ಬೆಂಗಳೂರು: ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆಲ್ಮೆಟ್ ಧರಿಸದೇ ಇದ್ದಿದ್ದಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಬೈಕ್ ರಾಲಿಯನ್ನೇ ಮೊಟಕುಗೊಳಿಸಿ ರಾಲಿಯಿಂದ ಹೊರಹೋದ ಪ್ರಸಂಗ ನಡೆಯಿತು.
ಹೆಬ್ಬಾಳ ಉಪಚುನಾವಣೆ ಕಾವು ದಿನೇ ದಿನೇ ಜೋರಾಗುತ್ತಿದ್ದು, ಭಾನುವಾರ ಮೂರೂ ರಾಜಕೀಯ ಪಕ್ಷಗಳು ಪ್ರಚಾರದಲ್ಲಿ ನಿರತವಾಗಿದ್ದವು. ಬೈಕ್ ರಾಲಿ, ರೋಡ್ ಶೋ ಸೇರಿದಂತೆ ಹಲವು ಕಾರ್ಯಕ್ರಮ ನಡೆಯಿತು.
ಕಾಂಗ್ರೆಸ್ ಬೈಕ್ ರಾಲಿಯಲ್ಲಿ ಪಾಲ್ಗೊಂಡ ಕಾರ್ಯಕರ್ತರ ಪೈಕಿ ಬಹುತೇಕರು ಹೆಲ್ಮೆಟ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅಸಮಾಧಾನ ತೋರ್ಪಡಿಸಿದ್ದಾರೆ. ’ಸಾರಿಗೆ ಸಚಿವನಾಗಿದ್ದುಕೊಂಡು ನನ್ನ ಸಮ್ಮುಖದಲ್ಲೇ ನಿಯಮ ಉಲ್ಲಂಘನೆ ನಡೆಯುವುದು ಸರಿಯಲ್ಲ. ಮಾಧ್ಯಮಗಳಲ್ಲಿ ಇದು ಪ್ರಸಾರವಾದರೆ ಪಕ್ಷಕ್ಕೂ ಮುಜುಗರವಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿ ಅಲ್ಲಿಂದ ಹೊರಟು ಹೋದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಲ್ಲದೇ ರಾಲಿ ವೇಳೆ ಸಂಚಾರ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಟೀಕಿಸಿದ ಪ್ರಸಂಗವೂ ನಡೆಯಿತು.
ಬಿಜೆಪಿ ಪ್ರಚಾರದ ವೇಳೆ ಕೇಂದ್ರ ಸಚಿವ ಸದಾನಂದ ಗೌಡ ಸೇರಿದಂತೆ ಪ್ರಮುಖರು ಪಾಲ್ಗೊಂಡು ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ ಪರವಾಗಿ ಮತಯಾಚಿಸಿದರು. ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಬೈಕ್ ರಾಲಿಯಲ್ಲಿ ಮುಖಂಡರು, ಕಾರ್ಯಕರ್ತರು ಹೆಲ್ಮೆಟ್ ಧರಿಸಿದ್ದರು.