ನವದೆಹಲಿ, ಫೆ.4: ತಾಂಜೇನಿಯಾದ ವಿದ್ಯಾರ್ಥಿನಿಯೊಬ್ಬಳ ಮೇಲೆ ಹಲ್ಲೆ ನಡೆಸಿ ಬಟ್ಟೆ ಹರಿದುಹಾಕಿರುವ ಘಟನೆ ಬಗ್ಗೆ ತೀವ್ರ ಕಳವಳವ್ಯಕ್ತಪಡಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರು ಘಟನೆ ಕುರಿತಂತೆ ಕೂಡಲೇ ಸಮಗ್ರ ವರದಿ ನೀಡುವಂತೆ ಸೂಚಿಸಿದ್ದಾರೆ. ತಕ್ಷಣವೇ ವಿಸ್ತೃತ ವರದಿ ನೀಡುವಂತೆ ರಾಹುಲ್‌ಗಾಂಧಿ ಕರ್ನಾಟಕ ಸರ್ಕಾರವನ್ನು ಕೇಳಿರುವುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಬೆಂಗಳೂರು ಪೊಲೀಸರು ಈ ಪ್ರಕರಣದ ಬಗ್ಗೆ ಕಠಿಣಕ್ರಮ ಕೈಗೊಳ್ಳಬೇಕು. ತಕ್ಷಣವೇ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ರಾಹುಲ್‌ಗಾಂಧಿ ಸೂಚಿಸಿದ್ದಾರೆ.
೨೧ರ ಹರೆಯದ ತಾಂಜೇನಿಯಾ ವಿದ್ಯಾರ್ಥಿನಿ ಮೇಲೆ ಜನವರಿ ೩೧ರ ರಾತ್ರಿ ಕೆಲವು ಪುಂಡರು ಹಲ್ಲೆ ಮಾಡಿ, ಮೈಮೇಲಿನ ಬಟ್ಟೆ ಹರಿದು ಕಾರಿಗೆ ಬೆಂಕಿಹಚ್ಚಿದ್ದರು. ಪುಂಡರಿಂದ ತಪ್ಪಿಸಿಕೊಂಡು ಬಸ್ ಹತ್ತುತ್ತಿದ್ದ ವಿದ್ಯಾರ್ಥಿನಿನ್ನು ಕೆಳಕ್ಕೆಳೆದು ಹಲ್ಲೆ ನಡೆಸಲಾಗಿತ್ತು. ವಿದೇಶಾಂಗ ಶಾತೆ ಸಚಿವೆ ಸುಷ್ಮಾ ಸ್ವರಾಜ್ ಕೂಡ ಈ ಘಟನೆಯನ್ನು ನಾಚಿಕೆಗೇಡು ಎಂದು ಬಣ್ಣಿಸಿದ್ದು, ವರದಿ ನೀಡುವಂತೆ ಕರ್ನಾಟಕ ಸರ್ಕಾರವನ್ನು ಕೋರಿ ಮುಖ್ಯ ಮಂತ್ರಿಯವರಿಗೆ ಸೂಚಿಸಿದ್ದಾರೆ.