ಧಾರವಾಡ: ಧಾರವಾಡ ತಾಲೂಕಿನ ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯೋಗೀಶ್ ಗೌಡ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಯೋಗೀಶ್ ಗೌಡ ಬಿಡುಗಡೆಗೆ ಒತ್ತಾಯಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಶೆಟ್ಟರ್ ಹಾಗೂ ಜೋಶಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಕೆಲವು ಕಾರ್ಯಕರ್ತರು ಪೊಲೀಸ್ ಜೀಪ್ ಅನ್ನು ಜಖಂಗೊಳಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಜೆಪಿ ನಾಯಕರನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂಬ ಆರೋಪದ ಮೇಲೆ ಅಭ್ಯರ್ಥಿ ಯೋಗೀಶ್ ಗೌಡ ಅವರನ್ನು ಬಂಧಿಸಿ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಘಟನೆ ವಿವರ: ಕುಲಗೇರಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ರೋಣದ ಪರ ಸಭೆ ನಡೆಯುತಿತ್ತು. ಅಲ್ಲಿ ಪಿಎಸ್ ಐ ಶಿವಾನಂದ ಕಮತಗಿ ತೆರಳಿ ಸಭೆ ನಡೆದಿರುವುದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಸಭೆ ನಡೆಸಬೇಡಿರಿ ಎಂದು ತಿಳಿಸಿದರು.
ಈ ಸುದ್ದಿ ತಿಳಿಯುತ್ತಿದ್ದಂತೆಯೇ ನಾವೂ ಏಕೆ ಸಭೆ ನಡೆಸಬಾರದೆಂದು ಬಿಜೆಪಿ ಅಭ್ಯರ್ಥಿ ಯೋಗೇಶ್ ಗೌಡ ಅವರು ಅಮ್ಮಿನಬಾವಿಯ ಗಣಪತಿ ದೇವಸ್ಥನದ್ಲಲಿ ತಡರಾತ್ರಿ ಸಭೆ ನಡೆಸುತ್ತಿದ್ದಾಗ ಅಲ್ಲಿಗೆ ಬಂದು ಪಿಎಸ್‌ಐ ಒಮ್ಮೆ ಹೇಳಿದರೆ ನಿಮಗೆ ತಿಳಿಯುವುದಿಲ್ಲವೇ ಸಭೆ ಏಕೆ ಮಾಡುತ್ತಿದ್ದೀರಿ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದಾಗ ಕೆರಳಿದ ಯೋಗೇಶ್ ಗೌಡ ಅವರು ಒಬ್ಬರಿಗೊಂದು ನ್ಯಾಯ, ಇನ್ನೊಬ್ಬರಿಗೆ ಇನ್ನೊಂದು ನ್ಯಾಯವೇಕೆ? ಕಾಂಗ್ರೆಸ್‌ನವರು ಸಭೆ ಮಾಡಿದರೆ ಸುಮ್ಮನಿರುತ್ತೀರಿ, ಅದೇ ಬಿಜೆಪಿಯವರು ಸಭೆ ಮಾಡಿದರೆ ಏಕೆ ಅಡ್ಡಿ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಈ ನಡುವೆ ಪಿಎಸೈ ಹಾಗೂ ಯೋಗೇಶ್ ಗೌಡ ಅವರ ನಡುವೆ ಮಾತಿನ ಕಚಮಕಿ ನಡೆದು ವಿಕೋಪಕ್ಕೆ ಹೋದಾಗ ಶಿವಾನಂದ್ ಅವರು ಎಸ್.ಪಿ ಅವರ ಅನುಮತಿ ಪಡೆದು ಯೋಗೇಶ್ ಅವರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಯೋಗೇಶ್ ಗೌಡರನ್ನು 15 ದಿನಗಳ ಕಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.