ಬೆಂಗಳೂರು, ಜ.24: ಇತ್ತೀಚೆಗೆ ರಾಜ್ಯ ಹಾಗೂ ದೇಶದಲ್ಲಿ ಶಂಕಿತ ಉಗ್ರರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯುವ ಈ ಬಾರಿಯ ರಾಜ್ಯಮಟ್ಟದ ಗಣರಾಜ್ಯೋತ್ಸವಕ್ಕೆ ಅಭೂತಪೂರ್ವ ಭದ್ರತೆ ಕಲ್ಪಿಸಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಅಗತ್ಯಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ತಿಳಿಸಿದ್ದಾರೆ.
ನಗರದ ಎಲ್ಲಾ ವಿಭಾಗಗಳಿಂದ 9 ಡಿಸಿಪಿ, 16 ಎಸಿಪಿ, 48 ಪೊಲೀಸ್ ಇನ್ಸ್‍ಪೆಕ್ಟರ್, 101 ಪಿಎಸ್‍ಐ, 13 ಮಹಿಳಾ ಪಿಎಸ್‍ಐ, 77 ಎಎಸ್‍ಐ, 182 ಮುಖ್ಯ ಪೇದೆ, 459 ಪೊಲೀಸ್ ಪೇದೆ, 99 ಮಹಿಳಾ ಸಿಬ್ಬಂದಿ, 152 ಸಾದಾ ಉಡುಪಿನ ಅಧಿಕಾರಿ, ಸಿಬ್ಬಂದಿ ಸಹಿತ ಭದ್ರತೆಗೆ ಒಟ್ಟು 700ಕ್ಕೂ ಅಧಿಕ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಂದೋಬಸ್ತ್‍ಗೆ ನಿಯೋಜಿಸಲಾಗಿದೆ ಎಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.
6 ಕೆಎಸ್‍ಆರ್‍ಪಿ, ತುಕಡಿ, 2 ಕ್ಷಿಪ್ರ ಕಾರ್ಯಾಚರಣೆ ಪಡೆ ಹಾಗೂ ಇದೇ ಮೊದಲ ಬಾರಿಗೆ ಗರುಡಾ ಪಡೆ ಹಾಗೂ ಭಾರತೀಯ ಸೇನೆಯ ಬಾಂಬ್ ನಿಷ್ಕ್ರಿಯ ದಳವನ್ನು ಬಂದೋಬಸ್ತ್‍ಗೆ ನಿಯೋಜಿಸಲಾಗಿದೆ. ಮೈದಾನದ ಸುತ್ತ ಎಲ್ಲಾ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ನಿಗಾವಹಿಸಲು 50 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು.
ಡ್ರೋಣ್ ಕ್ಯಾಮರಾ ನಿಷೇಧ
ಭದ್ರತೆಯ ದೃಷ್ಟಿಯಿಂದ ಈ ಬಾರಿ ಬೆಂಗಳೂರು ನಗರದಲ್ಲಿ ಡ್ರೋಣ್ ಕ್ಯಾಮರಾ ಸಹಿತ ಯಾವುದೇ ರೀತಿಯ ಮಾನವ ರಹಿತ ವಾಹನದ ಬಳಕೆಯನ್ನು ನಿಷೇಧಿಸಲಾಗಿದ್ದು, ಈ ಬಗ್ಗೆ ಆದೇಶ ಹೊರಡಿಸಲಾಗಿದೆ ಎಂದು ಎನ್.ಎಸ್. ಮೇಘರಿಕ್ ತಿಳಿಸಿದರು.
ನಿಷಿದ್ಧ ವಸ್ತುಗಳು: ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಸಿಗರೇಟ್, ಬೆಂಕಿ ಪೆಟ್ಟಿಗೆ, ಕರಪತ್ರಗಳು, ಬಣ್ಣದ ದ್ರಾವಣಗಳು, ವೀಡಿಯೋ ಮತ್ತು ಸ್ಟಿಲ್ ಕ್ಯಾಮರಾಗಳು, ನೀರಿನ ಬಾಟಲ್‍ಗಳು, ಕ್ಯಾನ್‍ಗಳು, ಶಸ್ತ್ರಾಸ್ತ್ರಗಳನ್ನು ತರುವುದನ್ನು ನಿಷೇಧಿಸಲಾಗಿದೆ ಎಂದು ಮೇಘರಿಕ್ ತಿಳಿಸಿದರು.
ಇದಲ್ಲದೆ ಹರಿತವಾದ ವಸ್ತು, ಚಾಕು-ಚೂರಿಗಳು, ಕಪ್ಪು ಕರವಸ್ತ್ರಗಳು, ತಿಂಡಿ ತಿನಿಸುಗಳು, ಮದ್ಯದ ಬಾಟಲ್‍ಗಳು, ಮಾದಕ ವಸ್ತ್ರುಗಳು, ಬಾವುಟಗಳು, ಪಟಾಕಿ ಮತ್ತು ಸ್ಫೋಟಕ ವಸ್ತ್ರಗಳನ್ನು ತರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.