ಬೆಂಗಳೂರು: ‘ನಮ್ಮ ಹಳ್ಳಿಗಳಲ್ಲಿ ಒಂದು ಗಾದೆ ಮಾತಿದೆ. ಮದುವೆ ಆದ ಮರುದಿನವೇ ಮಗು ಹುಟ್ಟಿತು ಅಂತ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆಯೂ ಹಾಗೆಯೇ ಆಗಿದೆ…’
ಕೇಂದ್ರ ಸರ್ಕಾರದ ಸಾಧನೆ ಬಗ್ಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದು ಹೀಗೆ.
ಹೆಬ್ಬಾಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಚೋಳನಾಯಕನಹಳ್ಳಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ಜವಹರಲಾಲ್ ನೆಹರು, ಇಂದಿರಾ ಗಾಂಧಿ ಅವರ ಕಾಲದಿಂದ ಹಿಡಿದು ಇಲ್ಲಿಯವರೆಗೆ ದೇಶದಲ್ಲಿ ಅನೇಕ ರಾಕೆಟ್‌ಗಳನ್ನು ತಯಾರಿಸಿದ್ದೇವೆ. ಮಹಾರಾಯ ಮೋದಿ ಬಂದು ರಾಕೆಟ್ ಬಿಡುಗಡೆ ಮಾಡಿದ. ನೋಡಿ, ನಮ್ಮ ಸರ್ಕಾರ ಬರುತ್ತಲೇ ರಾಕೆಟ್ ಬಿಟ್ಟೆವು, ಮಂಗಳಯಾನ ನಡೆಸಿದೆವು ಎಂದ. ಅರೆ, ಏನು ವಿಚಿತ್ರ ಇದು! ಮೋದಿ 1 ವರ್ಷ 8 ತಿಂಗಳಲ್ಲಿ ಎಲ್ಲವನ್ನೂ ಮಾಡಿದರೇ’ ಎಂದು ಅವರು ಪ್ರಶ್ನಿಸಿದರು.
‘ನಾನು ರೈಲ್ವೆ ಸಚಿವನಾಗಿದ್ದಾಗ ಮೈಸೂರಿನಿಂದ ವೈಷ್ಣೋದೇವಿಗೆ ರೈಲು ಮಂಜೂರು ಮಾಡಿಸಿದ್ದೆ. ಚುನಾವಣೆ ಘೋಷಣೆಯಾದ ಕಾರಣ ಅದನ್ನು ಉದ್ಘಾಟಿಲು ಆಗಿರಲಿಲ್ಲ. ಮೋದಿ ಉದ್ಘಾಟನೆ ಮಾಡಿದರು. ನಮ್ಮ ಸರ್ಕಾರ ಬರುತ್ತಲೇ ಮೈಸೂರಿನಿಂದ ವೈಷ್ಣೋದೇವಿಗೆ ರೈಲು ಓಡಿಸಿದೆವು ಎಂದರು. ನಿಜ, ಅವರು ಬಿಟ್ಟಿದ್ದು ರೈಲು ಮಾತ್ರ. ಉಳಿದೆಲ್ಲವನ್ನೂ ಮಾಡಿದ್ದು ನಾವು’ ಎಂದರು.
‘ಕಾಂಗ್ರೆಸ್ 60 ವರ್ಷಗಳಲ್ಲಿ ಏನೂ ಸಾಧನೆ ಮಾಡಿಲ್ಲ ಎಂದು ಪ್ರಧಾನಿಯವರ ಚೇಲಾಗಳು ಹೇಳುತ್ತಿದ್ದಾರೆ. ಮೋದಿ ಬಂದ ಬಳಿಕವೇ ಎಲ್ಲವೂ ಆಗಿದೆ ಎಂದು ಯುವಕರ ತಲೆಗೆ ತುಂಬುವ ಪ್ರಯತ್ನ ನಡೆಯುತ್ತಿದೆ. 80 ವರ್ಷ ದಾಟಿದವರಿಗೆ ಕಾಂಗ್ರೆಸ್ ಸಾಧನೆ ಏನು ಎಂಬುದು ಗೊತ್ತಿದೆ’ ಎಂದರು.
‘ಸಂವಿಧಾನ ಎಲ್ಲರಿಗೂ ಸ್ವಾತಂತ್ರ್ಯ ಕೊಟ್ಟಿದೆ. ಎಲ್ಲ ಧರ್ಮದವರಿಗೂ ಸಮಾನ ಹಕ್ಕು ಕೊಟ್ಟಿದೆ. ಯಾರೂ ಸಂವಿಧಾನಕ್ಕೆ ವಿರುದ್ಧವಾಗಿ ನಡೆಯಲಾಗದು. ಆದರೆ, ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಜನರ ಮೇಲೆ ಪ್ರಭುತ್ವ ಸಾಧಿಸಲು ಹೊರಟಿದ್ದಾರೆ. ಅದನ್ನು ತಿನ್ನಬೇಡಿ, ಆ ಬಟ್ಟೆ ಹಾಕಬೇಡಿ ಎಂದು ಹೇಳಲು ಇವರು ಯಾರು? ಜನ ಈ ಬಗ್ಗೆ ಎಚ್ಚರವಾಗಿರಬೇಕು’ ಎಂದರು.
‘ಒಳ್ಳೆಯ ದಿನಗಳನ್ನು (ಅಚ್ಛೇ ದಿನ್) ತರುವವರು ದಿನಾ ಜಗಳ ಆಡುತ್ತಿದ್ದಾರೆ. ಬಿಜೆಪಿಯ ಹಿರಿಯ ನಾಯಕರೆಲ್ಲ ಮುನಿಸಿಕೊಂಡಿದ್ದಾರೆ. ಮೋದಿಗೆ ಎಲ್ಲ ಕಡೆ ತಾನು ಹೇಳಿದ್ದೇ ನಡೆಯಬೇಕು ಎಂಬ ಸರ್ವಾಧಿಕಾರಿ ಧೋರಣೆ. ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರ ನಡೆಯುವುದಿಲ್ಲ. ಇಲ್ಲಿ ಆಡಳಿತ ಚುಕ್ಕಾಣಿ ಇರುವುದು ಜನರ ಕೈಯಲ್ಲಿ. ಜನರು ಹೇಳಿದಂತೆ ನಾಯಕರು ಕೇಳಬೇಕು’ ಎಂದರು.
‘ಕಾಂಗ್ರೆಸ್ ಯಾವುದೇ ಜಾತಿ ಮತ್ತು ಪಂಗಡದ ಪರವೂ ಅಲ್ಲ. ಮನೆಯಲ್ಲಿ ಕುಂಟರು, ಕುರುಡರೂ ಇದ್ದರೆ, ಮನೆ ಮಂದಿ ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅದೇ ರೀತಿ ರಾಜ್ಯ ಸರ್ಕಾರ ದುರ್ಬಲ ವರ್ಗದವರು, ಅಲ್ಪಸಂಖ್ಯಾತರು ಹಾಗೂ ಶಕ್ತಿ ಇಲ್ಲದವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಇದನ್ನೆ ಮುಂದಿಟ್ಟುಕೊಂಡು ಸರ್ಕಾರ ಅಹಿಂದ ಪರ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ವೃದ್ದಾಪ್ಯ ವೇತನ, ವಿದ್ಯಾಸಿರಿ, ಆಹಾರ ಭದ್ರತಾ ಕಾರ್ಯಕ್ರಮಗಳು, ವಸತಿ ಯೋಜನೆಗಳು ಎಲ್ಲ ಸಮುದಾಯಗಳಿಗೆ ತಲುಪುತ್ತಿಲ್ಲವೇ? ಸರ್ಕಾರ ನಿದ್ರೆ ಮಾಡುತ್ತಿದೆ ಎಂದು ಟೀಕಿಸುವವರಿಗೆ ಇವೆಲ್ಲವೂ ಕಾಣಿಸುವುದಿಲ್ಲವೇಕೆ ’ ಎಂದು ಅವರು ಪ್ರಶ್ನಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಏನೇ ಕಾರ್ಯಕ್ರಮ ಹಮ್ಮಿಕೊಂಡರೂ ಅದು ಬಡವರ ಪರವಾಗಿರುತ್ತದೆ’ ಎಂದರು.
ಅಭ್ಯರ್ಥಿ ಸಿ.ಕೆ.ಅಬ್ದುಲ್ ರೆಹಮಾನ್ ಷರೀಫ್, ಸಚಿವ ರಾಮಲಿಂಗಾರೆಡ್ಡಿ, ಶಾಸಕ ಬೈರತಿ ಬಸವರಾಜು, ವಿಧಾನ ಪರಿಷತ್ ಸದಸ್ಯರಾದ ಎಂ.ಆರ್.ಸೀತಾರಾಂ, ಐವನ್ ಡಿಸೋಜ, ಪಾಲಿಕೆ ಸದಸ್ಯ ಆನಂದ ಉಪಸ್ಥಿತರಿದ್ದರು.
***
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ನಾಯಕರು ಪ್ರಾಣತ್ಯಾಗ ಮಾಡಿದ್ದರು. ಸ್ವಾತಂತ್ರ್ಯಕ್ಕಾಗಿ ಆರ್‌ಎಸ್‌ಎಸ್, ಬಿಜೆಪಿಯವರ ಮನೆ ನಾಯಿಯೂ ಸತ್ತಿಲ್ಲ. ಅಂತಹವರು ದೇಶ ಪ್ರೇಮದ ಬಗ್ಗೆ ನಮಗೆ ಪಾಠ ಹೇಳುತ್ತಾರೆ
-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ