ಸಾವಿನಂಚಿನಲ್ಲೂ ಕೊನೇಕ್ಷಣದ ಹೋರಾಟ ನಡೆಸಿದ್ದ ಹನುಮಂತಪ್ಪ ಕೊಪ್ಪದ ಜನಿಸಿದ್ದು 1982 ಜೂನ್ 1ರಂದು. ಕಡು ಬಡತನ ಕುಟುಂಬದಿಂದ ಬೆಳೆದು ಬಂದ ಇವರು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ಹನುಮಂತಪ್ಪ ಅವರಿಗೆ ಗೋವಿಂದಪ್ಪ, ಮಂಜಪ್ಪ, ಬಸಪ್ಪ ಎಂಬ ಮೂವರು ಸಹೋದರರು ಮತ್ತು ಓರ್ವ ಸಹೋದರಿ.
ಹುಬ್ಬಳಿಯ ಬೆಟದೂರಿನ ರೈತ ಕುಟಂಬದವರು. ತಮಗೆ ಇದ್ದಂತಹ 1.5 ಎಕರೆಯಲ್ಲಿ ಬೆಳೆ ಬೆಳೆದು ಬಂದ ಪಸಲನ್ನು ಜೀವನೋಪಾಯಕ್ಕೆ ಬಳಸುತ್ತಿದ್ದರು. ವಿದ್ಯಾಭ್ಯಾಸದ ಸಂದರ್ಭದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಅನುಭವಿಸಿದ್ದರು. ಬಾಲ್ಯದಲ್ಲೇ ಹೈಸ್ಕೂಲ್ ವ್ಯಾಸಂಗಕ್ಕಾಗಿ ಪ್ರತಿ ದಿನ ಬೆಟದೂರಿನಿಂದ 6 ಕಿ.ಮೀ ದೂರದಲ್ಲಿರುವ ಶಾಲೆಗ ತೆರಳಬೇಕಿತ್ತು.
ಕುಂದಗೋಳ ತಾಲೂಕಿನ ಶಿರೂರಿನಲ್ಲಿ 1ರಿಂದ 5ನೇ ತರಗತಿ ವ್ಯಾಸಂಗ ಮಾಡಿದ್ದು, ಬೆಟದೂರಿನಲ್ಲಿ 5ರಿಂದ 7 ರವರೆಗೆ, ಅರಳಿಕಟ್ಟಿ ಗ್ರಾಮದಲ್ಲಿ ಹೈಸ್ಕೂಲ್, ನೂಲ್ವಿಯಲ್ಲಿ ಪಿಯುಸಿ ಅಧ್ಯಯನ ಮಾಡಿದರು.
ಚಿಕ್ಕಂದಿನಿಂದಲೂ ಸೇನೆ ಸೇರಬೇಕು ಎಂಬ ಆಸೆ ಹೊಂದಿದ್ದ ಹನುಮಂತಪ್ಪ, ಗದಗ, ಧಾರವಾಡ ಮತ್ತು ಬೆಳಗಾವಿಯಲ್ಲಿ ನಡೆದ ಸೇನಾ ನೇಮಕಾತಿಯಲ್ಲಿ 8 ಬಾರಿ ತಿರಸ್ಕೃತಗೊಂಡಿದ್ದರು.
ಆಗ ಕುಟುಂಬವರು ಮತ್ತು ಸ್ನೇಹಿತರು ಸೇನೆ ಸೇರುವ ಆಸೆ ಬಿಟ್ಟು ಬಿಡು. ಬೇರೆ ಉದ್ಯೋಗಕ್ಕೆ ಸೇರಿಕೋ ಎಂದು ಒತ್ತಡ ಹೇರಿದ್ದರು. ಕೊಪ್ಪದ್ ಅವರು ಎಸ್ ಎಸ್ ಎಲ್ ಸಿ ಮುಗಿಸಿದ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಸಾಕಷ್ಟು ಉದ್ಯೋಗಗಳಿಗೆ ಅವಕಾಶವಿತ್ತು.
ಆದರೆ, ಇದಕ್ಕೆ ಒಪ್ಪದ ಹನುಮಂತಪ್ಪ ಸೇನೆ ಸೇರುವ ಛಲ ಬಿಡಲಿಲ್ಲ. ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಾದರೆ ಮಾತ್ರ ಕೊಪ್ಪದ ಮನೆಯಲ್ಲೇ ಹಣ ಕೇಳುತ್ತಿದ್ದರು. ಇನ್ಯಾವ ಸಂದರ್ಭದಲ್ಲಿ ಹಣ ನೀಡುವಂತೆ ಮನೆಯಲ್ಲಿ ಒತ್ತಾಯಿಸಿರಲಿಲ್ಲವಂತೆ. ಕೊನೆಗೆ 2002 ಅಕ್ಟೋಬರ್ 25ರಂದು ಮದ್ರಾಸ್ ರೆಜಿಮೆಂಟ್ ಗೆ ನೇಮಕಗೊಂಡರು. 2013ರಲ್ಲಿ ಮಹಾದೇವಿ ಜತೆ ವಿವಾಹವಾಗಿದ್ದ ಹನುಮಂತಪ್ಪ ದಂಪತಿಗಳಿಗೆ ಒಂದೂವರೆ ವರ್ಷದ ಓರ್ವ ಪುತ್ರಿ ಇದ್ದಳು.
14 ವರ್ಷದ ಸೈನಿಕ ಸೇವೆಯಲ್ಲಿ 10 ವರ್ಷಗಳ ಕಾಲ ದೇಶದ ಅತ್ಯಂತ ಕಠಿಣ ಸ್ಥಳಗಳಲ್ಲಿ ಕಾರ್ಯನಿರ್ವಹಿಸಿದ್ದರು. 2003ರಿಂದ 2006 ತನಕ ಜಮ್ಮು ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 2008ರಿಂದ 2010ರವರೆಗೆ ಮದ್ರಾಸ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸಿ, 2010ರಿಂದ 2012ರವರಿಗೆ ಈಶಾನ್ಯ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2015ರಿಂದ ಸಿಯಾಚಿನ್ ನಲ್ಲಿ ಸೇವೆ ಆರಂಭಿಸಿದ್ದರು. ಫೆಬ್ರವರಿ 3ರಂದು ಹಿಮ ಕುಸಿತದಿಂದಾಗಿ ನಾಪತ್ತೆಯಾಗಿದ್ದ ಹನುಮಂತಪ್ಪ, ಫೆಬ್ರವರಿ 9ರಂದು ಪತ್ತೆಯಾಗಿ, ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಾಗಿ, ನಿನ್ನೆ ಕೊನೆಯುಸಿರೆಳೆದರು.