ಬೆಂಗಳೂರು, ಜ.30-ಜ್ಯೋತಿಷಿ ಆನಂದ್ ಗುರೂಜಿ ಅವರ ಮನೆ ಮುಂದೆ ಬೆಳ್ಳಂಬೆಳಗ್ಗೆ ಅನುಮಾನಾಸ್ಪದ ಬಾಕ್ಸ್ ಪತ್ತೆಯಾಗಿ ಕೆಲಕಾಲ ಆತಂಕ ಸೃಷ್ಟಿ ಮಾಡಿತ್ತು. ಬನಶಂಕರಿ 3ನೆ ಹಂತ, 5ನೆ ಬ್ಲಾಕ್, ಕಾಮಾಕ್ಯ ಥಿಯೇಟರ್ ಬಳಿಯ ಮನೆಯಲ್ಲಿ ಆನಂದ್ ಗುರೂಜಿ ಅವರು ವಾಸವಿದ್ದಾರೆ. ರಾತ್ರಿ 11.30ರಲ್ಲಿ ಗುರೂಜಿ ಅವರು ಮನೆಗೆ ಬಂದಿದ್ದು, ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ಕಾರ್ಯಕ್ರಮಕ್ಕೆ ಹೋಗಲು ಹೊರಗೆ ಬಂದಿದ್ದಾರೆ.
ಆಗ ಕಾರಿಡಾರ್‌ನ ಗೇಟ್ ಬಳಿ ರಟ್ಟಿನ ಬಾಕ್ಸ್ ಅನುಮಾನಾಸ್ಪದವಾಗಿ ಇಟ್ಟಿರುವುದು ಕಂಡಿದೆ. ಇದರಿಂದ ಆತಂಕಕ್ಕೊಳಗಾದ ಗುರೂಜಿಯವರು ಚೆನ್ನಮ್ಮನ ಕೆರೆ ಅಚ್ಚುಕಟ್ಟೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಅದರಲ್ಲಿ ಥರ್ಮಾಕೋಲ್‌ನ ನಡುವೆ ಲಕ್ಷ್ಮಿ ಪಟಾಕಿಗೆ 4 ಆಟಂಬಾಂಬ್ ಸುತ್ತಿ ಕಟ್ಟಿರುವುದು ಕಂಡಿದೆ. ಅಲ್ಲದೆ ಪತ್ರವೊಮದು ಸಿಕ್ಕಿದೆ. ಪತ್ರದಲ್ಲಿ ನೀವು ದನಗಳ ಸಂರಕ್ಷಣೆ ಬಗ್ಗೆ ಮಾತನಾಡುತ್ತಿದ್ದೀರ. ಇದರಿಂದ 14 ರಂದು ದನ ಕಡಿಯಲು ಆಗಲಿಲ್ಲ. ಇನ್ನು 15 ದಿನದಲ್ಲಿ ದನ ಬಲಿ ಕೊಡುತ್ತೇವೆ ಎಂದು ಎಡಗೈಲಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟಾಕಿ, ಬಾಕ್ಸ್ ಹಾಗೂ ಪತ್ರವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗುರೂಜಿ ಅವರ ಮನೆ ಹೊರಗೆ ಸಿಸಿ ಟಿವಿ ಅಳವಡಿಸಿದ್ದರಾದರೂ ಅದು 4 ದಿನಗಳಿಂದ ಕೆಟ್ಟು ಹೋಗಿದ್ದು, ಯಾವುದೇ ದೃಶ್ಯ ಸೆರೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್‌ರೆಡ್ಡಿ, ಡಿಸಿಪಿ ಲೋಕೇಶ್‌ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನಾಥವಾಗಿ ಬಿದ್ದಿದ್ದ ಖಾಲಿ ಸೂಟ್‌ಕೇಸೊಂದು ನಿನ್ನೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ಬೆನ್ನಲ್ಲೇ ಬೆಳ್ಳಂಬೆಳಗ್ಗೆ ಕಾಮಾಕ್ಯ ಬಳಿ ಬಾಕ್ಸ್ ಆತಂಕದ ವಾತಾವರಣ ನಿರ್ಮಾಣ ಮಾಡಿತ್ತು. ಸಂಕ್ರಾಂತಿ ಹಬ್ಬದಂದು ಸದಾಶಿವನಗರದ ಕಾವೇರಿ ಜಂಕ್ಷನ್ ಬಳಿ ಅನುಮಾನಾಸ್ಪದ ಬಾಕ್ಸ್ ಪತ್ತೆಯಾಗಿ ಕೆಲಕಾಲ ಆತಂಕ ಸೃಷ್ಟಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.