ಬೆಂಗಳೂರು: 32 ವರ್ಷದ ಯವತಿಯೊಬ್ಬಳ ಮೇಲೆ ವಿಶ್ವವಿದ್ಯಾಲಯದ ಕುಲಪತಿಯಿಂದ ಅತ್ಯಾಚಾರ ನಡೆದಿರುವ ಬಗ್ಗೆ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಪ್ರತಿಷ್ಠಿತ ಖಾಸಗಿ ಅಲಯನ್ಸ್ ವಿಶ್ವವಿದ್ಯಾಲಯದ ಕುಲಪತಿ ಮಧುಕರ್ ಜಿ ಅಂಗೂರ್ ಕಳೆದ ಎರಡು ವರ್ಷಗಳಿಂದ ಯುವತಿ ಮೇಲೆ ನಿರಂತರ ಅತ್ಯಾಚಾರ ನಡೆದಿರುವ ಬಗ್ಗೆ ಯುವತಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ಯುವತಿಯು ಇದೇ ವಿಶ್ವವಿದ್ಯಾನಿಲಯದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದು ಉನ್ನತ ಹುದ್ದೆಯಲ್ಲಿದ್ದ ಆರೋಪಿ ಮಧುಕರ್ ಜಿ ಅಂಗೂರ್ ಯುವತಿಗೆ ಬೆದರಿಸಿ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ.
ಘಟನೆಯಿಂದ ಯುವತಿಯು ಮಾನಸಿಕ ಖಿನ್ನತೆಗೊಳಗಾಗಿದ್ದಳು, ಇದನ್ನರಿತ ತಾಯಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಯುವತಿ ತಾಯಿ ನೀಡಿರುವ ದೂರಿನ ಅನ್ವಯ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಮಡಿವಾಳ ಪೊಲೀಸರು ಆರೋಪಿ ಮಧುಕರ್ ಜಿ ಅಂಗೂರ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.