ಬೆಂಗಳೂರು: ಕೆ.ಆರ್. ಮಾರುಕಟ್ಟೆ ಮೇಲುರಸ್ತೆಯಲ್ಲಿ ದ್ವಿಚಕ್ರ ವಾಹನಕ್ಕೆ ಆಂಧ್ರಪ್ರದೇಶದ ಸರಕು ಸಾಗಣೆ ಲಾರಿ ಡಿಕ್ಕಿ ಹೊಡೆದು ಎಂಬಿಎ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ದೊಮ್ಮಲೂರು ನಿವಾಸಿ ವಿನೋದ್ (27) ಮೃತ ವಿದ್ಯಾರ್ಥಿ. ಪಿಇಎಸ್ ಕಾಲೇಜಿನಲ್ಲಿ 3ನೇ ಸೆಮಿಸ್ಟರ್ ಓದುತ್ತಿದ್ದ ವಿನೋದ್ ಸೋಮವಾರ ಮಧ್ಯಾಹ್ನ 12.30ರಲ್ಲಿ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೈಸೂರು ರಸ್ತೆ- ಕೆ.ಆರ್.ಮಾರುಕಟ್ಟೆ ಫ್ಲೈಓವರ್ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಕೆಳಕ್ಕೆ ಬಿದ್ದ ವಿನೋದ್ ತಲೆ ಮೇಲೆ ಚಕ್ರ ಹರಿದಿದೆ. ಲಾರಿ ಚಾಲಕ ಕಾಂತರಾಜು (37) ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೆ.ಆರ್.ಮಾರುಕಟ್ಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಕ್ಕಿ ರಭಸಕ್ಕೆ ಕಳಚಿ ಬಿದ್ದ ಹೆಲ್ಮೆಟ್: ಅಪಘಾತ ಸಂದರ್ಭದಲ್ಲಿ ವಿನೋದ್ ಹೆಲ್ಮೆಟ್ ಧರಿಸಿದ್ದ. ಆದರೆ, ಸರಿಯಾಗಿ ಲಾಕ್ ಮಾಡಿಕೊಂಡಿರಲಿಲ್ಲ. ಹೀಗಾಗಿ ಡಿಕ್ಕಿ ಹೊಡೆದ ರಭಸಕ್ಕೆ ಹೆಲ್ಮೆಟ್ ಕಳಚಿಕೊಂಡು ನೆಲಕ್ಕೆ ಬಿದ್ದಾಗ ಲಾರಿ ಚಕ್ರ ತಲೆ ಮೇಲೆ ಹರಿದಿದೆ. ಒಂದು ವೇಳೆ ಹೆಲ್ಮೆಟ್ ಬೀಳದಿದ್ದರೆ ಬದುಕುಳಿಯುವ ಸಾಧ್ಯತೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.