ಕರ್ನಾಟಕ

ಹೆಣ್ಣು ದೇವರಿಗೆ ಶ್ರೀ ಬೇಡ.. ಶ್ರೀಮತಿ ಬೇಕು..!

Pinterest LinkedIn Tumblr

sriಬೆಂಗಳೂರು, ಫೆ.೫- ಇದೊಂದು ವಿಶೇಷ ಮನವಿ. ಆದರೂ ಸತ್ಯವೆಂದೆನಿಸುತ್ತದೆ. ಈ ಬಗ್ಗೆ ಸಾರ್ವಜನಿಕ ಚರ್ಚೆಯಾಗಬೇಕಾಗುತ್ತದೆ. ಈ ಮನವಿಯನ್ನು ಸರ್ಕಾರ ಏಕೆ ಪರಿಗಣಿಸಬಾರದು, ಇದರಲ್ಲಿರುವ ಅಂಶವನ್ನು ಏಕೆ ಅನುಷ್ಠಾನಕ್ಕೆ ತರಬಾರದು ಎಂದು ಯೋಚಿಸಬೇಕಾಗುತ್ತದೆ. ಅಂತಹ ಒಂದು ಮನವಿಯನ್ನು ಬೆಂಗಳೂರಿನ ಜಾಲಹಳ್ಳಿಯ ಎಚ್‌ಎಂಟಿ ಮುಖ್ಯರಸ್ತೆಯ ಜಲವಾಯು ಹೈಟ್ಸ್ ಅಪಾರ್ಟ್‌ಮೆಂಟ್ ನಿವಾಸಿ ಸುಧಾ ಕಾಟವಾ ಎಂಬುವವರು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅವರ ಮನವಿ ಇಷ್ಟೇ. ಕರ್ನಾಟಕ ರಾಜ್ಯದ ಹೆಣ್ಣು ದೇವತೆಗಳ ಎಲ್ಲಾ ದೇವಸ್ಥಾನಗಳಲ್ಲಿ ಶ್ರೀ ಎಂಬ ಪದವನ್ನು ತೆಗೆದು ಹಾಕಿ ಶ್ರೀಮತಿ ಎಂಬ ಪದವನ್ನು ಸೇರಿಸಬೇಕು.

ಶ್ರೀ ಎಂಬ ಪದವು ಗಂಡಸಿನ ಹೆಸರನ್ನು ಉಪಯೋಗಿಸುವ ಮುಂಚೆ, ಹಾಗೆಯೇ ಶ್ರೀಮತಿ ಎಂಬ ಪದವನ್ನು ಹೆಣ್ಣು ಮಕ್ಕಳ ಹೆಸರು ಉಪಯೋಗಿಸುವ ಮುಂಚೆ ಬಳಸುವುದು ವಾಡಿಕೆಯಾಗಿದೆ.
ಅಲ್ಲದೆ, ಇದು ಗೌರವವನ್ನು ಸೂಚಿಸುತ್ತದೆ.

ಎಲ್ಲದಕ್ಕಿಂತಲೂ ಹೆಚ್ಚಾಗಿ ಲಿಂಗವನ್ನು ಸ್ಪಷ್ಟೀಕರಿಸುತ್ತದೆ. ಎಲ್ಲ ಬಲ್ಲವರಿಗೆಲ್ಲ ಇದು ತಿಳಿದಂತಹ ವಿಚಾರವಾಗಿದೆ. ನಮ್ಮೆಲ್ಲರಿಗೂ ತಿಳಿದಂತೆ ಶ್ರೀಮಾನ್, ಶ್ರೀಯುತ, ಶ್ರೀ ಎಂಬ ಇತ್ಯಾದಿ ಪದಗಳು ಗಂಡಸರನ್ನು ಗುರುತಿಸುವ ಪದಗಳಾಗಿವೆ. ಅದೇ ರೀತಿಯಲ್ಲಿ ಶ್ರೀಮತಿ ಎಂಬ ಪದವು ಹೆಂಗಸು, ಮಹಿಳೆ, ಹೆಣ್ಣು, ವನಿತೆ ಪದಗಳನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಆದರೆ ವಿಪರ್ಯಾಸವೆಂಬಂತೆ ಹೆಣ್ಣು ದೇವತೆಗಳ ದೇವಸ್ಥಾನಗಳಲ್ಲಿ ದೇವತೆ ಹೆಸರಿನ ಮೊದಲು ಶ್ರೀ ಎಂಬ ಪದವನ್ನು ಉಪಯೋಗಿಸಲಾಗಿದೆ.

ಉದಾಹರಣೆಗೆ ಶ್ರೀ ಮೂಕಾಂಬಿಕಾ ದೇವಸ್ಥಾನ, ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಶ್ರೀ ಕಾಳಿಕಾಂಬ ದೇವಸ್ಥಾನ ಎಂಬಿತ್ಯಾದಿ ಅನಾದಿಕಾಲದಿಂದಲೂ ಹೆಣ್ಣು ಮಕ್ಕಳಿಗೆ ತಾರತಮ್ಯ ಮಾಡುತ್ತಾ ಬಂದಿರುವುದು ಒಂದು ಕಡೆಯಾದರೆ, ಆ ಒಂದು ರೂಢಿ ಹೆಣ್ಣು ದೇವತೆಗಳಲ್ಲಿಯೂ ತಾರತಮ್ಯ ಮಾಡುವುದನ್ನು ಬಿಟ್ಟಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ ಎಂಬುದು ಸುಧಾ ಕಾಟವಾ ಅವರ ಅಭಿಪ್ರಾಯವಾಗಿದೆ. ಹೆಣ್ಣು ಮತ್ತು ಗಂಡು ದೇವರುಗಳಲ್ಲಿ ಲಿಂಗ ತಾರತಮ್ಯ ಮಾಡುವುದು ಎಷ್ಟು ಸರಿ? ಶ್ರೀಮತಿ ಇರುವ ಕಡೆ ಶ್ರೀ ಎಂದು ಉಪಯೋಗಿಸುವುದು ಮತ್ತು ಶ್ರೀ ಇರುವ ಕಡೆ ಶ್ರೀಮತಿ ಎಂದು ಉಪಯೋಗಿಸಿದರೆ ಎಷ್ಟೊಂದು ಅಪಹಾಸ್ಯವಾಗುತ್ತದೆ ಅಲ್ಲವೇ? ಹಾಗೆಯೇ ಇದು ಗೊಂದಲವನ್ನೂ ಸೃಷ್ಟಿಸುತ್ತದೆ.

ಹೆಣ್ಣು ದೇವತೆಗಳ ಎಲ್ಲಾ ದೇವಸ್ಥಾನಗಳಲ್ಲಿ ಶ್ರೀಮತಿ ಎಂದು ಉಪಯೋಗಿಸುವುದರಿಂದ ಯಾರಿಗೂ, ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವುದಿಲ್ಲ. ಹೆಣ್ಣು ದೇವತೆಗಳ ಎಲ್ಲಾ ದೇವಸ್ಥಾನಗಳಲ್ಲಿ ಶ್ರೀ ಎಂಬ ಪದ ಕಿತ್ತು ಹಾಕಬೇಕು. ಉದಾಹರಣೆಗೆ ಶ್ರೀಮತಿ ಕಾಳಿಕಾಂಬ, ಶ್ರೀಮತಿ ಅನ್ನಪೂರ್ಣೇಶ್ವರಿ, ಶ್ರೀಮತಿ ಚಾಮುಂಡೇಶ್ವರಿ ಹೀಗೆ ಬದಲಾವಣೆ ಮಾಡಿ ಲಿಂಗ ತಾರತಮ್ಯ ಹೋಗಲಾಡಿಸಿ ಭಕ್ತಿ ಮತ್ತು ಗೌರವವನ್ನು ಸೂಚಿಸಬೇಕು ಎಂದು ಸುಧಾ ಕಾಟವಾ ಅವರು ಮುಜರಾಯಿ ಸಚಿವ ಮನೋಹರ್ ತಹಶೀಲ್ದಾರ್ ಅವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.
-ಕೆ.ಎಸ್. ಜನಾರ್ದನ್

Write A Comment