ಬೆಂಗಳೂರು, ಜ.23- ನೇತಾಜಿ ಸುಭಾಷ್ಚಂದ್ರ ಬೋಸ್ ಕೂಡ ಮಹಾತ್ಮಗಾಂಧೀಜಿಯವರಂತೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ಅವರು ಅಪ್ರತಿಮ ನಾಯಕರು ಹಾಗೂ ಅಪ್ರತಿಮ ದೇಶಭಕ್ತರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು. ನೇತಾಜಿ ಸುಭಾಷ್ಚಂದ್ರಬೋಸರ ಜನ್ಮದಿನದ ಪ್ರಯುಕ್ತ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಇರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೋಸರ ಜನ್ಮದಿನವನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುವ ಕುರಿತು ಪರಿಶೀಲನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಗಾಂಧಿಜಿಯವರು ಅಹಿಂಸಾವಾದವನ್ನು ಎತ್ತಿಹಿಡಿದು ಉಪವಾಸ ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಆದರೆ, ಸುಭಾಷ್ಚಂದ್ರ ಬೋಸ್ ಅವರ ವಾದ ಕ್ರಾಂತಿಕಾರಿಯದ್ದಾಗಿತ್ತು. ಇಬ್ಬರೂ ನಾಯಕರು ನಮಗೆ ಆದರ್ಶಪ್ರಾಯರು ಎಂದು ಹೇಳಿದರು.
ಸುಭಾಷ್ ಚಂದ್ರ ಬೋಸರು ಇಂಡಿಯನ್ ಸಿವಿಲ್ ಸರ್ವೀಸ್(ಐಸಿಎಸ್) ಉನ್ನತ ಪರೀಕ್ಷೆ ಪಾಸು ಮಾಡಿ ಅತ್ಯುನ್ನತ ಮಟ್ಟದ ಅಧಿಕಾರಿಯಾಗುವ ಅವಕಾಶವಿದ್ದರೂ ದೇಶದ ಮೇಲಿನ ಅಭಿಮಾನದಿಂದ ತಮ್ಮ ವೈಯಕ್ತಿಕ ಜೀವನವನ್ನೇ ತ್ಯಾಗ ಮಾಡಿದರು ಎಂದು ತಿಳಿಸಿದರು. ಬೋಸರು ತಮ್ಮದೇ ಆದ ಸೇನೆಯನ್ನು ಕಟ್ಟಿ ಆ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿ ಹೋರಾಟ ಮಾಡಿದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು ಎಂದರು.
ವಿಧಾನಸೌಧದ ಪಶ್ಚಿಮದ್ವಾರದಿಂದ ಪೂರ್ವ ಭಾಗಕ್ಕೆ ಬೋಸರ ಪ್ರತಿಮೆಯನ್ನು ಸ್ಥಳಾಂತರ ಮಾಡಬೇಕೆಂಬ ಸಲಹೆಗಳಿವೆ. ಮೆಟ್ರೋ ಕಾಮಗಾರಿ ಮುಗಿದ ನಂತರ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಬೆಳಗ್ಗೆ ಸಚಿವರ ಉಪಹಾರ ಕೂಟ ಇತ್ತಲ್ಲ ಏನು ವಿಶೇಷ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇದರಲ್ಲಿ ವಿಶೇಷ ಏನೂ ಇಲ್ಲ. ಸಮಯ ಸಿಕ್ಕಾಗೆಲ್ಲಾ ಸಚಿವರು, ಶಾಸಕರೊಂದಿಗೆ ಉಪಹಾರ ಕೂಟ ಮಾಡುತ್ತೇನೆ ಎಂದರು. ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧ ವಾರ್ಡ್ಗೆ ಒಬ್ಬರು ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಿಸಲು ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳಿದರು. ಸುಭಾಷ್ಚಂದ್ರ ಬೋಸರ ಪ್ರತಿಮೆಗೆ ಪುಷ್ಪಾರ್ಪಣೆ ವೇಳೆ ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಸಿ.ಮಹದೇವಪ್ಪ, ರಾಮಲಿಂಗಾರೆಡ್ಡಿ, ರೋಷನ್ಬೇಗ್, ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ್ ಜಾದವ್ ಮತ್ತಿತರರಿದ್ದರು.