ಚಿತ್ರದುರ್ಗ: ಜಿಲ್ಲೆಯ ಗುಡ್ಡದರಂಗವ್ವನಹಳ್ಳಿಯಲ್ಲಿ ಮತಗಟ್ಟೆ ಸಮೀಪದ ಬಿಜೆಪಿ ಕಾರ್ಯಕರ್ತರು ಬಹಿರಂಗ ಪ್ರಚಾರದ ನಡೆಸಿದ ಪರಿಣಾಮ ಕೈ, ಕಮಲ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.
ಘಟನೆಯಲ್ಲಿ ಐವರು ಕಾಂಗ್ರೆಸ್ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಪೋಲಿಸರು ಬೀಡು ಬಿಟ್ಟಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಗುಡ್ಡದರಂಗವ್ವನಹಳ್ಳಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಸೂರನಹಳ್ಳಿ ಗೊಲ್ಲರಹಟ್ಟಿಯ ಮತದಾನ ಕೇಂದ್ರದ ಬಳಿ ಬಿಜೆಪಿ ಕಾರ್ಯಕರ್ತರು ಪ್ರಚಾರ ಮಾಡುತಿದ್ದಾಗ ಕೈ ಕಾರ್ಯಕರ್ತರು ಆಕ್ಷೇಪಿಸಿದ ಹಿನ್ನಲೆಯಲ್ಲಿ ಈ ಗಲಾಟೆ ನಡೆದಿದೆ ಎನ್ನಲಾಗಿದೆ.
ಘಟನೆಯಿಂದಾಗಿ ಕಾಂಗ್ರೆಸ್ನ ಜಿಲ್ಲಾ ಪಂಚಾಯ್ತಿಯ ಅಭ್ಯರ್ಥಿ ಬಾಬುರೆಡ್ಡಿ ಸಹೋದರ ಹನುಮಂತರೆಡ್ಡಿ, ರಂಜಿತ್ರೆಡ್ಡಿ, ರುದ್ರಪ್ಪ, ಮಂಜುನಾಥ್ ಹಾಗೂ ತಾಲೂಕು ಪಂಚಾಯ್ತಿ ಅಭ್ಯರ್ಥಿಯ ಮಗ ಸಿದ್ದೇಶ ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಸಂಬಂಧ ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಜೆಪಿಯ ಸಿದ್ದಪ್ಪ, ನಿಂಗರಾಜು, ದೇವಮ್ಮ, ರಾಜು ಎಂಬ ಐವರು ಬಿಜೆಪಿ ಕಾರ್ಯಕರ್ತರನ್ನು ಪೋಲಿಸರು ವಶಪಡಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.