ಕರ್ನಾಟಕ

ಬೀಗ ಹಾಕಿದ ಮನೆಗೆ ಕನ್ನ ಹಾಕುತ್ತಿದ್ದ ಅಪ್ಪ-ಮಗ!

Pinterest LinkedIn Tumblr

10-BAN-1ಬೆಂಗಳೂರು: ಆಟೋದಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಪತ್ತೆಹಚ್ಚಿ ಕಳುವಿಗೆ ಹೊಂಚುಹಾಕುತ್ತಿದ್ದ ಅಪ್ಪ-ಮಗನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

ಮಾಗಡಿರಸ್ತೆ ಚಾಮುಂಡಿನಗರದ ನಿವಾಸಿಗಳಾದ ಭಾಸ್ಕರ್‌ ಲುಂಡಿ ಮತ್ತು ಈತನ ಮಗ ಜಗನ್‌ ಬಂಧಿತ ಆರೋಪಿಗಳು. ಬಂಧಿತರಿಂದ 20 ಕೆಜಿ
ಬೆಳ್ಳಿ, ಒಂದು ಕಾರು, 2 ಬೈಕ್‌ ಹಾಗೂ 5 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಎರಡು ದಿನಗಳ ಹಿಂದೆ ಶಿವನಹಳ್ಳಿ ಜಂಕ್ಷನ್‌ ಬಳಿ ರಾತ್ರಿ ರಾಜಾಜಿನಗರ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಆ ವೇಳೆ ಆ ಮಾರ್ಗದಲ್ಲಿ ಬಂದ ಆರೋಪಿಗಳು ಪೊಲೀಸರನ್ನು ಕಂಡ ಕೂಡಲೇ ಗಲಿಬಿಲಿಗೊಂಡಿದ್ದು, ಈ ವರ್ತನೆಯಿಂದ ಅನುಮಾನಗೊಂಡು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಪ್ರಕರಣ ಬಯಲಿಗೆ ಬಂತು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಹಳೇ ಆರೋಪಿ: ಆರೋಪಿಗಳು ಮಾಗಡಿರಸ್ತೆಯ ಚಾಮುಂಡಿ ನಗರದ ನಿವಾಸಿಗಳಾಗಿದ್ದು, ಭಾಸ್ಕರ್‌ ಹಳೇ ಆರೋಪಿಯಾಗಿದ್ದು, ಶ್ರೀರಾಂಪುರ,
ಇಂದಿರಾನಗರ, ಬಸವೇಶ್ವರ ನಗರ ಪೊಲೀಸ್‌ ಠಾಣೆಯಲ್ಲಿ ಆತನ ವಿರುದ್ಧ ಕಳ್ಳತನ ಪ್ರಕರಣಗಳಿವೆ. ಕೆಲ ವರ್ಷಗಳ ಕಾಲ ಜೈಲುವಾಸ ಕೂಡ
ಅನುಭವಿಸಿದ್ದಾನೆ. ಜೈಲಿನಿಂದ ಹೊರಬಂದು ಮತ್ತದೇ ಚಾಳಿ ಮುಂದುವರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

6ನೇ ತರಗತಿವರೆಗೆ ವ್ಯಾಸಂಗ ಮಾಡಿರುವ ಮಗ ಜಗನನ್ನು ಕೂಡ ಕಳವು ಕೃತ್ಯದಲ್ಲಿ ಬಳಸಿಕೊಂಡಿದ್ದು, ವಿಜಯನಗರದಲ್ಲಿ ನಡೆದ ಮನೆ ಕಳವು
ಪ್ರಕರಣವೊಂದರಲ್ಲಿ ಪಾಲ್ಗೊಂಡಿರುವುದಾಗಿ ಮಗ ಪೊಲೀಸರೆದುರು ಬಾಯ್ಬಿಟ್ಟಿದ್ದಾನೆ. ಇವರ ಬಂಧನದಿಂದ ಇತ್ತೀಚೆಗೆ ವಿಜಯನಗರ ಪೊಲೀಸ್‌
ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣ ಒಂದು ಬಯಲಿಗೆ ಬಂದಿದೆ.

ರಾತ್ರಿ ವೇಳೆ ಮಾತ್ರ ಕಳವು
ಆರೋಪಿ ಅಪ್ಪ-ಮಗ ಇಬ್ಬರು ರಾತ್ರಿ 10 ಗಂಟೆ ನಂತರ ಆಟೋದಲ್ಲಿ ಸುತ್ತುವ ಮೂಲಕ ಕಳ್ಳತನಕ್ಕೆ ಇಳಿಯುತ್ತಿದ್ದರು. ಈ ವೇಳೆ ಬೀಗ ಹಾಕಿರುವ ಮನೆಗಳನ್ನು ಪತ್ತೆ ಹಚ್ಚುತ್ತಿದ್ದರು. ಅಲ್ಲದೇ ಯಾವುದಾದರೂ ಕುಟುಂಬ ರಾತ್ರಿ ವೇಳೆ ಮನೆ ಬೀಗ ಹಾಕುತ್ತಿರುವುದನ್ನು ಕಂಡ ಆರೋಪಿಗಳು
ಅಲ್ಲಿಯೇ ರಸ್ತೆಯಲ್ಲಿ ಆಟೋವನ್ನು ಪಕ್ಕಕ್ಕೆ ಹಾಕಿ ಒಂದೆರೆಡು ಗಂಟೆ ಕಾಯುತ್ತಿದ್ದರು. ಮನೆಗೆ ಯಾರೂ ಬರುವುದಿಲ್ಲ. ಊರು ಅಥವಾ ಕೆಲಸ ನಿಮಿತ್ತ
ಹೊರಗಡೆ ಹೋಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡು ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದರು.

ಅನಾರೋಗ್ಯವೇ ಪ್ಲಸ್‌ ಪಾಯಿಂಟ್‌
ಆರೋಪಿ ಭಾಸ್ಕರ್‌ ಈ ಹಿಂದೆ ಅನಾರೋಗ್ಯದಿಂದ ಬೆನ್ನಿನ ಹಿಂಭಾಗದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದರೆ ಪೊಲೀಸರು ಹೊಡೆಯುವುದಿಲ್ಲ ಎಂಬುದನ್ನು ಅರಿತಿದ್ದ. ಇದನ್ನೇ ಆರೋಪಿ ತನ್ನ ಬಂಡವಾಳವನ್ನಾಗಿ ಮಾಡಿಕೊಂಡಿದ್ದ. ಒಂದೊಮ್ಮೆ ಕಳವು ಪ್ರಕರಣ
ಬಯಲಿಗೆಳೆಯಲು ಬಂಧಿಸಿ, ಆರೋಪಿ ಯನ್ನು ಶಿಕ್ಷೆಗೊಳಪಡಿಸಿದರೆ, ಏನಾದರೂ ಹೆಚ್ಚುಕಮ್ಮಿ ಆದೀತು ಎಂಬ ಆತಂಕ ಪೊಲೀಸರಿಗೆ. ಇದನ್ನೇ ಪ್ಲಸ್‌ ಪಾಯಿಂಟ್‌ ಮಾಡಿಕೊಂಡ ಭಾಸ್ಕರ್‌ ಕಳ್ಳತನ ಕೃತ್ಯದಲ್ಲಿ ಪದೇ ಪದೇ ತೊಡಗುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
-ಉದಯವಾಣಿ

Write A Comment