ಕರ್ನಾಟಕ

ತಾಂಜೇನಿಯ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣದಲ್ಲಿ 5 ಮಂದಿ ಬಂಧನ : ಸಿದರಾಮಯ್ಯ

Pinterest LinkedIn Tumblr

CM-Siddaramaiah

ಬೆಂಗಳೂರು, ಫೆ.: ತಾಂಜೇನಿಯ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಇಂದು ಪ್ರಕರಣ ದಾಖಲಿಸಲಾಗಿದ್ದು, ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದಾರಾಮಯ್ಯ ಹೇಳಿದ್ದಾರೆ.

ಇನ್‌ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಕರಣ ದಾಖಲಿಸಲು ವಿಳಂಬವಾಗಿರುವ ಕುರಿತು ಅಧಿಕಾರಿಗಳಿಂದ ವರದಿ ಕೇಳಲಾಗಿದೆ. ವಿಳಂಬ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. ಈ ಕುರಿತು ರಾಜ್ಯ ಸರ್ಕಾರ ಕೇಂದ್ರ ವಿದೇಶಾಂಗ ಸಚಿವರಿಗೆ ವರದಿ ಕಳುಹಿಸಲಿದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಹೈಕಮಾಂಡ್ ತಾಂಜೇನಿಯ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣ ಕುರಿತು ವರದಿ ಕೇಳಿಲ್ಲ. ಎಲ್ಲದಕ್ಕೂ ಹೈಕಮಾಂಡ್ ವರದಿ ಕೇಳುತ್ತದೆ ಎಂದು ಭಾವಿಸಿಕೊಳ್ಳುವುದು ಸರಿಯಲ್ಲ. ಇದು ಮಾಧ್ಯಮದವರೇ ಹುಟ್ಟು ಹಾಕುವ ಪ್ರಶ್ನೆ, ಪರಮೇಶ್ವರ್ ನಾಯಕ್ ಪ್ರಕರಣದಲ್ಲೂ ಹೈಕಮಾಂಡ್ ವರದಿ ಕೇಳಿರಲಿಲ್ಲ ಎಂದು ಸಿಎಂ ಹೇಳಿದರು.

ಸಚಿವ ಪರಮೇಶ್ವರ್ ನಾಯಕ್ ಪ್ರಕರಣದಲ್ಲಿ ಅನುಪಮಾ ಶೆಣೈ ಅವರು ಅನ್ಯ ಸೇವೆ (ಒಒಡಿ) ಮೇಲೆ ನಿಯೋಜಿಸಲಾಗಿತ್ತು. ವ್ಯಾಪಕ ಚರ್ಚೆಯಾದ ನಂತರ ಉನ್ನಾತಾಧಿಕಾರಿಗಳು ಸಮಾವೇಶ ನಡೆಸಿ ಮರು ನಿಯೋಜನೆ ಮಾಡಿದ್ದಾರೆ ಎಂದು ತಿಳಿಸಿದರು. ಆದರೆ, ಪರಮೇಶ್ವರ್ ನಾಯಕ್ ಅವರೇ ಅನುಪಮಾ ಶೆಣೈ ಅವರನ್ನು ವರ್ಗಾವಣೆ ಮಾಡಿಸಿದ್ದೇನೆ ಎಂದು ಹೇಳಿದ್ದರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಒಒಡಿ ಆಗಿರುವುದು ಅವರಿಗೆ ಗೊತ್ತಿಲ್ಲ ಎಂದರು.

ತಕ್ಷಣದ ಮಾತು ಬದಲಿಸಿದ ಸಿಎಂ ಅವರು ಬಹುಶಃ ಪರಮೇಶ್ವರ್ ನಾಯಕ್‌ಗೆ ಒಒಡಿ ಅಥವಾ ವರ್ಗಾವಣೆ ಬಗ್ಗೆ ಮಾಹಿತಿ ಇರಲಿಲ್ಲ. ಹಾಗಾಗಿ ಹೇಳಿಕೆ ನೀಡಿದ್ದಾರೆ. ಅದು ವರ್ಗಾವಣೆಯಲ್ಲ ಎಂದುಸ್ಪಷ್ಟ ಪಡಿಸಿದರು.

ಇನ್‌ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಉದ್ಯಮಿಗಳು ಎಷ್ಟು ಗಾತ್ರದ ಬಂಡವಾಳ ಹೂಡುತ್ತಾರೆ ಎಂಬುದನ್ನು ಆಧರಿಸಿ ರಾಜ್ಯ ಸರ್ಕಾರ ಉದ್ಯಮಿಗಳ ಜತೆ ಒಪ್ಪಂದ ಮಾಡಿಕೊಳ್ಳಲಿದೆ. ಎಲ್ಲವೂ ಇನ್ನೂ ಚರ್ಚೆ ಹಂತದಲ್ಲಿದೆ ಎಂದರು. ಬೆಂಗಳೂರು ನಗರ ಸಂಚಾರ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನ್ಯೂಯಾರ್ಕ್ ಸೇರಿದಂತೆ ವಿಶ್ವದ ಎಲ್ಲಾ ಭಾಗದಲ್ಲೂ ಸಂಚಾರ ಸಮಸ್ಯೆ ಸಾಮಾನ್ಯ ಎಂದು ಪ್ರತಿಕ್ರಿಯಿಸಿದರು.

Write A Comment