ಬೆಂಗಳೂರು: ಇದು ಅಂತಿಂಥ ವಾಚಲ್ಲ. ಇದನ್ನು ಕಟ್ಟಿಕೊಂಡು ವೀಸಾ ಇಲ್ಲದೆ ಅರಬ್ ರಾಷ್ಟ್ರಗಳಲ್ಲಿ ಓಡಾಡಬಹುದು.
– ಸುಮಾರು ಮೂರು ದಶಕದ ಹಿಂದೆ ದಾವಣಗೆರೆಯಲ್ಲಿ ನಡೆದಿದ್ದ ಮುಸ್ಲಿಂ ಸಮುದಾಯದ ಸಭೆಯೊಂದರಲ್ಲಿ ತಮಾಷೆಗೆಂದು ಹೇಳಿದ್ದ ಈ ಮಾತುಗಳು ಆಗ ಸಚಿವರಾಗಿದ್ದ ಸಿ.ಎಂ. ಇಬ್ರಾಹಿಂ ಅವರ ಮಂತ್ರಿಗಿರಿಯನ್ನು ಕಸಿದುಕೊಂಡಿದ್ದವು.
ಆ ವೇಳೆ ಇಬ್ರಾಹಿಂ ರೋಲೆಕ್ಸ್ ವಾಚ್ ಪ್ರಕರಣವನ್ನು ಕ್ಲೈಮಾಕ್ಸ್ ಹಂತದವರೆಗೂ ಒಯ್ದಿದ್ದವರು ಆಗ ವಿಧಾನಪರಿಷತ್ ಪ್ರತಿಪಕ್ಷ ನಾಯಕರಾಗಿದ್ದ ಎ.ಕೆ. ಸುಬ್ಬಯ್ಯ. ಅಂದಿನ ಘಟನೆಯನ್ನು ಸುಬ್ಬಯ್ಯ ನೆನೆದಿದ್ದು ಹೀಗೆ.
ಇದು ಅಂತಿಂಥ ವಾಚಲ್ಲ, ದುಬೈಗೆ ಹೋಗಿದ್ದಾಗ ಅಲ್ಲಿನ ಶೇಖ್‌ಗಳು ಪ್ರೀತಿ-ಗೌರವದಿಂದ ಕೊಟ್ಟ ವಾಚಿದು. ಇದನ್ನು ಧರಿಸಿ ವೀಸಾ ಇಲ್ಲದೆ ಅರಬ್ ರಾಷ್ಟ್ರಗಳಲ್ಲಿ ಓಡಾಡಬಹುದು ಎಂದು ಇಬ್ರಾಹಿಂ ಹೇಳಿಕೊಂಡಿದ್ದರು. ಅದುವರೆಗೂ ಯಾರೂ ಇಬ್ರಾಹಿಂ ಧರಿಸಿದ್ದ ವಾಚ್ ನೋಡಿಯೂ ಇರಲಿಲ್ಲ. ಆ ವಾಚ್ ಬಗ್ಗೆ ಮಾತನಾಡಿಯೂ ಇರಲಿಲ್ಲ. ಆದರೆ, ಇಬ್ರಾಹಿಂ ತಾವೇ ಖುದ್ದಾಗಿ ಈ ಮಾತುಗಳನ್ನು ಹೇಳಿದ್ದರು.
ನಾನು ಆ ಭಾಷಣದ ರೆಕಾರ್ಡ್ ಇಟ್ಟುಕೊಂಡು, ಇಂತಹ ವಾಚ್ ಅನ್ನು ಗೂಢಚಾರಿಗಳಿಗೆ ಮಾತ್ರ ಕೊಡುವಂತದ್ದು. ಇಬ್ರಾಹಿಂ ಅವರು ಅರಬ್ ರಾಷ್ಟ್ರಗಳ ಪರ ಗೂಢಚಾರಿಕೆ ಮಾಡುತ್ತಿರಬಹುದು. ಅದಕ್ಕಾಗಿಯೇ ಅವರಿಗೆ ಇಂತಹ ವಾಚ್ ಕೊಟ್ಟಿರಬಹುದು. ವೀಸಾ ಇಲ್ಲದೆ ಅರಬ್ ರಾಷ್ಟ್ರಗಳಲ್ಲಿ ಓಡಾಡುವಂತಹ ವಾಚ್ ಮತ್ತೇಕೆ ಕೊಡಲು ಸಾಧ್ಯ ಎಂದು ಪರಿಷತ್ತಿನಲ್ಲಿ ಪ್ರಶ್ನಿಸಿದ್ದೆ.
ಜತೆಗೆ, ಬೇರೆ ರಾಷ್ಟ್ರಗಳಿಗೆ ನಮ್ಮ ರಾಜ್ಯದ ಸಚಿವರು ಹೋದಾಗ ಉಡುಗೊರೆ ಸ್ವೀಕರಿಸಬಾರದು. ಉಡುಗೊರೆ ಸ್ವೀಕರಿಸಿದರೂ ಅದನ್ನು ಸರ್ಕಾರಕ್ಕೆ ಕೊಡಬೇಕು ಎಂಬ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಾರಿಯಾಗಿದ್ದ ಕಾಯ್ದೆ ಆಗ ಇನ್ನೂ ಜಾರಿಯಲ್ಲಿತ್ತು. ಉಡುಗೊರೆ ಸ್ವೀಕರಿಸಿ ತರುವ ಮುನ್ನ ನಿಯಮಾನುಸಾರ ಸುಂಕ ಪಾವತಿ ಮಾಡಬೇಕು ಎಂಬ ನಿಯಮವೂ ಇತ್ತು. ಅದೂ ಇಬ್ರಾಹಿಂ ಅವರ ರೋಲೆಕ್ಸ್ ವಾಚ್ ವಿಷಯದಲ್ಲಿ ಪಾಲನೆಯಾಗಿರಲಿಲ್ಲ. ಈ ಎಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿದೆ. ಹೀಗಾಗಿ ಇಬ್ರಾಹಿಂ ರಾಜೀನಾಮೆ ಕೊಡಬೇಕಾಗಿ ಬಂದಿತ್ತು ಎಂದರು.
ಸಿದ್ದು ಕೇಸ್‌ಗೂ ರೋಲೆಕ್ಸ್ ಕೇಸ್‌ಗೂ ಹೋಲಿಕೆ ಇಲ್ಲ
-ಇಬ್ರಾಹಿಂ ರೋಲೆಕ್ಸ್ ವಾಚ್ ಪ್ರಕರಣಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಚ್ ಪ್ರಕರಣಕ್ಕೂ ತಕ್ಷಣಕ್ಕೆ ಹೋಲಿಕೆ ಸರಿಯಲ್ಲ. ಆಗ ಇಬ್ರಾಹಿಂ ಬಳಿ ವಾಚ್ ಇತ್ತು. ಅವರೇ ವಾಚ್ ಬಗ್ಗೆ ಹೇಳಿಕೊಂಡಿದ್ದರು. ಸದನದಲ್ಲೂ ಎಲ್ಲರೂ ನೋಡಿದ್ದರು.
ಈಗ ಮುಖ್ಯಮಂತ್ರಿ ಬಳಿ ಇರುವ ವಾಚ್ ಲಕ್ಷಾಂತರ ಮೊತ್ತದ್ದು ಎಂಬ ಮಾತುಗಳಿವೆ ಅಷ್ಟೇ. ಅದಕ್ಕೆ ದಾಖಲೆ, ರಸೀದಿ ಯಾವುದೂ ಇಲ್ಲ. ಒಂದೊಮ್ಮೆ ದಾಖಲೆ ಇದ್ದರೆ, ಸಿದ್ದರಾಮಯ್ಯ ಅಂತಹ ವಾಚ್ ಉಡುಗೊರೆಯಾಗಿ ಪಡೆದಿದ್ದೇ ಆಗಿದ್ದರೆ, ಖಂಡಿತವಾಗಿಯೂ ಸಮಜಾಯಿಷಿ ನೀಡುವ ಹೊಣೆಗಾರಿಕೆ ಅವರ ಮೇಲಿದೆ. ಯಾರು ಆ ವಾಚ್ ಕೊಟ್ಟರು, ಯಾವ ಉದ್ದೇಶಕ್ಕೆ ಕೊಟ್ಟರು, ತೆರಿಗೆ ಪಾವತಿಯಾಗಿದೆಯೇ ಎಂಬಿತ್ಯಾದಿ ಮಾಹಿತಿ ಕೊಡಲೇಬೇಕು. ಪ್ರತಿಫಲಾಪೇಕ್ಷೆ ಇಲ್ಲದೆ ಯಾರೂ ದುಬಾರಿ ವಾಚ್ ಕೊಡಲು ಸಾಧ್ಯವಿಲ್ಲವಲ್ಲ.
– ಎ.ಕೆ.ಸುಬ್ಬಯ್ಯ, ಹಿರಿಯ ಮುಖಂಡ
-ಉದಯವಾಣಿ