ಕರ್ನಾಟಕ

ಉಗ್ರ ರಫೀಕ್ ವಿರುದ್ಧ ಕೊಲೆಯತ್ನ ಕೇಸ್

Pinterest LinkedIn Tumblr

crime-ಬೆಂಗಳೂರು, ಜ.೨೪: ಶನಿವಾರ ಬಂಧಿಸಲು ಹೋದಾಗ ತೆಲಂಗಾಣ ಎಟಿಎಸ್ ಪೇದೆ ಮೇಲೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿ, ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಶಂಕಿತ ಉಗ್ರ ರಫೀಕ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಕೇಸ್ ದಾಖಲಾಗಿದೆ.
ಪೇದೆ ಶ್ರೀನಿವಾಸ್ ನೀಡಿದ ದೂರಿನ ಆಧಾರದ ಮೇಲೆ ರಫೀಕ್ ವಿರುದ್ಧ ಕೊಲೆ ಯತ್ನ ದೂರು ದಾಖಲಾಗಿದೆ. ಪತಿಗೆ ಸಹಕರಿಸಿದ ಆರೋಪದ ಮೇಲೆ ರಫೀಕ್ ಪತ್ನಿ ವಿರುದ್ಧವೂ ಐಪಿಸಿ ೩೧ ಮತ್ತು ೩೫೩ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿಗಳಿಬ್ಬರಿಗೂ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಇರುವ ಶಂಕೆ ಹಿನ್ನೆಲೆಯಲ್ಲಿ ಇಬ್ಬರನ್ನೂ ವಿಚಾರಣೆ ನಡೆಸುತ್ತಿದ್ದಾರೆ. ರಫೀಕ್ ೨೦೦೮ರ ಅಹಮದಾಬಾದ್ ಸರಣಿ ಸ್ಫೋಟದಲ್ಲಿ ಎನ್‌ಐಎಗೆ ಬೇಕಾಗಿದ್ದ ಎನ್ನಲಾಗಿದೆ.
ಪರಪ್ಪನ ಅಗ್ರಹಾರ ಸಮೀಪದ ಹೊಸೂರು ರಸ್ತೆಯ ದೊಡ್ಡ ನಾಗಮಂಗಲದ ನಿವಾಸಿಯಾಗಿರುವ ರಫೀಕ್‌ನನ್ನು ಇಲ್ಲಿನ ಶೋಭಾ ಅಪಾರ್ಟ್‌ಮೆಂಟ್ ಬಳಿ ಕಾರ್ಯಾಚರಣೆ ನಡೆಸಿ ನಿನ್ನೆ ಸಂಜೆ ಬಂಧಿಸಲಾಗಿತ್ತು.
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ತೀವ್ರ ವಿಚಾರಣೆ ನಡೆಸಿದ ಎನ್‌ಐಎ ಅಧಿಕಾರಿಗಳು ಇಂದು ರಫೀಕ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯದಿಂದ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಮಂಗಳೂರಿನ ಬಜ್ಪೆಯ ಪೆರ್ಮುದೆ ಗ್ರಾಮದ ನಜ್ಮುಲ್ ಹುದಾ (೨೫), ತುಮಕೂರಿನ ವಿನೋಭಾನಗರದ ಸಯ್ಯದ್ ಮುಜಾಹಿದ್ ಪಾಷಾ(೩೪), ಬೆಂಗಳೂರಿನದ ಸಾರಾಯಿಪಾಳ್ಯದ ಮುಹಮ್ಮದ್ ಅಫ್ಝಲ್(೩೫), ಬ್ಯಾಟರಾಯಪುರದ ಆಸಿಫ್ ಅಲಿ(೩೦), ಕಾಟನ್‌ಪೇಟೆಯ ಮುಹಮ್ಮದ್ ಸುಹೈಲ್(೩೧), ಕೆ.ನಾರಾಯಣಪುರದ ಬಿಡಿಎಸ್ ನಗರದ ಮುಹಮ್ಮದ್ ಅಬ್ದುಲ್ ಅಹದ್ (೪೫) ಎಂಬ ಆರು ಮಂದಿ ಶಂಕಿತ ಉಗ್ರರ ವಿಚಾರಣೆ ತೀವ್ರಗೊಳಿಸಲಾಗಿದ್ದು, ಎಲ್ಲರನ್ನೂ ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇವೆರೆಲ್ಲರನ್ನೂ ಜ.೨೭ರವರೆಗೆ ಎನ್‌ಐಎ ವಶಕ್ಕೆ ನೀಡಲಾಗಿದೆ.

Write A Comment