ಕರ್ನಾಟಕ

ಏಕರೂಪದ ಪಶು ಆಹಾರ ದರ ನಿಗದಿಗೆ ಆಗ್ರಹ

Pinterest LinkedIn Tumblr

Cattle-feed-pellets_1-1ಬೆಂಗಳೂರು, ಜ.23: ದೇಶದ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಅನ್ವಯವಾಗುವಂತೆ ಏಕರೂಪದ ಪಶು ಆಹಾರ ದರ ನಿಗದಿಗೆ ನೀತಿಯೊಂದನ್ನು ಜಾರಿಗೊಳಿಸಬೇಕಾದ ಅಗತ್ಯವಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿಯ ಅಧ್ಯಕ್ಷ ಪಿ.ನಾಗರಾಜು ಹೇಳಿದ್ದಾರೆ.
ಎಸ್‍ಆರ್‍ಎಸ್ ಆಫ್ ಐಸಿಎಆರ್-ಎನ್‍ಡಿಆರ್‍ಐ ಸಹಯೋಗದಲ್ಲಿಂದು ನಗರದಲ್ಲಿ ಏರ್ಪಡಿಸಿದ್ದ “ಪಶು ಆಹಾರದ ಮೌಲ್ಯವರ್ಧನೆ” ಕುರಿತ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಬೆಲೆ ಇರುವುದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಏಕರೀತಿಯ ಬೆಲೆ ನಿಗದಿಗೆ ಮುಂದಾಗಬೇಕು ಎಂದು ಹೇಳಿದರು.
ಮೌಲ್ಯವರ್ಧಿತ ಉತ್ಪನ್ನಗಳಿಗೆ ಗಮನಹರಿಸದಿದ್ದರೆ ಡೈರಿ ಉದ್ಯಮ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಈ ವಿಷಯದಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕು. ರೈತರು ಡೈರಿಗಳಿಗೆ ನೀಡುತ್ತಿದ್ದ ಹಾಲಿನಲ್ಲಿ ಡಿಗ್ರಿ ಇಲ್ಲ ಎಂದು ಹೇಳಿ ಹಿಂದಕ್ಕೆ ಕಳುಹಿಸಲಾಗುತ್ತಿತ್ತು. ತಾವು ಅಧಿಕಾರಕ್ಕೆ ಬಂದ ಬಳಿಕ ಪಶು ಆಹಾರವನ್ನು ಪರೀಕ್ಷೆಗೆ ಒಳಪಡಿಸಿದಾಗ ಅಗತ್ಯಕ್ಕಿಂತ ಹೆಚ್ಚಿನ ಪದಾರ್ಥಗಳು ಅದರಲ್ಲಿ ಇರುವುದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣ ಎಂದು ತಿಳಿಯಿತು. ತಕ್ಷಣ ಗುಣಮಟ್ಟದ ಪಶು ಆಹಾರ ವಿತರಿಸಿದ್ದರಿಂದ ಹಾಲಿನ ಉತ್ಪನ್ನ ಹೆಚ್ಚಳವಾಗಿದ್ದು, ರೈತರ ಮುಖದಲ್ಲಿ ಸಂತೋಷ ನೆಲೆಸಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿಗೆ 4 ರೂ. ಸಹಾಯಧನ ನೀಡುತ್ತಿದೆ. ದೇಶದ ಯಾವುದೇ ರಾಜ್ಯದಲ್ಲಿ ಇಷ್ಟು ಪ್ರಮಾಣದ ಸಹಾಯಧನ ನೀಡುತ್ತಿಲ್ಲ. ರಾಜ್ಯ ಸರ್ಕಾರ ಇದಕ್ಕಾಗಿ 900 ಕೋಟಿ ರೂ. ಭರಿಸುತ್ತಿದೆ ಎಂದು ಹೇಳಿದರು.
ಕೇಂದ್ರ ಪಶುಸಂಗೋಪನೆ ಇಲಾಖೆ ಆಯುಕ್ತ ಡಾ.ಸುರೇಶ್ ಹೊನ್ನಪ್ಪಗೊಲ್ ಮಾತನಾಡಿ, ದೇಶದಲ್ಲಿ 150 ದಶಲಕ್ಷ ಜನರು ಪಶುಸಂಗೋಪನೆಯನ್ನು ಅವಲಂಬಿಸಿದ್ದಾರೆ. ಕೆಎಂಎಫ್ ದೇಶದ ಹಾಲು ಉತ್ಪಾದನೆ ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿದ್ದು, ವಾರ್ಷಿಕ 4.5 ಶೇಕಡಾದಷ್ಟು ಬೆಳವಣಿಗೆ ದರ ದಾಖಲಿಸಿದೆ. ನಮ್ಮಲ್ಲಿ ಹಾಲಿನ ಪ್ರಮಾಣ ಹೆಚ್ಚಿದ್ದು, ಮೌಲ್ಯವರ್ಧಿತ ಉತ್ಪನ್ನಗಳ ರಫ್ತಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಸಂಸ್ಥೆಯ ಹೆಸರನ್ನು ಜನಪ್ರಿಯಗೊಳಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರ ನವೋದ್ಯಮಕ್ಕೆ ಪೂರಕವಾಗಿ ಈ ಕ್ಷೇತ್ರದಲ್ಲಿ ಹೊಸ ಹೊಸ ಉದ್ಯಮಗಳು ಸ್ಥಾಪನೆಯಾಗಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ ಹೈನುಗಾರಿಕೆ ಅಭಿವೃದ್ಧಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ರಾಷ್ಟ್ರೀಯ ಗೋಕುಲ್ ಮಿಷನ್ ಹಾಗೂ ರಾಷ್ಟ್ರೀಯ ಕಾಮಧೇನು ತಳಿ ಕೇಂದ್ರ ಎಂಬ ಎರಡು ಯೋಜನೆಗಳನ್ನು ಕರ್ನಾಟಕ ಸೇರಿದಂತೆ 15 ರಾಜ್ಯಗಳಲ್ಲಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಪಶುಸಂಗೋಪನೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಏಕ ರೂಪದ ಪಶು ಆಹಾರ ಬೆಲೆ ನಿಗದಿಗೆ ಕೆಲವೊಂದು ತೊಡಕುಗಳಿವೆ. ಆದರೂ ಎಲ್ಲ ರಾಜ್ಯಗಳ ಹಾಲು ಉತ್ಪಾದಕ ಸಹಕಾರ ಸಂಘಗಳ ಜೊತೆ ಮಾತುಕತೆ ನಡೆಸಿ ಈ ಬಗ್ಗೆ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆವಿಎಎಫ್‍ಎಸ್‍ಯು ಮಾಜಿ ಕುಲಪತಿ ಪ್ರೊ.ಆರ್.ಎನ್. ಶ್ರೀನಿವಾಸ ಗೌಡ, ಸಂಘದ ಅಧ್ಯಕ್ಷ ಡಾ.ಕೆ.ಪಿ. ರಮೇಶ್, ಡಾ. ಕೆ.ಜಯರಾಜ್ ರಾವ್, ಡಾ.ಸಿದ್ದರಾಮಣ್ಣ, ಡಾ. ಸುಭಾಷ್ ಮತ್ತಿತರರು ಉಪಸ್ಥಿತರಿದ್ದರು.

Write A Comment