ಬೆಳಗಾವಿ: ನಗರದ ಶಹಾಪುರದ ಎಸ್ಪಿಎಂ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, 15 ಜನರು ಗಾಯಗೊಂಡಿದ್ದಾರೆ.
ಸ್ಥಳೀಯ ಶೆಟ್ಟಿ ಗಲ್ಲಿ ನಿವಾಸಿ ರಾಜೇಂದ್ರ ಬಾಬುರಾವ್ ಪಾಟೀಲ (40) ಮೃತಪಟ್ಟವರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಏನಿದು ಪ್ರಕರಣ?
ಮಧ್ಯಾಹ್ನ 1.40ರ ಸುಮಾರಿಗೆ ರಾಸಾಯನಿಕ ಸಿಲಿಂಡರ್ಗಳನ್ನು ಹೊತ್ತ ಟಾಟಾ ಏಸ್ ವಾಹನ ಎಸ್ಪಿಎಂ ರಸ್ತೆಯಲ್ಲಿ ಸಂಚರಿಸುತ್ತಿತ್ತು. ಆದರೆ, ಗಜಾನನರಾವ್ ಭಾತಖಾಂಡೆ ಶಾಲೆಯ ಬಳಿ ಏಕಾಏಕಿ ಸಿಲಿಂಡರ್ಗಳು ಸ್ಪೋಟಗೊಂಡು, ಭಾರೀ ಶಬ್ದ ಬಂತು. ಈ ಸ್ಪೋಟಕ್ಕೆ ಸುತ್ತಲಿನ ಮನೆಗಳ ಗಾಜುಗಳು ಪುಡಿಪುಡಿಯಾದರೆ, ದ್ವಿಚಕ್ರ ವಾಹನ ಸವಾರ ರಾಜೇಂದ್ರ ನಿಯಂತ್ರಣ ತಪ್ಪಿಬಿದ್ದು ಸ್ಥಳದಲ್ಲೇ ಮೃತಪಟ್ಟರು. ಅಲ್ಲದೆ, ಆಟೋರಿಕ್ಷಾ, ಕಾರು, ದ್ವಿಚಕ್ರ ವಾಹನಗಳು ಹಾಗೂ ಅಂಗಡಿ-ಮುಂಗಟ್ಟುಗಳು ಜಖಂಗೊಂಡವು. ರಾಸಾಯನಿಕದ ಹೊಗೆಯಿಂದಾಗಿ ಸುತ್ತಮುತ್ತಲ ಹಲವರು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು, ಘಟನೆಯ ಬಗ್ಗೆ ಪರಿಶೀಲನೆ ನಡೆಸಿದರು. ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು. ಶ್ವಾನ ಪತ್ತೆದಳ, ಅಗ್ನಿಶಾಮಕ ದಳ, ವೈದ್ಯರು ಮತ್ತಿತರ ಸಿಬ್ಬಂದಿ ಘಟನಾ ಸ್ಥಳದಲ್ಲಿ ಬಿದ್ದಿದ್ದ ವಸ್ತುಗಳ ಪರಿಶೀಲನೆ ನಡೆಸಿದರು.