ನಂಜನಗೂಡು, ಫೆ.18- ಇಡೀ ರಾಜ್ಯದಲ್ಲಿ ಅಂತರ್ಜಲವನ್ನು ಹೆಚ್ಚಿಸಲು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಪ್ರಾಕಾರ ರಚನೆ ಮಾಡಿದ್ದು, ಆ ಪ್ರಾಕಾರಕ್ಕೆ 1000 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ಜಿ.ಪಂ ತಾ.ಪಂ ಚುನಾವಣೆಯ ಪ್ರಚಾರದ ಬೃಹತ್ ಸಭೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ ಕೆರೆಗಳು ಬತ್ತಿಹೋಗಿವೆ ಎಂದು ರೈತರು ಗಮನ ಸೆಳೆದಾಗ ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು 1000 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದ್ದು, ಈ ಭಾಗಕ್ಕೆ ಅಷ್ಟೇ ಅಲ್ಲ ಇಡೀ ರಾಜ್ಯದಲ್ಲಿ ಕೆರೆಗಳನ್ನು ತುಂಬಿಸುವ ಕೆಲಸವನ್ನು ಶೀಘ್ರವೇ ಮಾಡಿಸುವುದಾಗಿ ಭರವಸೆ ನೀಡಿದರು.
ಪಂಚಾಯತಿ ವ್ಯವಸ್ಥೆ ಶಕ್ತಿಯುತವಾಗಿದ್ದು, ಅಕಾರ ವೀಕೇಂದ್ರೀಕರಣವಾದಾಗ ಮಾತ್ರ ಗ್ರಾಮೀಣಾಭಿವೃದ್ಧಿ ಸಾಧ್ಯ ಎಂದ ಅವರು, ಪಂಚಾಯತಿ ವ್ಯವಸ್ಥೆಗೆ ಶಕ್ತಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವಾಗಿದೆ ಎಂದರು. ಈ ತಿಂಗಳ 20ರಂದು ನಡೆಯಲಿರುವ ತಾ.ಪಂ ಹಾಗೂ ಜಿ.ಪಂ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವದಿಸಬೇಕೆಂದು ಕೋರಿದರು. ಲೋಕೋಪಯೋಗಿ ಸಚಿವ ಹೆಚ್.ಸಿ ಮಹದೇವಪ್ಪ ಮಾತನಾಡಿ, ಮುಖ್ಯಮಂತ್ರಿಯ ಕೈ ಬಲ ಪಡಿಸಲು ಮುಂಬರುವ ಚುನಾವಣೆಯಲ್ಲಿ ತಾ.ಪಂ ಮತ್ತು ಜಿ.ಪಂ ಅಭ್ಯರ್ಥಿಗಳನ್ನು ಜಯಶೀಲರನ್ನಾಗಿ ಮಾಡಿಕೊಡಬೇಕೆಂದು ಕೋರಿದರು.
ಸಂಸದ ಆರ್.ಧ್ರುವನಾರಾಯಣ್, ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಡಾ. ವಿಜಯ್ ಕುಮಾರ್, ಮೈಸೂರು ಜಿಲ್ಲಾಧ್ಯಕ್ಷ ರವಿ ಶಂಕರ್, ಬ್ಲಾಕ್ ಅಧ್ಯಕ್ಷ ರಂಗಸ್ವಾಮಿ, ಕಲ್ಮಳ್ಳಿ ಸುರೇಶ್ ಬಾಬು, ಮಾಜಿ ಜಿ.ಪಂ ಅಧ್ಯಕ್ಷ ಧರ್ಮೇಂದ್ರ, ಜಿ.ಪಂ ಅಭ್ಯರ್ಥಿಗಳಾದ ಹದಿನಾರು ಗುರುಪಾದಸ್ವಾಮಿ, ಕೆ.ಹುಂಡಿ ಜವರಾಯಿಮಹದೇವಮ್ಮ, ದೊಡ್ಡಕವಲಂದೆ ಲತಾ ನಾಗೇಶ್, ತಗಡೂರು ಆರ್.ಸರ್ವೇಶ್, ಹಾಗೂ ತಾ.ಪಂ ಸದಸ್ಯರುಗಳು ಭಾಗವಹಿಸಿದ್ದರು.