ಚಿತ್ರದುರ್ಗ: ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಂಭವಿಸಿದ ಪ್ರತ್ಯೇಕ ಮೂರು ಅಪಘಾತದಲ್ಲಿ 6ಜನ ಸಾವನ್ನಪ್ಪಿದ್ದು, 7ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಳಕು ಠಾಣೆ ವ್ಯಾಪ್ತಿಯಲ್ಲಿ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮದುವೆ ಸಮಾರಂಭ ಮುಗಿಸಿ ವಾಪಾಸ್ಸಾಗುತ್ತಿದ್ದ ನಾಲ್ವರು ಸ್ಥಳದಲ್ಲೆ ಮೃತಪಟ್ಟರೆ ಇನ್ನಿಬ್ಬರು ಗಾಯಗೊಂಡಿದ್ದಾರೆ.ತುಮಕೂರಿನ ಹೆಬ್ಬೂರು ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ 2ಅಪಘಾತದಲಿ ಬೈಕ್ ಸವಾರರಿಬ್ಬರು ಸಾವನ್ನಪ್ಪಿದಾರೆ. ಮೃತರ ಪತ್ನಿಯರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಚಿತ್ರದುರ್ಗ ವರದಿ: ದಾವಣಗೆರೆಯಲ್ಲಿ ನಡೆದ ಮದುವೆ ಸಮಾರಂಭ ಮುಗಿಸಿ ವಾಪಸ್ ಬಳ್ಳಾರಿಗೆ ತೆರಳುತ್ತಿದ್ದವರ ಇನೋವಾ ಕಾರ್‌ಗೆ ಬೆಳಗಿನ ಜಾವ 2.30ರಲ್ಲಿ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಬಳಿ ಲಾರಿಯೊಂದು ಡಿಕ್ಕಿಹೊಡೆದು ನಾಲ್ವರು ಸ್ಥಳದಲ್ಲೆ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಬಳ್ಳಾರಿಯ ಲೋಕೋಪಯೋಗಿ ಇಲಾಖೆಯ ನೌಕರರಾದ ರಾಘವೇಂದ್ರ, ಈರಬಸಯ್ಯ, ರಮೇಶ್ ಮತ್ತು ವೀರೇಶ್‌ಗೌಡ ಎಂದು ಗುರುತಿಸಲಾಗಿದೆ.ಗಾಯಗೊಂಡಿರುವ ಚಂದ್ರಬಾಬು ಮತ್ತು ವೆಂಕಟೇಶ್ ರೆಡ್ಡಿ ಎಂಬುವವರನ್ನು ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಸಂಬಂಧ ತಳಕು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತುಮಕೂರು ವರದಿ: ಸಂತೆ ಮುಗಿಸಿ ಸ್ನೇಹಿತರ ಮನೆಯಲ್ಲಿ ಊಟ ಮಾಡಿ ವಾಪಸ್ ಊರಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿಗೆ ಕಾರೊಂದು ಡಿಕ್ಕಿಹೊಡೆದ ಪರಿಣಾಮ ಪತಿ ಸಾವನ್ನಪ್ಪಿ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತುಮಕೂರು -ಕುಣಿಗಲ್ ರಸ್ತೆಯಲ್ಲಿನ ಬೂತನಹಳ್ಳಿ ಕ್ರಾಸ್ ಬಳಿ ರಾತ್ರಿ 11ಗಂಟೆ ಸುಮಾರಿನಲ್ಲಿ ಅಪಘಾತ ಸಂಭವಿಸಿದೆ. ಮಸ್ಕಲ್ ಗ್ರಾಮದ ನಿವಾಸಿ ಹನುಮಂತರಾಯಪ್ಪ (55)ಮೃತಪಟ್ಟ ನತದೃಷ್ಟ ಸವಾರ. ಇವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ಹೆಬ್ಬೂರಿನ ಸಂತೆಗೆ ಬಂದಿದ್ದ ದಂಪತಿ ಸಂತೆ ಮುಗಿಸಿ ಸ್ನೇಹಿತನ ಮನೆಯಲ್ಲಿ ಊಟ ಮಾಡಿ 10.30ಕ್ಕೆ ಬೈಕ್‌ನಲ್ಲಿ ವಾಪಸ್ ಮಸ್ಕಲ್ ಗ್ರಾಮಕ್ಕೆ ಹೊರಟಿದ್ದಾರೆ. ಈ ವೇಳೆ ಬೂತನಹಳ್ಳಿ ಕ್ರಾಸ್‌ನಲ್ಲಿ ಕಾರ್ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಮತ್ತೊಂದು ಅಪಘಾತದಲ್ಲಿ ಸಂಬಂದಿಕರ ಮನೆಯಿಂದ ಗ್ರಾಮಕ್ಕೆ ತೆರಳುತ್ತಿದ್ದ ದಂಪತಿಗೆ ವಾಹನವೊಂದು ಡಿಕ್ಕಿಹೊಡೆದು ಪರಾರಿಯಾದ ಪರಿಣಾಮ ಸವಾರ ಮೃತಪಟ್ಟು, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಬ್ಬೂರು ವಾಸಿ ಮದೀನ್(45)ಮೃತಪಟ್ಟ ನತದೃಷ್ಟ ಸವಾರ. ಈತನ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಸ್ತೆ ಪಾಳ್ಯದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ದಂಪತಿ ರಾತ್ರಿ 10.30ರಲ್ಲಿ ವಾಪಸ್ ತಮ್ಮ ಗ್ರಾಮಕ್ಕೆ ಹೊರಟಿದ್ದಾರೆ. ಈ ವೇಳೆ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಸಿಪಿಐ ರವಿಕುಮಾರ್, ಎಸ್‌ಐ ಕಿರಣ್‌ಕುಮಾರ್ ಎರಡೂ ಸ್ಥಳಗಳಿಗೂ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹೆಬ್ಬೂರು ಠಾಣೆಯಲ್ಲಿ ಎರಡೂ ಅಪಘಾತ ಪ್ರಕರಣಗಳು ದಾಖಲಾಗಿದ್ದು, ಎಎಸ್‌ಐ ರವಿಕುಮಾರ್ ತನಿಖೆ ಕೈಗೊಂಡಿದ್ದಾರೆ. ಬೈಕ್‌ಗಳ ಮುಖಾ ಮುಖಿ: ಗ್ರಾಮಾಂತರ ಠಾಣೆ ವ್ಯಾಪ್ತಿಯ ಅಂತರಸನಹಳ್ಳಿ ಸಮೀಪದ ಮೇಲ್ಸೇತುವೆ ಜಂಕ್ಷನ್ ಬಳಿ ಎರಡು ಬೈಕ್‌ಗಳು ನಡುವೆ ಮುಖಾಮುಖಿ ಸಂಭವಿಸಿ ದಂಪತಿ ಸೇರಿದಂತೆ ಮೂವರು ಗಾಯಗೊಂಡಿದಾರೆ.
ರಾಷ್ಟ್ರೀಯ ಹೆದ್ದಾರಿ 48ರಲ್ಲಿನ ಅಂತರಸನಹಳ್ಳಿ ಮೇಲ್ಸೇತುವೆ ಜಂಕ್ಷನ್‌ನಲ್ಲಿ ಬೆಳಗ್ಗೆ 9ಗಂಟೆ ಸುಮಾರಿನಲ್ಲಿ ಅಪಘಾತ ಸಂಭವಿಸಿದೆ. ಎಸ್‌ಕೆಆರ್ ಗಾರ್ಮೇಟ್‌ಗೆ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಚೆನ್ನಪ್ಪ ಮತ್ತು ಗೌರಮ್ಮ ಹಾಗೂ ಮತ್ತೊಂದು ಬೈಕ್‌ನಲ್ಲಿದ್ದ ಸೀತಾ ಗ್ರಾನೈಟ್ ಕಾರ್ಖಾನೆ ನೌಕರ ಗಂಬೀರವಾಗಿ ಗಾಯಗೊಂಡಿದ್ದಾರೆ. ಮೂವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಸಲಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.