ಬೆಂಗಳೂರು, ಜ. ೨೧- ನಗರದ ನಾಗರಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ತಂತ್ರಜ್ಞಾನದ ಮೂಲಕ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿರುವ ಬಿಬಿಎಂಪಿಯು `ಟ್ರೀ ಕಟ್ಟಿಂಗ್ ಅಪ್ಲಿಕೇಷನ್ ಮತ್ತು ಬಿಬಿಎಂಪಿ ಸಹಾಯವಾಣಿ’ಯ ಎರಡು ಸಾಫ್ಟ್‌ವೇರ್‌ಗೆ ಮೇಯರ್ ಬಿ.ಎನ್. ಮಂಜುನಾಥ ರೆಡ್ಡಿ ಇಂದು ಚಾಲನೆ ನೀಡಿದರು.
ಬಿಬಿಎಂಪಿ ಸಹಾಯವಾಣಿ ಸಾರ್ವಜನಿಕರ ದೂರುಗಳ ನಿವಾರಣೆಗೆ ಸಂಬಂಧಿಸಿದ್ದು, ಮೂಲಭೂತ ಸೌಕರ್ಯ, ರಸ್ತೆ, ತ್ಯಾಜ್ಯ ನಿರ್ವಹಣೆ, ಕಟ್ಟಡ ಯೋಜನೆಗಳು, ಆಸ್ತಿ ತೆರಿಗೆ, ಆರೋಗ್ಯ, ಮರ ಮತ್ತು ಅರಣ್ಯ ಇಲಾಖೆ, ಸಾರ್ವಜನಿಕ ಸುರಕ್ಷತೆ, ಕಲ್ಯಾಣ, ಪರಿಸರ ಒಳಗೊಂಡಂತೆ ಸುಮಾರು 20 ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಈ ವಿಶೇಷ ಮೊಬೈಲ್ ಆಪ್‌ಗೆ ಸಲ್ಲಿಸಬಹುದಾಗಿದೆ. 24×27 ಕಾಲೆಸೆಂಟರ್‌ಗೆ ಸಾರ್ವಜನಿಕರು ನೀಡಿದ ದೂರುಗಳನ್ನು ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳಿಗೆ ತಲುಪಿಸುತ್ತದೆ. ಸಹಾಯ ತಂತ್ರಾಂಶವು ಎಸ್‌ಎಂಎಸ್ ಮೂಲಕ ಅಧಿಕಾರಿಗಳಿಗೆ ದೂರುದಾರರ ದೂರವಾಣಿ ಸಂಖ್ಯೆ, ದೂರುದಾರರಿಗೆ ಅಧಿಕಾರಿಗಳ ದೂರವಾಣಿ ಸಂಖ್ಯೆ ರವಾನೆಯಾಗುತ್ತದೆ ಎಂದು ಮೇಯರ್ ಮಂಜುನಾಥ ರೆಡ್ಡಿ ವಿವರಿಸಿದರು.
ಅಗತ್ಯವಿದ್ದಲ್ಲಿ ಈ ಮೊಬೈಲ್ ಆಪ್‌ಗೆ ಯಾವುದೇ ಚಿತ್ರಗಳನ್ನು ಸೆರೆಹಿಡಿದು ಕಳುಹಿಸಬಹುದು. ಹಂತ ಹಂತವಾಗಿ ಸಮಸ್ಯೆಗಳ ಸ್ವರೂಪ ಮತ್ತು ಅವುಗಳ ಪ್ರಗತಿ ಸಾಧನೆಯ ಬಗ್ಗೆಯೂ ಎಸ್‌ಎಂಎಸ್ ಮೂಲಕ ರವಾನೆಯಾಗುತ್ತಿರುತ್ತದೆ ಎಂದು ತಿಳಿಸಿದರು.
ಹಾಗೆಯೇ ನಗರದಲ್ಲಿ ಮರಗಳನ್ನು ಕತ್ತರಿಸುವ ಸಮಸ್ಯೆ ಕೂಡ ಬೃಹದಾಕಾರವಾಗಿದ್ದು, ಅವುಗಳ ಪರಿಹಾರಕ್ಕೆ ಸಾರ್ವಜನಿಕರು ಮತ್ತು ಅರಣ್ಯ ಅಧಿಕಾರಿಗಳ ನಡುವೆ ಟ್ರೀ ಕಟ್ಟಿಂಗ್ ಅಪ್ಲಿಕೇಷನ್‌ನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ವಿಶೇಷ ಆಯುಕ್ತ ಕುಮಾರ್ ಪುಷ್ಕರ್ ಅವರು ತಿಳಿಸಿದರು.
ಈ ನೂತನ ಅಪ್ಲಿಕೇಷನ್ ಬಳಸಲು ಸುಲಭವಾಗಿದ್ದು, ತಾವಿದ್ದ ಸ್ಥಳಗಳಲ್ಲೇ ಮರದ ಸ್ವರೂಪವನ್ನು ಮೊಬೈಲ್ ಮೂಲಕ ರವಾನಿಸಬಹುದು. ನಂತರ ಹಂತ ಹಂತವಾಗಿ ಸಂಬಂಧಪಟ್ಟ ಅಧಿಕಾರಿಗಳು ಕೈಗೊಂಡ ಕ್ರಮದ ಬಗ್ಗೆಯೂ ಎಸ್‌ಎಂಎಸ್ ಸಂದೇಶದ ಮೂಲಕ ಮಾಹಿತಿ ಸ್ವೀಕರಿಸಬಹುದು ಎಂದರು.
ಇಲ್ಲಿ ನೂತನ ಎರಡು ಅಪ್ಲಿಕೇಶನ್‌ಗಳು ಪಾರದರ್ಶಕವಾಗಿದ್ದು, ಸಾರ್ವಜನಿಕರು ಕುಳಿತಲ್ಲಿಯೇ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯ ಎಂದು ಅವರು ತಿಳಿಸಿದರು.
ಬಿಬಿಎಂಪಿ ಸಹಾಯವಾಣಿಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಪ್ ಡೌನ್‌ಲೋಡ್ ಮಾಡಬಹುದು. http://bbmp.gov.in ಹಾಗೂ http://bbmp.sahaaya.in ಹಾಗೂ ಟ್ರೀ ಕಟ್ಟಿಂಗ್ ಅಪ್ಲಿಕೇಶನ್ ಹೆಚ್ಚಿನ ಮಾಹಿತಿಗಾಗಿ www.bbmp.gov.in ಗೆ ಸಂಪರ್ಕಿಸಬಹದು.
ಈ ಸಂದರ್ಭದಲ್ಲಿ ಆಡಳಿತದ ಪಕ್ಷದ ನಾಯಕ ಆರ್.ಎಸ್. ಸತ್ಯನಾರಾಯಣ, ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಜಾಹಿದ್ದ್ ಪಾಷ, ಆಯುಕ್ತ ಕುಮಾರ್ ನಾಯಕ್ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.