ಕರ್ನಾಟಕ

ಕುದೂರು ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಅಪ್ಪನ ವಿರುದ್ಧ ತೊಡೆತಟ್ಟಿನಿಂತ ಮಗ..!

Pinterest LinkedIn Tumblr

sonಮಾಗಡಿ, ಫೆ.5-ಪಕ್ಷದ ಟಿಕೆಟ್ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿರುವ ಅಪ್ಪನ ವಿರುದ್ಧ ತೊಡೆತಟ್ಟಿರುವ ಮಗ ಅಪ್ಪನನ್ನು ಬಿಟ್ಟು ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವ ಘಟನೆಗೆ ಕುದೂರು ಜಿಲ್ಲಾ ಪಂಚಾಯ್ತಿ ಸಾಕ್ಷಿಯಾಗಿದೆ. ಜೆಡಿಎಸ್ ಮುಖಂಡರಾಗಿರುವ ಕಳ್ಳಿಪಾಳ್ಯದ ವೀರಪ್ಪ ಈ ಭಾಗದ ಪ್ರಮುಖ ನಾಯಕರು. ಕಳೆದ ಹಲವಾರು ಬಾರಿ ಇಲ್ಲಿಂದ ಗೆದ್ದು ಬರುತ್ತಿದ್ದ ವೀರಪ್ಪ ಅವರಿಗೆ ಈ ಬಾರಿ ಯಾಕೋ ಜೆಡಿಎಸ್ ವರಿಷ್ಠರು ಮಣೆ ಹಾಕಲಿಲ್ಲ. ಮಾಜಿ ಶಾಸಕ ಬೆಟ್ಟಸ್ವಾಮಿಗೌಡ ಅವರ ಪುತ್ರ ಅಣ್ಣೇಗೌಡರಿಗೆ ಜೆಡಿಎಸ್ ಟಿಕೆಟ್ ಒಲಿದು ಬಂತು. ಹೀಗಾಗಿ ವೀರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಜೆಡಿಎಸ್ ಪಕ್ಷಕ್ಕೆ ಸೆಡ್ಡು ಹೊಡೆಯಲು ತೀರ್ಮಾನಿಸಿದರು.
ಕಳೆದ ಹಲವಾರು ಬಾರಿ ನನ್ನ ಕೈಹಿಡಿದಿದ್ದ ಮತದಾರರು ಈ ಬಾರಿಯೂ ಕೈ ಬಿಡುವುದಿಲ್ಲ ಎಂಬ ವಿಶ್ವಾಸದಿಂದ ಚುನಾವಣೆಗೆ ನಿಂತ ವೀರಪ್ಪ ಅವರಿಗೆ ತನ್ನ ಹೆತ್ತ ಮಗನೇ ಈಗ ಎದುರಾಳಿ ಅಭ್ಯರ್ಥಿಯ ಬೆಂಬಲಕ್ಕೆ ನಿಲ್ಲುವ ಮೂಲಕ ಅಪ್ಪನ ವಿರುದ್ಧ ಮಗನೇ ತೊಡೆ ತಟ್ಟಿದ್ದಾನೆ.
ಜೆಡಿಎಸ್ ಅಭ್ಯರ್ಥಿಯಾಗಿರುವ ಅಣ್ಣೇಗೌಡರ ಪರ ವೀರಪ್ಪ ಅವರ ಪುತ್ರ ನಾಗೇಶ್ ಅವರು ಸುತ್ತಮುತ್ತಲ ಗ್ರಾಮಗಳಲ್ಲಿ ಜೆಡಿಎಸ್ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ರಾಜಕೀಯಕ್ಕೂ ಕುಟುಂಬಕ್ಕೂ ಸಂಬಂಧವಿಲ್ಲ. ನನ್ನ ನಿಷ್ಟೆ ಏನಿದ್ದರೂ ಪಕ್ಷಕ್ಕೆ ಹೊರತು ಸಂಬಂಧಕಲ್ಲ. ಹೀಗಾಗಿ ನಾನು ಜೆಡಿಎಸ್ ಅಭ್ಯರ್ಥಿ ಅಣ್ಣೇಗೌಡರ ಪರ ಪ್ರಚಾರ ನಡೆಸುತ್ತೇನೆ ಎಂದು ನಾಗೇಶ್ ಹೇಳಿಕೆ ನೀಡುವ ಮೂಲಕ ಅಪ್ಪನಿಗೆ ಟಾಂಗ್ ನೀಡಿದ್ದಾರೆ.
ಘಟನೆ ನಂತರ ಕುದೂರು ಜಿಪಂ ಕ್ಷೇತ್ರ ಅಪ್ಪ-ಮಗನ ಕದನವೆಂದೇ ಪರಿಗಣಿಸಲ್ಪಟ್ಟಿರುವ ಹಿನ್ನೆಲೆಯಲ್ಲಿ ಈ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.
ವಿಫಲ :
ವೀರಪ್ಪರ ನಾಮಪತ್ರವನ್ನ ಹಿಂಪಡೆಯುವಂತೆ ಹಲವು ಮುಖಂಡರುಗಳು ನಿನ್ನೆಯಿಂದಲೇ ಭಾರೀ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಯಾವ ಮನವೊಲಿಕೆಗೂ ಸೊಪ್ಪು ಹಾಕದ ವೀರಪ್ಪನವರು ಶಾಸಕ ಬಾಲಕೃಷ್ಣ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಇನ್ನೊಂದೆಡೆ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಕೂಡ ನಾಮಪತ್ರ ಹಿಂಪಡೆಯುವಂತೆ ಸಾಕಷ್ಟು ಭಾರಿ ಮನವಿ ಮಾಡಿದರೂ ವೀರಪ್ಪನವರು ಮಾತ್ರ ನಾಮಪತ್ರ ವಾಪಸ್ ತೆಗೆಯುವ ಯಾವುದೇ ನಿರ್ಧಾರವನ್ನ ಮಾಡಿಲ್ಲ.

ವೀರಪ್ಪನವರು ಕುದೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದರೇ ತಮ್ಮದೇ ಆದ ವರ್ಚಸ್ಸು ಬಳಸಿ ಮತಗಳನ್ನ ಪಡೆಯಬಹುದು. ಇದರ ಹೊಡೆತ ಜೆಡಿಎಸ್ ಅಭ್ಯರ್ಥಿಗೇ ಆಗುತ್ತದೆಂದು ಮನಗಂಡಿರುವ ದಳಪತಿಗಳು ಹಗಲಿರುಗಳು ವೀರಪ್ಪರ ಮನೆಯನ್ನ ಎಡತಾಕುತ್ತಲೇ ಇದ್ದಾರೆ. ವೀರಪ್ಪರ ನಿರ್ಧಾರ ಮಾತ್ರ ಏನೆಂಬುದು ಇಲ್ಲಿಯವರೆಗೂ ನಿಗೂಢವಾಗಿಯೇ ಇದೆ. ಮಾದಿಗೊಂಡನಹಳ್ಳಿಯಲ್ಲಿ ನಡೆದ ಪ್ರಚಾರದಲ್ಲಿ ಉದ್ದೀಶ್, ಅಣ್ಣೇಗೌಡ, ಹೊನ್ನಪ್ಪ, ನಾಗೇಶ್ ಮತ್ತಿತರರು ಭಾಗವಹಿಸಿದ್ದರು.

Write A Comment