ಬೆಂಗಳೂರು, ಫೆ.11-ಸ್ವಂತ ಉದ್ಯೋಗ ಮಾಡಲು ಸ್ನೇಹಿತರೊಂದಿಗೆ ಸೇರಿ ಪರಿಚಯಸ್ಥರ ಮನೆಯನ್ನೇ ಲೂಟಿ ಮಾಡಿದ್ದ ಯುವತಿ ಸೇರಿ ಆರು ಮಂದಿಯನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಆನಂದ್ (25), ಪವನ್‌ಕುಮಾರ್ (19), ಭರತ್ (18), ರೇವಣ್ಣ (20), ಅಶ್ವಿನಿ (20) ಮತ್ತು ಚರಣ್ (19) ಬಂಧಿತ ದರೋಡೆಕೋರರಾಗಿದ್ದು, ಇವರಿಂದ 80 ಸಾವಿರ ಬೆಲೆಯ ಚಿನ್ನಾಭರಣ ಹಾಗೂ ಮೊಬೈಲ್ ಮತ್ತು ಕೃತ್ಯಕ್ಕೆ ಬಳಸಿದ್ದ ಡ್ರಾಗರ್, ಟಾಟಾ ಇಂಡಿಕಾ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಪ್ರಮುಖ ಆರೋಪಿ ಅಶ್ವಿನಿ ಮೂಲತಃ ಬೀದರ್‌ನವರಾಗಿದ್ದು, ಅಲ್ಲಿಂದ ಬೆಂಗಳೂರಿಗೆ ಬಂದು ವಾಸವಾಗಿದ್ದಳು. ಈಕೆಯ ಜೊತೆ ಆನಂದ್, ಪವನ್‌ಕುಮಾರ್, ಭರತ್ ಎಂಬುವರು ಮನೆ ಬಿಟ್ಟು ಈಕೆಯೊಂದಿಗೆ 15-20ದಿನಗಳಿಂದ ವಾಸವಾಗಿದ್ದರು. ಆನಂದ್ ತನ್ನ ಕಾರಿನ ಲೋನ್ ಕಟ್ಟಲು ಹಣಕ್ಕಾಗಿ ಪರದಾಡುತ್ತಿದ್ದನು. ಅದೇ ರೀತಿ ಪವನ್‌ಕುಮಾರ್ ಸ್ವಂತ ಡ್ಯಾನ್ಸ್ ಕ್ಲಾಸ್ ತೆರೆಯಲು ಹಣ ಅವಶ್ಯಕತೆ ಇರುವುದನ್ನು ಅಶ್ವಿನಿಗೆ ಹೇಳಿಕೊಂಡಿದ್ದನು.
ಬೇರೆ ಮನೆ ಮಾಡಲು ಅಶ್ವಿನಿಗೂ ಸಹ ಹಣದ ಅವಶ್ಯಕತೆ ಇದ್ದುದರಿಂದ ಈ ಮೂವರು ತಮ್ಮ ಮೂವರು ಸ್ನೇಹಿತರೊಂದಿಗೆ ಸೇರಿ ದರೋಡೆಗೆ ಸಂಚು ರೂಪಿಸಿ ಸುಲಭವಾಗಿ ಹಣ ಸಂಪಾದನೆ ಮಾಡಲು ನಿರ್ಧರಿಸಿದ್ದಾರೆ. ಅದರಂತೆ ಅಶ್ವಿನಿಗೆ ಈ ಹಿಂದೆ ಪರಿಚಯವಿದ್ದ ದೊಡ್ಡಕಲ್ಲಸಂದ್ರ ನಾರಾಯಣನಗರದ ನಿವಾಸಿ ರಾಜೇಶ್ವರಿ ಎಂಬುವರಿಗೆ ಈಕೆ ಕರೆ ಮಾಡಿ ತಾನು ತನ್ನ ಪ್ರೇಮಿ ಜೊತೆಯಲ್ಲಿ ಬರುತ್ತಿದ್ದೇನೆ. ನಮಗೆ ಒಂದು ದಿನ ನಿಮ್ಮ ಮನೆಯಲ್ಲಿ ತಂಗಲು ಅವಕಾಶ ಮಾಡಿಕೊಡಬೇಕೆಂದು ತಿಳಿಸಿದ್ದಾಳೆ. ಇದನ್ನು ನಂಬಿದ ರಾಜೇಶ್ವರಿ ಅವರು ಬರುವಂತೆ ತಿಳಿಸಿದ್ದಾರೆ.
ಫೆ.2ರಂದು ಈ ಆರೂ ಮಂದಿ ಸಂಜೆ 7.45ರಲ್ಲಿ ಇಂಡಿಕಾ ಕಾರಿನಲ್ಲಿ ಇವರ ಮನೆ ಬಳಿ ಬರುತ್ತಾರೆ. ಮೊದಲು ಅಶ್ವಿನಿ ಕಾರಿನಿಂದ ಇಳಿದು ರಾಜೇಶ್ವರಿ ಮನೆಗೆ ಹೋಗಿ ಕುಶಲೋಪರಿ ವಿಚಾರಿಸುವ ನಾಟಕವಾಡುತ್ತಿದ್ದಾಗ ಕೆಲ ಸಮಯದ ಬಳಿಕ ಕಾರಿನಲ್ಲಿದ್ದ ಉಳಿದವರು ಏಕಾಏಕಿ ಮನೆಗೆ ನುಗ್ಗಿ ರಾಜೇಶ್ವರಿ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಡ್ರಾಗರ್‌ನಿಂದ ಹಲ್ಲೆ ನಡೆಸಿ ಅವರ ಬಳಿ ಇದ್ದ ಚಿನ್ನಾಭರಣ, ಮೊಬೈಲ್ ದರೋಡೆ ಮಾಡಿ ಇಂಡಿಕಾ ಕಾರಿನಲ್ಲೇ ಪರಾರಿಯಾಗಿದ್ದರು. ಈ ಸಂಬಂಧ ರಾಜೇಶ್ವರಿ ಸುಬ್ರಹ್ಮಣ್ಯಪುರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ರಾಜೇಶ್ವರಿ ಮನೆಗೆ ಬಂದಿದ್ದ ಅಶ್ವಿನಿ ಮೇಲೆಯೇ ಸಂಶಯ ವ್ಯಕ್ತಪಡಿಸಿ ತೀವ್ರ ಕಾರ್ಯಾಚರಣೆ ನಡೆಸಿದಾಗ ಆರೂ ಮಂದಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.