ಬೆಂಗಳೂರು: ಟಿಕೆಟ್ ವಿಚಾರಕ್ಕೆ ಪ್ರಯಾಣಿಕ ಹಾಗೂ ಖಾಸಗಿ ಬಸ್ ನಿರ್ವಾಹಕನ ನಡುವೆ ಆರಂಭವಾದ ಜಗಳ, ಆ ಪ್ರಯಾಣಿಕನ ಸಾವಿನೊಂದಿಗೆ ಅಂತ್ಯಕಂಡ ಘಟನೆ ಬನ್ನೇರುಘಟ್ಟ ರಸ್ತೆಯಲ್ಲಿ ಮಂಗಳವಾರ ನಡೆದಿದೆ.
ತಿಲಕ್‌ನಗರ ಸಮೀಪದ ಕೃಷ್ಣಪ್ಪ ಗಾರ್ಡನ್ ವಾಸಿ ರಿಯಾಜ್ ಖಾನ್ (23) ಮೃತಪಟ್ಟವರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಅವರು ಖಾಸಗಿ ಬಸ್‌ನಲ್ಲಿ ಮೈಕೊಲೇಔಟ್‌ಗೆ ಹೋಗುತ್ತಿದ್ದರು. ಆಗ ಜಗಳವಾದಾಗ ರಿಯಾಜ್ ಅವರನ್ನು ಕಂಡಕ್ಟರ್ ಸುಧಾಕರ್ ರೆಡ್ಡಿ ಬಸ್‌ನಿಂದ ತಳ್ಳಿದ್ದಾನೆ. ಆಗ ಹಿಂದಿನಿಂದ ಬಂದ ಬಿಎಂಟಿಸಿ ಬಸ್ ಅವರ ಮೇಲೆ ಹರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
₹ 4ಕ್ಕೆ ಜಗಳ: ‘ರಿಯಾಜ್ ಅವರು ಮಂಗಳವಾರ ಬೆಳಿಗ್ಗೆ ಸ್ನೇಹಿತ ಜಮಾಲ್ ಜತೆ ಬಿಸ್ಮಿಲ್ಲಾನಗರಕ್ಕೆ ಬಂದಿದ್ದರು. ಕೆಲಸದ ನಿಮಿತ್ತ ಅಲ್ಲಿಂದ ಮೈಕೊಲೇಔಟ್‌ಗೆ ಹೋಗಲು ಇಬ್ಬರೂ ಸಿಟಿ ಮಾರ್ಕೆಟ್– ಆನೇಕಲ್ ಮಾರ್ಗದ ‘ಶ್ರೀ ಲಕ್ಷ್ಮಿ ವೆಂಕಟೇಶ್ವರ’ ಬಸ್ ಹತ್ತಿದ್ದರು. ಈ ವೇಳೆ ಟಿಕೆಟ್ ಪಡೆದ ರಿಯಾಜ್, 4 ರೂಪಾಯಿ ಚಿಲ್ಲರೆ ಕೊಡಲಿಲ್ಲವೆಂದು ಕಂಡಕ್ಟರ್ ಜತೆ ಜಗಳ ಪ್ರಾರಂಭಿಸಿದ್ದರು’ ಎಂದು ಪೊಲೀಸರು ವಿವರಿಸಿದ್ದಾರೆ.
‘ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಕಂಡಕ್ಟರ್ ಕೊರಳ ಪಟ್ಟಿ ಹಿಡಿದು ರಿಯಾಜ್ ಅವರನ್ನು ತಳ್ಳಿದ್ದಾನೆ. ಆ ಸಂದರ್ಭದಲ್ಲಿ ಬಸ್ಸಿನ ಬಾಗಿಲು ಹಾಕಿರದ ಕಾರಣ ರಿಯಾಜ್ ಸೀದಾ ಹೊರಗೆ ಬಿದ್ದಿದ್ದಾರೆ. ಅದೇ ಸಮಯಕ್ಕೆ ಹಿಂದೆ ಬರುತ್ತಿದ್ದ ಬಿಎಂಟಿಸಿ ಬಸ್, ಅವರ ಮೇಲೆ ಹರಿದಿದೆ. ‘ಗಾಯಾಳುವನ್ನು ಸ್ಥಳೀಯರು ಹಾಗೂ ಸಹ ಪ್ರಯಾಣಿಕರು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರಿಯಾಜ್ ಅವರು ಪ್ರಾಣಬಿಟ್ಟರು.
ಮೂವರ ಬಂಧನ: ಘಟನೆ ಸಂಬಂಧ ಖಾಸಗಿ ಬಸ್ ಚಾಲಕ ಶಿವಕುಮಾರ್, ನಿರ್ವಾಹಕ ಸುಧಾಕರ್ ರೆಡ್ಡಿ ಹಾಗೂ ಬಿಎಂಟಿಸಿ ಬಸ್ ಚಾಲಕ ಮೂರ್ತಿ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.
‘ಉದ್ದೇಶಪೂರ್ವಕವಲ್ಲ’
‘ಮೃತ ರಿಯಾಜ್, ಸಿದ್ದಯ್ಯ ರಸ್ತೆಯಲ್ಲಿರುವ ಕಬ್ಬಿಣ ಬಿಡಿ ಭಾಗಗಳ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಉದ್ದೇಶಪೂರ್ವಕವಾಗಿ ಹೊರಗೆ ತಳ್ಳಲಿಲ್ಲ ಎಂದು ಕಂಡಕ್ಟರ್ ಹೇಳಿಕೆ ಕೊಟ್ಟಿದ್ದಾನೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.