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಮೂರು ಕ್ಷೇತ್ರಗಳ ಉಪ ಚುನಾವಣಗೆ ಬಹುತೇಕ ಅಭ್ಯರ್ಥಿಗಳ ಆಯ್ಕೆಯನ್ನು ಪೂರ್ಣಗೊಳಿಸಿದೆ. ಪಂಚಾಯ್ತಿ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ. ಇಂದು ಅಭ್ಯರ್ಥಿಗಳ ಆಯ್ಕೆ ಸಂಬಂಧ ಪಕ್ಷದ ಮುಖಂಡರು ಸಭೆ ನಡೆಸಲಿದ್ದಾರೆ. ಜೆಡಿಎಸ್ ಪಕ್ಷ ಕೂಡ ಉಪ ಚುನಾವಣೆ ಮತ್ತು ಪಂಚಾಯತ್ ಫೈಟ್‌ಗೆ ಸಿದ್ಧವಾಗಿದೆ. ತಾಪಂ, ಜಿಪಂ ಚುನಾವಣೆಗೆ ಭರದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ವಿವಿಧೆಡೆ ಸಂಚರಿಸಿ ಪಕ್ಷ ಸಂಘಟನೆ ಮಾಡಿದ್ದು, ಪಂಚಾಯತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮುಖಂಡರ ಸಭೆ ನಡೆಸಲಿದ್ದಾರೆ.