ಬೆಂಗಳೂರು,ಜ.೨೬-ಹಾಲು ಸರಬರಾಜು ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಮೊಬೈಲ್ ಕಸಿದು ಹಣ ವಿಲ್ಲದ ಕಾರಣಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿರುವ ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿರುವ ದುರ್ಘಟನೆ ನಿನ್ನೆ ಮಧ್ಯರಾತ್ರಿ ರಾಮಮೂರ್ತಿನಗರದ ಕಸ್ತೂರಿನಗರ ಬ್ರಿಡ್ಜ್ ಬಳಿ ನಡೆದಿದೆ.
ನಂದಿನಿ ಹಾಲಿನ ಪ್ಯಾಕೆಟ್‌ಗಳನ್ನು ಸರಬರಾಜು ಮಾಡುತ್ತಿದ್ದ ಬಿ.ನಾರಾಯಣಪುರದ ವಿನೋದ್‌ಕುಮಾರ್ ರೆಡ್ಡಿ ಅವರು ದುಷ್ಕರ್ಮಿಗಳು ಮಚ್ಚಿನಿಂದ ನಡೆಸಿದ ಹಲ್ಲೆಯಿಂದ ಕೈಬೆರಳುಗಳನ್ನು ಮುರಿದುಕೊಂಡು ಸಿಎಂಹೆಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಪಾಯದಿಂದ ಪಾರಾಗಿದ್ದಾರೆ.
ಕಸ್ತೂರಿನಗರದ ಬಳಿ ಹಾಲು ಸರಬರಾಜು ಮಾಡಲು ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ವಿನೋದ್‌ಕುಮಾರ್ ಅವರು ಮಧ್ಯರಾತ್ರಿ ೧.೫೦ರ ವೇಳೆ ಹೋಗುತ್ತಿದ್ದಾಗ ಕಪ್ಪುಬಣ್ಣದ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿ ಮೊಬೈಲ್ ದೋಚಿ ಹಣವಿಲ್ಲದಿರುವುದಕ್ಕೆ ಆಕ್ರೋಶಗೊಂಡು ಮಚ್ಚಿನಿಂದ ಕೈಗೆ ಹೊಡೆದು ಪರಾರಿಯಾದರು.
ಗಾಯಗೊಂಡ ವಿನೋದ್‌ಕುಮಾರ್ ಅವರು ಸಿಎಂಹೆಚ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಪ್ರಕರಣ ದಾಖಲಿಸಿರುವ ರಾಮಮೂರ್ತಿನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.