ಬೆಂಗಳೂರು,ಫೆ.10-ನಗರದ ಹೊರವಲಯದ ವರ್ತೂರಿನಲ್ಲಿರುವ ವಿಬ್‍ಗಯಾರ್ ಶಾಲೆಗೆ ಚಿರತೆ ನುಗ್ಗಿ ಸೃಷ್ಠಿಸಿದ್ದ ಆತಂಕದ ಬೆನ್ನಲ್ಲೇ ನಿನ್ನೆ ರಾತ್ರಿ ಶಾಲೆಯ ಸಮೀಪದ ಅಪಾರ್ಟ್‍ಮೆಂಟ್ ಬಳಿ ಚಿರತೆ ಪ್ರತ್ಯಕ್ಷವಾಗಿವೆ ಎನ್ನುವುದು ಕೇವಲ ವದಂತಿ ಎನ್ನುವುದು ಸ್ಪಷ್ಟವಾಗಿದೆ.
ಚಿರತೆಯ ಭಯದಲ್ಲಿರುವ ನಲ್ಲೂರಹಳ್ಳಿಯ ಲೇಬರ್ ಕಾಲೋನಿಯ ಮಹಿಳೆಯೊಬ್ಬರು ರಾತ್ರಿ ಬಹಿರ್ದೆಸೆಗೆ ಹೋದಾಗ ಚಿರತೆಯನ್ನು ನೋಡಿದ್ದಾಗಿ ಹೇಳಿದ್ದರಿಂದ ಉಂಟಾಗಿದ್ದ ವದಂತಿ ವಿಬ್‍ಗಯಾರ್ ಶಾಲೆಯ ಸುತ್ತಮತ್ತಲ ಪ್ರದೇಶಗಳಲ್ಲಿ ಹರಡಿ ಭಯಭೀತ ವಾತಾವರಣ ಉಂಟಾಗಿತ್ತು.
ಇದರ ಜೊತೆಗೆ ರಾತ್ರಿ 10.30ರ ವೇಳೆ ವಿಬ್‍ಗಯಾರ್ ಶಾಲೆಯ ಬಳಿಯ ನೀಲಗಿರಿ ತೋಪಿನ ಬಳಿ ಚಿರತೆ ಕಂಡಿದ್ದಾಗಿ ಮೊಬೈಲ್‍ನಲ್ಲಿ ತೆಗೆದ ಚಿತ್ರ ಎಂದು ಗೂಗಲ್‍ನಲ್ಲಿ ಡೌನ್ ಲೋಡ್ ಮಾಡಿ ಸ್ನೇಹಿತರಿಗೆ ಕಳುಹಿಸಿದ್ದರು.ಇದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿತು.ಸ್ಥಳೀಯರು ಅಲ್ಲಲ್ಲಿ ಪಠಾಕಿ ಸಿಡಿಸಿದರು ಸುದ್ಧಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಸ್ಥಳೀಯರ ಜೊತೆ ಗುಂಪುಗುಂಪಾಗಿ ತಡರಾತ್ರಿಯವರೆಗೆ ಶೋಧಿಸಿದರಾದರೂ ಚಿರತೆ ಕಣ್ಣಿಗೆ ಬೀಳಲಿಲ್ಲ.
ಬೆಳಿಗ್ಗೆ ಮಹಿಳೆಯು ಹೇಳಿದ್ದ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ರಾತ್ರಿ ಅಲ್ಲಿ ಚಿರತೆಯ ಒಂದು ಹೆಜ್ಜೆ ಗುರುತು ಕಾಣಿಸಲಿಲ್ಲ ಅಪಾರ್ಟ್‍ಮೆಂಟ್ ಸುತ್ತಮತ್ತನ ಪ್ರದೇಶಗಳಲ್ಲಿ ಶೋಧಿಸಲಾಯಿತಾದರೂ ಚಿರತೆ ನಿನ್ನೆ ರಾತ್ರಿ ಬಂದಿರುವ ಹೆಜ್ಜೆ ಗುರುತುಗಳು ಕಾಣಸಿಗಲಿಲ್ಲ
ವಿಬ್‍ಗಯಾರ್ ಶಾಲೆಯ ಸುತ್ತಮತ್ತಲ ಪ್ರದೇಶದಲ್ಲಿ ಎಲ್ಲೂ ಹೊಸದಾದ ಚಿರತೆಯ ಹೆಜ್ಜೆ ಗುರುತು ಕಂಡುಬಾರದಿದ್ದರಿಂದ ಇದೊಂದು ವದಂತಿಯಾಗಿದೆ,ಆದರೂ ಕಳೆದ ಫೆ.7ರಂದು ಚಿರತೆ ಕಾಣಿಸಿಕೊಂಡಿದ್ದ ಭಯದಿಂದ ಈ ರೀತಿಯ ವದಂತಿ ಹಬ್ಬಿಸಿರಬಹುದು ಆದರೂ ಕಾರ್ಯಾಚರಣೆ ಮುಂದುವರೆಸಿದ್ದೇವೆ ಎಂದು ವಲಯ ಅರಣ್ಯಾಧಿಕಾರಿ ಅರುಣ್ ಕುಮಾರ್ ಅವರು ತಿಳಿಸಿದ್ದಾರೆ.